KLive Special “ಇದು ಯುಗ ಯುಗದ ಜನರ ಮನೋಧರ್ಮದ ಕವಿತೆ. ನಿತ್ಯ ಸತ್ಯ ಜಗಧರ್ಮದ ವಿಷಾದದ ಭಾವಗೀತೆ. ಅಂತರ್ಜಾಲದಿ ಕಂಡ ಈ ಅನನ್ಯ ಚಿತ್ರವೇ ಈ ಮಾರ್ಮಿಕ ಕವಿತೆಗೆ ಪ್ರೇರಣವಾದದ್ದು.. ಕಾರಣವಾದದ್ದು. ಅಂದಿಗೂ ಇಂದಿಗೂ ಎಂದಿಗೂ ಈ ಲೋಕಕ್ಕೆ ಪರಿವರ್ತನೆಗೆ ಒಗ್ಗಿಕೊಳ್ಳಲು ಏನೆಲ್ಲ ಸಂಕಷ್ಟ? ಪರಿವರ್ತಕರನ್ನು ಒಪ್ಪಿಕೊಳ್ಳಲು ಅದೆಷ್ಟು ಕಷ್ಟ..?? ಏನಂತೀರಾ..???” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಜಗಧರ್ಮ..!
ಮಿಥ್ಯೆಯ ದರಬಾರಿನಲ್ಲಿ
ಸತ್ಯಕ್ಕೆ ಮರಣ ದಂಡನೆ
ಸುಳ್ಳಾಡುವವರ ಸಾಮ್ರಾಜ್ಯದಿ
ನಿಜ ನುಡಿವವನಿಗೆ ನೇಣು.!
ಬೆತ್ತಲೆಜನರ ಸಂತೆಯಲ್ಲಿ
ಬಟ್ಟೆಗೆ ಸದಾ ಬಹಿಷ್ಕಾರ
ನಗ್ನವಾದವರ ನಡುವಲ್ಲಿ
ಅರಿವೆ ತೊಟ್ಟರೆ ಕಲ್ಲೇಟು.!
ಸೈತಾನರ ನಾಡಿನಲ್ಲಿ
ಸಾಧುವಾದರೆ ಗಡಿಪಾರು
ಕಟುಕರ ಚಕ್ರಾಧಿಪತ್ಯದಲ್ಲಿ
ಕರುಣಿಯಾದರೆ ಶಿರಚ್ಚೇದನ.!
ಮೂರ್ಖರ ನಗರದಲ್ಲಿ
ಮೇಧಾವಿಗೆ ನಿತ್ಯಾಪಮಾನ
ದಡ್ಡರ ಒಡ್ಡೋಲಗದಲ್ಲಿ
ಚತುರನಿಗೆ ದಿನವು ಶಿಕ್ಷೆ.!
ಕಡುಭ್ರಷ್ಟರ ಬಜಾರಿನಲ್ಲಿ
ನಿಷ್ಟನೆಂದೂ ನಿಕೃಷ್ಟ
ವಂಚಕರ ಒಕ್ಕೂಟದಲಿ
ಪ್ರಾಮಾಣಿಕನಿಗೆ ಪ್ರತಿಕ್ಷಣ ಸಂಕಷ್ಟ.!
KLive Special ಯುಗಯುಗದಿಂದ ಹೀಗೆ
ಜಗದ ಜಾತಕದ ಬಗೆ
ತನ್ನೊಡಲ ಬೆಳಗುವ ಬೆಳಕನ್ನೇ
ಒಪ್ಪಿಕೊಳ್ಳದ ಕತ್ತಲಿನ ಹಾಗೆ.!
ಒಳಿತು ಒಳ್ಳೆಯತನಗಳಿಗೆ
ಬೆಳಕು ಬದಲಾವಣೆಗಳಿಗೆ
ಒಪ್ಪದ ಒಗ್ಗಿಕೊಳ್ಳದ ರೀತಿ
ಕ್ರಾಂತಿ ಸಂಕ್ರಾಂತಿಯಿಂದಲೇ
ಪರಿವರ್ತಿಪ ಲೋಕದ ಚಿರನೀತಿ.!
- ಎ.ಎನ್.ರಮೇಶ್. ಗುಬ್ಬಿ.