Friday, June 20, 2025
Friday, June 20, 2025

ಎಲ್ಲರೂ ಒಟ್ಟಾಗಿ ಕಾನೂನು ಅನುಸರಿಸಿದಾಗ ಅನುಷ್ಠಾನ ಸುಲಭ- ನ್ಯಾ.ರಾಜಣ್ಣ ಸಂಕಣ್ಣನವರ್

Date:

ಸಮಾಜದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ಮಹಿಳೆಯರ ಸಂರಕ್ಷಣಾ ಕಾಯ್ದೆ ಕಾನೂನುಗಳನ್ನು ಅಚ್ಚುಕಟ್ಟಾಗಿ ಅನುಷ್ಟಾನಗೊಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿವಿಧ ಸ್ವಯಂ ಸೇವಾಸಂಸ್ಥೆಗಳ ಮತ್ತು ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ‘ಚೈತನ್ಯ’ ದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2022 ರ ಅನುಷ್ಟಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಕುರಿತು ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಕೂಡಿದಾಗ ಹೊಸ ಹೊಸ ಕಾಯ್ದೆಗಳು, ತಿದ್ದುಪಡಿಗಳು, ನಿಯಮಗಳ ಕುರಿತು ಚರ್ಚಿಸಿ, ಪರಿಣಾಮಕಾರಿಯಾಗಿ ಅವನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯವಿದ್ದು, ಕಾರ್ಯಕ್ಷೇತ್ರದಲ್ಲಿ ಎದುರಾಗುವ ಕ್ಲಿಷ್ಟಕರ ಸನ್ನಿವೇಶಗಳನ್ನು ಬಗೆಹರಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿದೆ.

ನಾವು ಕಾಯ್ದೆ ಕಾನೂನುಗಳ ಕುರಿತು ಎಷ್ಟೇ ತಿಳಿದರೂ ಕಡಿಮೆಯೇ. ಆದ್ದರಿಂದ ಇಂದು ಇಲ್ಲಿ ಭಾಗಿಯಾದ ಎಲ್ಲರೂ ಕಾಯ್ದೆಯ ಬಗ್ಗೆ ತಿಳಿದು, ಮನನ ಮಾಡಿಕೊಂಡು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದ ಅವರು ಮಹಿಳೆಯರು ಮಕ್ಕಳು ಸೇರಿದಂತೆ ಯಾವುದೇ ರೀತಿಯ ಕಾನೂನಿನ ತೊಡಕುಗಳ ಪರಿಹಾರಕ್ಕೆ ಸಹಕಾರ, ಸೌಲಭ್ಯಗಳು ಬೇಕಾದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿದಲ್ಲಿ ನಾವು ಸೇವೆಗೆ ಸದಾ ಸಿದ್ದವಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿಯ ನಿರ್ದೇಶಕರಾದ ಫಾ.ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿ, ಕಲಿಕೆಯು ಸದಾ ನಮ್ಮ ಬಾಳ ಪಯಣದ ಸಂಗಾತಿ ಇದ್ದಂತೆ. ನಾವು ನಿರಂತರ ಕಲಿಕೆಯಲ್ಲಿ ತೊಡಗಿರಬೇಕು. ಕಲಿಕೆ ಮುಗಿದ ದಿನ ಸಾವು ಬಂದಂತೆ ಎಂದು ಭಾವಿಸಬಹುದು. ಸೇವೆ ನೀಡುವವರಿಗೆ ಈ ರೀತಿಯ ತರಬೇತಿ ಕಾರ್ಯಕ್ರಮಗಳು ಬಹು ಉಪಯುಕ್ತವಾಗಿದ್ದು, ಇವು ನಮ್ಮ ಕರ್ತವ್ಯವನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸುವಂತೆ ಮಾಡುತ್ತವೆ ಎಂದರು.

ಮಹಿಳೆಯರ ಸಂರಕ್ಷಣೆ ಕುರಿತು ಹಲವಾರು ಕಾಯ್ದೆ, ಕಾನೂನುಗಳಿವೆ ಹಾಗೂ ಅವು ಅಷ್ಟೇ ಉಲ್ಲಂಘನೆಯಾಗುತ್ತಿವೆ. ಮಹಿಳೆ ಭಯದಿಂದ ಕಾಲ ಕಳೆಯುವಂತಾಗಿದೆ. ಸಮಾಜ ಮತ್ತು ಕುಟುಂಬಗಳಲ್ಲಿ ಆಕೆ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುವ ವಾತಾವರಣವನ್ನು ಕಲ್ಪಿಸಬೇಕು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದಲ್ಲಿ ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಮತ್ತು ಮಕ್ಕಳು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಸಂಖ್ಯೆಗಳು ಹೀಗಿವೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ : 08182-251114, ಮಹಿಳಾ ವಿಶೇಷ ಚಿಕಿತ್ಸಾ ಘಟಕ: 181, ಮಕ್ಕಳ ಸಹಾಯವಾಣಿ(ಚಿತ ಕರೆ) 1098, ಪೊಲೀಸ್ ಇಲಾಖೆ ಸಹಾಯವಾಣಿ: 100

ಸಿಡಿಪಿಓ ಮತ್ತು ಸಾಂತ್ವನ ಕೇಂದ್ರ ಸಂಖ್ಯೆಗಳು ಕ್ರಮವಾಗಿ ಶಿವಮೊಗ್ಗ 08182-255139, 08182-271628. ಭದ್ರಾವತಿ 08282-266384, 08282-261077, ತೀರ್ಥಹಳ್ಳಿ 08181-228940, 08181-220024. ಹೊಸನಗರ 08182-221485, 08185-201268. ಸಾಗರ 08183-226804, 08183-221177. ಸೊರಬ 08184-272387, 08184-293617. ಶಿಕಾರಿಪುರ 08187-222593, 08187-222471.

ತರಬೇತಿ ಕಾರ್ಯಾಗಾರದಲ್ಲಿ ವಿವಿಧ ತಾಲ್ಲೂಕುಗಳ ಸಿಡಿಪಿಓ, ಎಸಿಡಿಪಿಓ ಗಳು, ಸಂರಕ್ಷಣಾಧಿಕಾರಿಗಳು, ಸ್ವಾಧಾರಾ, ಸಾಂತ್ವನ, ಉಜ್ವಲ ಕೇಂದ್ರದ ಪ್ರತಿನಿಧಿಗಳು, ನ್ಯಾಯಾಂಗ, ಪೊಲೀಸ್ ಇಲಾಖೆ ಅಧಿಕಾರಿ/ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ಪೊಲೀಸ್ ಇಲಾಖೆಯ ಮುಖ್ಯ ಪೇದೆ ಮಂಜುನಾಥ್ ಪಾಟೀಲ್ ಕೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಾಯತ್ರಿ ಡಿ ಎಸ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಪೊಲೀಸರ ಪಾತ್ರ, ಸಮಾಲೋಚನೆ ವಿಧಿ ವಿಧಾನ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ(ಪ್ರಭಾರ) ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಚಂದ್ರಪ್ಪ ಎನ್ ಇದ್ದರು. ಜಿಲ್ಲಾ ಸಂಯೋಜಕ ತಾಜುದ್ದೀನ್ ಖಾನ್ ನಿರೂಪಿಸಿದರು.
ಭದ್ರಾವತಿ ಸಿಡಿಪಿಓ ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...