ಹೊಸನಗರ ತಾಲ್ಲೂಕು ವ್ಯಾಪ್ತಿಯ ಹುಂಚ ಕೆರೆಹಳ್ಳಿ, ಕಸಬ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ, ಮಲೆನಾಡಿನಾದ್ಯಂತ, ಮಲೆನಾಡು ಗಿಡ್ಡ ತಳಿಯಲ್ಲಿ ಚರ್ಮಗಂಟು ರೋಗ ಕಾಯಿಲೆ ಉಲ್ಬಣಗೊಳ್ಳುತ್ತಿದೆ. ಇದರಿಂದ ರೈತರಲ್ಲಿ ಆತಂಕ ಉಂಟಾಗಿದೆ.
ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಶು ಆಸ್ಪತ್ರೆಯಲ್ಲಿ ವೈದ್ಯರುಗಳು ಕೊರತೆ ಎದುರಿಸುವಂತಹ ಇಂದಿನ ದಿನಗಳಲ್ಲಿ ಉಲ್ಬಣಗೊಂಡಿರುವ ಮಲೆನಾಡು ಗಿಡ್ಡತಳಿಯಲ್ಲಿ ಕಾಣಿಸಿಕೊಂಡಿರುವ ಮಾರಕ ರೋಗದಿಂದಾಗಿ ಜಾನುವಾರುಗಳು ಪಡುವ ವೇದನೆ ಹೇಳತೀರದಂತಾಗಿದೆ.
ಮಲೆನಾಡಿನಲ್ಲಿ ಹೈನುಗಾರಿಕೆಯೇ ಜೀವಾಳವಾಗಿರುವ ತಾಲ್ಲೂಕಿನಲ್ಲಿ ಬಹುಪಾಲು ರೈತರು ಕೃಷಿಯ ಜೊತೆಗೆ ಜಾನುವಾರುಗಳನ್ನು ಸಾಕಾಣಿಕೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ರೈತಾಪಿ ವರ್ಗ ತೀವ್ರ ತೊಂದರೆ ಅನುಭವಿಸಿ ಚೇತರಿಸಿಕೊಳ್ಳುವ ಮುನ್ನವೇ ಅನ್ನದಾತರಿಗೆ ಈಗ, ಇನ್ನೊಂದು ಸಂಕಷ್ಟ ಎದುರಾಗಿದೆ.
ಹಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ಈ ರೋಗದ ನಿಯಂತ್ರಣಕ್ಕಾಗಿ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಿಗೆರಸು, ನಾಡಿನ ವಿವಿಧ ಭಾಗಗಳಲ್ಲಿ, ಹಿಂಡ್ಲೆಮನೆ ಹೀಗೆ ಹಲವು ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಿಸಿದೆ. ಇದರಿಂದ ರೈತಾಪಿ ವರ್ಗವು ಚಿಂತೆಗೀಡುವಂತೆ ಮಾಡಿದೆ.
ಈ ರೋಗ ಜಾನುವಾರುಗಳಲ್ಲಿ ಹರಡುವ ಬಗೆ ಹೀಗೆ…
ಸೊಳ್ಳೆ, ನೊಣ, ಉಣ್ಣೆ ಮತ್ತು ರೋಗಪೀಡಿತ ಪ್ರಾಣಿಗಳ ನೇರ ಸಂಪರ್ಕದಿಂದ ಈ ರೋಗ ದನಕರುಗಳಿಗೆ ಹರಡುತ್ತದೆ. ಅಲ್ಲದೇ, ರೋಗದಿಂದ ಬಳಲುತ್ತಿರುವ ಹಸುಗಳು ತಿಂದು ಬಿಟ್ಟ ಮೇವು ಮತ್ತು ಕುಡಿದು ಬಿಟ್ಟ ನೀರಿನ ಸೇವೆನೆಯಿಂದಲೂ ಈ ರೋಗ ಬರುತ್ತದೆ. ಜೊತೆಗೆ ಸೋಂಕಿತ ಹಸುವಿನ ರಕ್ತ, ಕೀವು, ದೈಹಿಕ ಸ್ರಾವದ ನೇರ ಸಂಪರ್ಕದಿಂದಲೂ ಬರುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಕ್ಯಾಪ್ರೈನ್ ಪಾಕ್ಸ್ ವೈರಾಣುವಿನಿಂದ ಬರುವ ಈ ರೋಗವು ಕುರಿ ಮತ್ತು ಮೇಕೆಗಳಲ್ಲಿ ಸಿಡುಬಿನ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಸುಗಳ ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಯಲ್ಲಿ ಇರುವ ಈ ವೈರಾಣು 35 ದಿನಗಳ ಕಾಲ ಬದುಕಿರುತ್ತದೆ.
