ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆ ಒಂದು ಸಮಗ್ರ, ಆಧುನಿಕ ಶಾಸನವಾಗಿದೆ. ಇದು ನಾಗರಿಕರ ಡೇಟಾ ರಕ್ಷಣೆಯ ಹಕ್ಕನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಡೇಟಾ ರಕ್ಷಣೆ, ನಾವೀನ್ಯತೆ ಮತ್ತು ಆಡಳಿತವನ್ನು ಸುಲಭಗೊಳಿಸುವುದು ಇದರ 3 ಪ್ರಮುಖ ಗುರಿಗಳು.
ಈ ಮಸೂದೆಯು ನಮ್ಮ ಡೇಟಾ ಆರ್ಥಿಕತೆಯಲ್ಲಿ ಆಳವಾದ, ಶಾಶ್ವತ ಬದಲಾವಣೆಗಳನ್ನು ತರಲಿದೆ. ಇತ್ತೀಚೆಗೆ ಅರಬ್ ಸಂಯುಕ್ತ ಸಂಸ್ಥಾನದ ಡಿಜಿಟಲ್ ಸಚಿವರು ‘ಭವಿಷ್ಯದಲ್ಲಿ ಭಾರತೀಯರ ಬೆರಳಚ್ಚುಗಳು ಎಲ್ಲೆಡೆ ಕಂಡುಬರಲಿವೆ’ ಎನ್ನುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವರ ಹೇಳಿಕೆಯು ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಪ್ರಪಂಚದಲ್ಲಿ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನದ ಮೌಲ್ಯ ಸರಪಳಿಯಲ್ಲಿ ಭಾರತದ ವಿಸ್ತಾರವಾದ ಅಸ್ತಿತ್ವ ಮತ್ತು ಸ್ಥಾನವನ್ನು ಎತ್ತಿ ತೋರಿಸುತ್ತದೆ.
3 ದಶಕಗಳ ಹಿಂದೆ ಕೇವಲ ತಂತ್ರಜ್ಞಾನಗಳನ್ನು ಖರೀದಿಸಿ ಬಳಕೆ ಮಾಡಿಕೊಳ್ಳುತ್ತಿದ್ದ ನಾವು ಇಂದು ಟೆಕ್ ವೇದಿಕೆ, ಎಲೆಕ್ಟ್ರಾನಿಕ್ ಸಾಮಗ್ರಿಗಳ ವಾಸ್ತುಶಿಲ್ಪಿಗಳು, ವಿನ್ಯಾಸಗಾರರು ಹಾಗೂ ನಿರ್ಮಾಪಕರೆನಿಸಿಕೊಂಡಿದ್ದೇವೆ. ಅತಿ ಕಡಿಮೆ ಅವಧಿಯಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯಗಳು ಬಹಳ ದೂರ ಸಾಗಿವೆ. ಪ್ರಪಂಚದ ಹೊರಗುತ್ತಿಗೆ ಕೇಂದ್ರ ಎನಿಸಿರುವ ನಮ್ಮ ದೇಶದ ನಾವೀನ್ಯತಾ ಪರಿಸರ ವ್ಯವಸ್ಥೆಯ ಬೆಳವಣಿಗೆಯ ವೇಗಕ್ಕೆ ಜಗತ್ತೇ ದಂಗಾಗಿದೆ. ಇಂದು ಯುವ ಭಾರತೀಯರು ಆತ್ಮವಿಶ್ವಾಸದೊಂದಿಗೆ ಬಾಹ್ಯಾಕಾಶದಿಂದ ಡೀಪ್ ಟೆಕ್, ಕೃತಕ ತಂತ್ರಜ್ಞಾನದಿಂದ ವೆಬ್3, ಇಂಟರ್ನೆಟ್‌ನಿಂದ ಎಲೆಕ್ಟ್ರಾನಿಕ್ಸ್ ಅಥವಾ ಸೆಮಿಕಂಡಕ್ಟರ್‌ಗಳವರೆಗಿನ ಡೊಮೇನ್‌ಗಳಲ್ಲಿ ಮುನ್ನುಗ್ಗುತ್ತಿದ್ದಾರೆ.
820 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತ ಅತಿದೊಡ್ಡ ಸಂಪರ್ಕಿತ ಪ್ರಜಾಪ್ರಭುತ್ವ ಎನಿಸಿಕೊಂಡಿದೆ. ಶೀಘ್ರದಲ್ಲೇ ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯು 120 ಕೋಟಿಯನ್ನು ಮುಟ್ಟಲಿದೆ.
ಭಾರತದಲ್ಲಿ ಇಂಟರ್ನೆಟ್ ವ್ಯವಸ್ಥೆ ಚೀನಾದಂತೆ ಕಠಿಣ ಸೆನ್ಸಾರ್‌ಗೆ ಒಳಗಾಗದೇ ಇತರೆ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಂತೆ ಜಾಗತಿಕ ಡಿಜಿಟಲ್. ನೆಟ್‌ವರ್ಕ್‌ಗೆ ಮುಕ್ತ ಪ್ರವೇಶವನ್ನು ಹಾಗೂ ಪರಸ್ಪರ ಸಂಪರ್ಕವನ್ನು ಹೊಂದಿದೆ. ಭಾರತವು ಜಿ20 ಅಧ್ಯಕ್ಷನಾಗಿ ಮತ್ತು ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ) ಕೌನ್ಸಿಲ್‌ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಹೀಗಾಗಿ ಭವಿಷ್ಯದ ತಂತ್ರಜ್ಞಾನ ರೂಪಿಸುವಲ್ಲಿ ಭಾರತವು ನಾಯಕತ್ವದ ಪಾತ್ರವನ್ನು ವಹಿಸುವುದು ಬಹುತೇಕ ಖಚಿತವಾಗಿದೆ.