ಸಾಗರ ಪಟ್ಟಣದಲ್ಲಿರುವ 100 ವರ್ಷ ಹಳೆಯ ಸಹಕಾರಿ ಗಣಪತಿ ಅರ್ಬನ್ ಬ್ಯಾಂಕ್‌ನ ಗ್ರಾಹಕರಿಗೆ ಮತ್ತು ಷೇರುದಾರರಿಗೆ ಆಗಿರುವ ವಂಚನೆಯ ವಿರುದ್ಧ ಗಣಪತಿ ಅರ್ಬನ್ ಬ್ಯಾಂಕಿನ ಗ್ರಾಹಕರ ಮತ್ತು ಷೇರುದಾರರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಗುರುವಾರ ಡಿ.15 ರಂದು ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಎದುರು ಬೆಳಿಗ್ಗೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ವಿತ್ತ ಸಚಿವರಿಗೆ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮತ್ತು ಆರ್‌ಬಿಐ ಹಾಗೂ ರಾಜ್ಯದ ಸಹಕಾರಿ ಸಚಿವರು ಸೇರಿದಂತೆ ವಿವಿಧ ಪ್ರಮುಖರುಗಳಿಗೆ ಮನವಿ ಸಲ್ಲಿಸಲಾಯಿತು.
ಗಣಪತಿ ಬ್ಯಾಂಕಿನಲ್ಲಿ ಬಂಗಾರ ಅಡಮಾನ ಇಟ್ಟು ಸಾಲ ಮಾಡುವವರಿಗೆ ತೀವ್ರ ಕಿರುಕುಳ ನೀಡಲಾಗುತ್ತಿದೆ. ಬಂಗಾರದ ಸಾಲ ಬಡ್ಡಿ ಸಮೇತ ಮರುಪಾವತಿ ಮಾಡಿದರೂ ಮರು ಸಾಲ ನೀಡಲು ಕಿರುಕುಳ ನೀಡುವುದಲ್ಲದೇ ಬಂಗಾರವನ್ನು ಹಿಂತಿರುಗಿಸದೇ ವಂಚಿಸುವ ಪ್ರಯತ್ನ ನಡೆಸುತ್ತಿರುವ ಬ್ಯಾಂಕಿನ ಗ್ರಾಹಕ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.
ಗ್ರಾಮಾಂತರದ ಅವಿದ್ಯಾವಂತರೂ ಹೆಚ್ಚಾಗಿ ಸಾಗರದ ಗಣಪತಿ ಬ್ಯಾಂಕಿನ ಬಂಗಾರದ ಸಾಲಗಾರರಾಗಿರುತ್ತಾರೆ. ಸಾಲದ ಅರ್ಜಿ ತುಂಬಲು ಬಾರದ ಗ್ರಾಹಕರನ್ನು ವಿನಾಕಾರಣ ಸತಾಯಿಸುತ್ತಾರೆ. ಸಾಲದ ಅರ್ಜಿಯನ್ನು ಸಾಲಗಾರರೇ ಭರ್ತಿ ಮಾಡಬೇಕು ಎಂಬ ತಾಕೀತು ಮಾಡುವ ಮೂಲಕ ಬರೆಯಲು ಬಾರದ ಗ್ರಾಹಕರನ್ನು ಅವಮಾನಿಸುತ್ತಾರೆ ಎಂಬ ಆರೋಪವಿದೆ.