ಹಸುವಿನಲ್ಲಿ ರೋಗ ಲಕ್ಷಣಗಳೆಂದರೆ, ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ನಂತರ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತದೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ.
ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈ ಮೇಲೆ ದೊಡ್ಡ ಗಂಟು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೆಲ ಹಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು.
ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಿ, ದೀರ್ಘ ಕಾಲದವರೆಗೆ ಗರ್ಭ ಧರಿಸದಂತೆ ಆಗಬಹುದು. ಅಲ್ಲದೇ, ಮಾಸು ಚೀಲದ ಮೂಲಕ ರೋಗ ಪ್ರಸರಣದ ಸಾಧ್ಯತೆಯಿದೆ. ರೋಗಕ್ಕೆ ಶೀಘ್ರವೇ ಚಿಕಿತ್ಸೆ ಕೊಡಿಸದಿದ್ದರೆ ಗಂಟುಗಳು ಕೊಳೆತು, ನೊಣ ಮತ್ತು ಉಣ್ಣೆ ಕಡಿತದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ರೋಗದ ಸ್ಥಿತಿ ಗಂಭೀರವಾದರೆ ಹಸುಗಳು ಸಾವು ಸಂಭವಿಸಬಹುದು.
ಇದಕ್ಕೆ ಚಿಕಿತ್ಸೆ ಏನೆಂದರೆ, ರೋಗಪೀಡಿತ ಹಸುಗಳನ್ನು ಆರೋಗ್ಯವಂತ ಹಸುಗಳಿಂದ ಪ್ರತ್ಯೇಕಿಸಬೇಕು. ಹಸುಗಳಿಗೆ ಸೊಳ್ಳೆ, ನೊಣ, ಮತ್ತು ಉಣ್ಣೆ ನಿವಾರಕ ಮುಲಾಮು ಹಚ್ಚಬೇಕು. ಹಸುಗಳಿಗೆ ಕಡ್ಡಾಯವಾಗಿ ಮೇಕೆ ಸಿಡುಬು ನಿರೋಧಕ ಲಸಿಕೆ ಹಾಕಿಸಬೇಕು.
ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು. ಟೆಟ್ರಾ ಸೈಕ್ಲಿನ್, ಪೆನ್ಸಿಲಿನ್‌ನಂತಹ ಆ್ಯಂಟಿ ಬಯೋಟಿಕ್ ಚುಚ್ಚುಮದ್ದು ನೀಡಬಹುದು. ರೋಗ ಹತೋಟಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಹಸುಗಳಿಗೆ ಮೇಕೆ ಸಿಡುಬು ಲಸಿಕೆ ಹಾಕಲಾಗುತ್ತಿದೆ.
ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಡಿರುವ ಮಾರಕ ರೋಗದ ಹತೋಟಿಗೆ ಕ್ರಮ ಕೈಗೊಳ್ಳಲಾಗಿದ್ದರೂ, ಕೂಡಾ ದಿಢೀರ್ ಉಲ್ಬಣಗೊಂಡಿರುವುದರಿಂದಾಗಿ ರೈತರು ಸಾರ್ವಜನಿಕರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಇನ್ನಾದರೂ ಸರ್ಕಾರ ತುರ್ತು ಗಮನಹರಿಸಿ ಈ ಮಾರಕ ರೋಗದ ನಿಯಂತ್ರಣಕ್ಕೆ ಮುಂದಾಗುವರೇ ಕಾದುನೋಡುವಂತಾಗಿದೆ.
ಮುಂಜಾಗ್ರತಾವಾಗಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ನೀಡಲಾಗಿದೆ. ಅಲ್ಲದೆ ತಾಲ್ಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಜಾನುವಾರುಗಳಿದೆ. ಈಗಾಗಲೇ ಚರ್ಮಗಂಟು ರೋಗದಿಂದಾಗಿ 45ಕ್ಕೂ ಅಧಿಕ ಸಂಖ್ಯೆಯಲ್ಲಿ ಜಾನುವಾರು ಈ ಮಾರಕ ರೋಗಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ.