Shivammogga Rural Assembly Constituency ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೇನಕೊಪ್ಪ ಸೇರಿದಂತೆ ಕುಂಸಿ ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳಲ್ಲಿ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಪ್ರಚಾರ ಕಾರ್ಯ ಕೈಗೊಂಡರು.
ನೂರಾರು ಕಾರ್ಯಕರ್ತರು ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡು ಬಿಜೆಪಿಗೆ ಬೆಂಬಲ ಸೂಚಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ದಿನೇ ದಿನೇ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಹೊಸ ಮತದಾರರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಶಕ್ತಿ ಗ್ರಾಮಾಂತರ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಕ್ಷೇತ್ರದ ಮತದಾರರ ಅಪಾರ ಬೆಂಬಲದಿಂದ ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎಂದು ಗ್ರಾಮಾಂತರ ಅಭ್ಯರ್ಥಿ ಕೆ.ಬಿ.ಅಶೋಕನಾಯ್ಕ್ ಹೇಳಿದರು.
ಐದು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ನೀರಾವರಿ ಯೋಜನೆ, ರಸ್ತೆ ನಿರ್ಮಾಣ, ಮೂಲಸೌಕರ್ಯ ಸೇರಿದಂತೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಪ್ರತಿಯೊಂದು ಬೂತ್‌ಗಳಲ್ಲಿಯು ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
Shivammogga Rural Assembly Constituency ಮೇ 7ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆಯನೂರು ಗ್ರಾಮದಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಮತಯಾಚಿಸಿದರು.
ರಾಮೇನಕೊಪ್ಪ, ಹೊಸೂರು, ಹಾಯ್ ಹೊಳೆ, ಅನುಪಿನಕಟ್ಟೆ, ಗುಡ್ಡದ ಅರಕೆರೆ, ಲಂಬಾಣಿ ತಾಂಡಾ ಸೇರಿದಂತೆ ಕುಂಸಿ ಮಹಾಶಕ್ತಿ ಕೇಂದ್ರದ ವಿವಿಧ ಬೂತ್‌ಗಳಲ್ಲಿ ಪ್ರಚಾರ ನಡೆಸಲಾಯಿತು. ಯುವಜನತೆ ಶಾಸಕ ಕೆ.ಬಿ.ಅಶೋಕನಾಯ್ಕ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ, ಮಂಡಲ ಅಧ್ಯಕ್ಷ ರತ್ನಾಕರ ಶೆಣೈ, ಮಂಜುನಾಥ್ ಕಲ್ಲಜ್ಜನಾಳ್, ಗ್ರಾಮಾಂತರ ಚುನಾವಣಾ ಸಮಿತಿ ಸಂಚಾಲಕ ಸಿಂಗನಹಳ್ಳಿ ಸುರೇಶ್, ಸ್ವರೂಪ್ ಸೇರಿದಂತೆ ವಿವಿಧ ಸಮಿತಿ ಮುಖಂಡರು ಕಾರ್ಯಾಲಯದಲ್ಲಿ ಸಭೆ ನಡೆಸಿದರು. ಪ್ರಚಾರ ಕಾರ್ಯದಲ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.