ಬ್ಯಾಂಕಿನ ನಿಯಮಾನುಸಾರ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಇರುತ್ತದೆ. ಆದರೇ ಉಪ ಕಾರ್ಯನಿರ್ವಹಣಾಧಿಕಾರಿ(ಉಪಮ್ಯಾನೇಜರ್) ಹುದ್ದೆ ಅಕ್ರಮವಾಗಿ ಸೃಷ್ಟಿಸಿ ಬ್ಯಾಂಕಿನ ಆರ್ಥಿಕ ಹೊರೆಯನ್ನು ಹೆಚ್ಚಿಸಿರುವ ವಿರುದ್ಧ ತನಿಖೆಯಾಗಬೇಕು. ಈ ಹಿಂದೆ ಹೋರಾಟ ಮಾಡಿದ ಪರಿಣಾಮ 1 ಕೋಟಿ 90 ಲಕ್ಷ ರೂ. ಗಳ ಷೇರು ಡಿವಿಡೆಂಡ್ ಹಣವನ್ನು ಷೇರುದಾರರ ಖಾತೆಗೆ ವರ್ಗಾಯಿಸಿದ್ದರು. ಆದರೇ ಈಗ ಕೋವಿಡ್‌ನಿಂದ ನಷ್ಟದಲ್ಲಿರುವ ಬ್ಯಾಂಕುಗಳು ಡಿವಿಡೆಂಡ್ ನೀಡುವ ಅಗತ್ಯವಿಲ್ಲ ಎಂಬ ಆರ್‌ಬಿಐ ಸುತ್ತೋಲೆಯನ್ನೇ ನೆಪವಾಗಿಟ್ಟುಕೊಂಡು ಲಾಭದಲ್ಲಿದ್ದರೂ 2 ಕೋಟಿಗೂ ಹೆಚ್ಚು ಡಿವಿಡೆಂಡ್ ಹಣವನ್ನು ಷೇರುದಾರರಿಗೆ ನೀಡದೆ ವಂಚಿಸಿರುವ ವಿರುದ್ಧ ಹೋರಾಟ ನಡೆಸಲಾಗುತ್ತಿದೆ.
ಬಂಗಾರ ಅಡಮಾನವಿಟ್ಟಿರುವ ಕೆಲವು ಗ್ರಾಹಕರು ಮರಣ ಹೊಂದಿರುವ ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ಸಾಲದ ಮೇಲೆ ಚಕ್ರಬಡ್ಡಿ ವಿಧಿಸಿ ಹರಾಜು ಮಾಡುವ ಮೂಲಕ ಬ್ಯಾಂಕಿನ ಅಧಿಕಾರಿಗಳೇ ಬಂಗಾರ ಹರಾಜು ಹಿಡಿಯುವವರೊಂದಿಗೆ ಶಾಮೀಲಾಗಿ ಕಡಿಮೆ ಬೆಲೆಗೆ ಬಂಗಾರ ಗುಳುಂ ಮಾಡಿರುವ ಸಾಕಷ್ಟು ಪ್ರಕರಣಗಳಿವೆ.
ಹೆಚ್ಚುವರಿ ಬಡ್ಡಿ ವಸೂಲಿ ಮಾಡಿರುವ ಹಣ ಗ್ರಾಹಕನ ಖಾತೆಗೆ ಹಿಂತಿರುಗಿಸುವಲ್ಲಿಯೂ ಬ್ಯಾಂಕಿನ ನಿರ್ಲಕ್ಷ್ಯತನ ತೋರಿಸಿದ್ದು,ಅಂತಹ ಹಣ ಬ್ಯಾಂಕಿನಲ್ಲಿಯೇ ಉಳಿದುಕೊಂಡಿರುವುದು ಗ್ರಾಹಕನಿಗೆ ಮಾಡಿದ ವಂಚನೆಯಾಗಿದೆ.
ಪಿಗ್ಮಿ ಸಂಗ್ರಹಕಾರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಗಣಪತಿ ಬ್ಯಾಂಕಿನ ಆಡಳಿತ ವ್ಯವಸ್ಥೆ ಯಾವ ರಾಷ್ಟ್ರೀಕೃತ ಬ್ಯಾಂಕಿನಲ್ಲೂ ಇಲ್ಲದ ನೀತಿಯನ್ನು ಗಣಪತಿ ಬ್ಯಾಂಕು ಅಳವಡಿಸಿಕೊಳ್ಳುವ ಮೂಲಕ 60 ವರ್ಷಕ್ಕೆ ಕಡ್ಡಾಯವಾಗಿ ನಿವೃತ್ತಿಗೊಳಿಸುವ ಜೊತೆಗೆ ಯಾವುದೇ ತಕರಾರು ತೆಗೆಯಬಾರದು ಎಂದು ಬಲವಂತವಾಗಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಮೂಲಕ ಪಿಗ್ಮಿ ಸಂಗ್ರಹಕಾರರ ಬದುಕಿಗೆ ಮರಣಶಾಸನ ಬರೆದಿರುವ ಆಡಳಿತದ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಹೋರಾಟ ಸಮಿತಿ ಸಂಚಾಲಕ ಹಿತಕರ ಜೈನ್ ಹೇಳಿದ್ದಾರೆ.