ಎಲ್ಲೆಡೆ ಹೊಸ ವರ್ಷ ಸಂಭ್ರಮ ಜೋರಾಗಿದೆ. ಇದರ ಜೊತೆಗೆ ಕೊರೋನಾ ಆತಂಕವೂ ಹೆಚ್ಚಾಗಿದೆ.
ಚೀನಾ ಸೇರಿದಂತೆ ವಿದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಂಭೀರವಾಗಿದೆ. ಇದರ ಪರಿಣಾಮ ಭಾರತದಲ್ಲಿ ಈಗಾಗಲೇ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಾಣತ್ತಿರುವುದರಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ 2ನೇ ಕೊರೋನಾ ಸ್ಥಿತಿಗತಿ ಸಭೆ ನಡೆಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತದಲ್ಲಿ ಪ್ರಕರಣಗಳು, ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.
ತಜ್ಞರು, ವೈದ್ಯರು ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಮೋದಿ ಸಭೆ ನಡೆಸಿದ್ದಾರೆ. ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ಸೋಂಕಿತರ ಚಿಕಿತ್ಸೆಗೆ ತಯಾರಿ, ಆಕ್ಸಿಜನ್ ಪೂರೈಕೆ, ವೈದ್ಯರು, ನಿರ್ಸ್ ಸೇರಿ ಕೊರೋನಾ ವಾರಿಯರ್ ಲಭ್ಯತೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ಮೋದಿ ತಜ್ಞರ ಮಹತ್ವದ ಚರ್ಚೆ ನಡೆಸಿದ್ದಾರೆ.
ಚೀನಾ, ಬ್ರೆಜಿಲ್, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೃಷ್ಟಿಯಾಗಿರುವ ಕೋವಿಡ್ ಅಲೆಯಿಂದ ಭಾರತಕ್ಕಿರುವ ಅಪಾಯ, ಭಾರತದಲ್ಲಿ ಸೃಷ್ಟಿಯಾಗಬಲ್ಲ ಕೋವಿಡ್ ಅಲೆ, ಪ್ರಕರಣ ಸಂಖ್ಯೆ, ಗಂಭೀರತೆ ಕುರಿತು ಮೋದಿ ಮಾಹಿತಿ ಪಡೆದಿದ್ದಾರೆ. ವಿದೇಶದಲ್ಲಿ ಎದ್ದಿರುವ ಅಲೆ ಭಾರತದಲ್ಲಿ ಯಾವೆಲ್ಲಾ ಪರಿಣಾಮ ಸೃಷ್ಟಿಸಲು ಸಾಧ್ಯವಿದೆ ಅನ್ನೋ ಕುರಿತು ತಜ್ಞ ವೈದ್ಯರೊಂದಿಗೆ ಮೋದಿ ಚರ್ಚೆ ಮಾಡಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇದರ ಜೊತೆಗೆ ಬೂಸ್ಟರ್ ಡೋಸ್ ಲಸಿಕೆ ಕುರಿತು ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಬೂಸ್ಟರ್ ಡೋಸ್ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಚಿಸಿದ್ದಾರೆ.
ಮೊದಲ 2 ಅಲೆಗಳ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜನರು ನೋವು ಅನುಭವಿಸಿದ್ದನ್ನು ನೋಡಿದ್ದ ಕೇಂದ್ರ ಸರ್ಕಾರ, ಈ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿದೆ. ಕೊರೋನಾ
3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಲಸಿಕಾಕಾರಣ ಹೆಚ್ಚಿರುವ ಕಾರಣ, ಆಸ್ಪತ್ರೆ ದಾಖಲಾತಿ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ದೇಶದಲ್ಲಿ ಮೂರನೇ ಅಲೆ ಯಾವುದೇ ಅಪಾಯ ಸೃಷ್ಟಿಸಿಲ್ಲ. ಈಗ 4ನೇ ಅಲೆಯನ್ನೂ ಇದೇ ರೀತಿ ಸಮರ್ಥವಾಗಿ ಎದುರಿಸಲು ಮೋದಿ ಸರ್ಕಾರ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.