ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಆಗುವಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಹಿರಿಯ ಫಿಜಿಷಿಯನ್ ಡಾ. ರಂಗಪ್ಪಗೌಡ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದಿಂದ ಹಿರಿಯ ವೈದ್ಯ ಡಾ. ರಂಗಪ್ಪಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಹಾಗೂ ಸಮಾಲೋಚನೆ ಸಂದರ್ಭದಲ್ಲಿ ಮಾತನಾಡಿದರು.
ಐಎಂಎ ಶಿವಮೊಗ್ಗ ಘಟಕ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ವೈದ್ಯರ ಸೇವೆ ಜನರಿಗೆ ಹೆಚ್ಚು ತಲುಪಲು ಶಿಬಿರಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ. ಐಎಂಎ ಶಿವಮೊಗ್ಗ ಘಟಕ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಿರುವುದು ಉತ್ತಮ ಕಾರ್ಯ ಎಂದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಎಂ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ಘಟಕವು ಪ್ರತಿ 15 ದಿನಗಳಿಗೊಮ್ಮೆ ಹಿರಿಯ ವೈದ್ಯರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುವ ಜತೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಐಎಂಎ ಘಟಕದಿಂದ ಹೊರತಂದಿರುವ ಕ್ಯಾಲೆಂಡರ್ ಅನ್ನು ಹಿರಿಯ ಫಿಜಿಷಿಯನ್ ಡಾ.ರಂಗಪ್ಪ ಗೌಡ ಅವರಿಗೆ ನೀಡಲಾಯಿತು.
ಶಿವಮೊಗ್ಗ ಐಎಂಎ ಘಟಕದ ಕಾರ್ಯದರ್ಶಿ ಡಾ. ರಕ್ಷ ರಾವ್ , ಡಾ. ನಾಗರಾಜ್, ಡಾ. ಶ್ರೀಕಾಂತ್ ಹೆಗ್ಡೆ , ಡಾ. ಸುಬ್ಬಣ್ಣ ಮತ್ತಿತರರು ಹಾಜರಿದ್ದರು.