ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ವಾರಕ್ಕೊಮ್ಮೆ ಬರುವ ಸಾಪ್ತಾಹಿಕ ಪುರವಣಿ ಯನ್ನು ಬಿಡದೆಓದಿ. ಬಹಳ ಜನರು ಮನೆಗೆ ಪತ್ರಿಕೆ ತರಿಸುವ, ಓದುವ ಹವ್ಯಾಸ ಮಾಡಿಕೊಳ್ಳುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು. ಶಾಲೆಗಳು ಇತ್ತ ಅಗತ್ಯ ಗಮನ ಹರಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮನವಿ ಮಾಡಿದರು.
ಅವರು ನಗರದ ಕಲ್ಲಹಳ್ಳಿಯಲ್ಲಿರುವ. ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಜಿಲ್ಲಾ ಕಸಾಪ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಅಂಗಳದಲ್ಲಿ ಕಥೆ, ಕವನ, ಪ್ರಬಂಧ ರಚನಾ ಕಮ್ಮಟ ನವೆಂಬರ್ 17 ರಂದು ಗುರುವಾರ ಏರ್ಪಡಿಸಲಾಗಿತ್ತು.
ಕಥಾ ರಚನೆಯ ಕುರಿತು ಮಾಹಿತಿ ನೀಡಿದ ಉಪನ್ಯಾಸಕ ಜಿ. ಆರ್. ಲವ ಅವರು ಮಾತನಾಡಿ ಬರೆಯುವ ಮೊದಲು ವಿಚಾರ, ಸಿದ್ದತೆ ಜೊತೆಗೆ ಭಾವ, ಬುದ್ದಿ, ಅನುಭವಗಳನ್ನು ಗಮನಿಸಬೇಕು. ನಿಮಗೆ ಅವಕಾಶಗಳು ಹಲವುಯಿವೆ. ಅದಕ್ಕೆ ಪರಿಶ್ರಮ ವಿರಬೇಕು ಎಂದು ವಿವರಿಸಿದರು.
ಸಂಶೋಧನಾ ವಿದ್ಯಾರ್ಥಿ, ಕವಯಿತ್ರಿ ಕು. ಕಾವ್ಯ ಅವರು ಕವನಗಳನ್ನು ಕುರಿತು ಮಾತನಾಡಿ ರಾಮಾಯಣ, ಮಹಾಭಾರತ ಎಲ್ಲವೂ ಲೇಖಕರ ಸೃಷ್ಟಿಯಾಗಿದೆ. ಒಂದು ಗೀಜಗ ಗೂಡುಕಟ್ಟುವಾಗ ಅದು ಒಂದೇ ದಿನದಲ್ಲಿ ಆಗೋದಿಲ್ಲ. ಒಂದೇ ಹುಲ್ಲಿನಿಂದ ಆಗೋದಿಲ್ಲ. ಬೇರೆ ಬೇರೆ ಪದಗಳು, ಅರ್ಥ, ಭಾವಗಳ ಜೊತೆ ಭಾವನೆಗಳನ್ನು ಕಟ್ಟುವ ಮೂಲಕ ಕಾವ್ಯ ಸೃಷ್ಟಿ ಯಾಗಬೇಕು. ಕಾವ್ಯ ಲಕ್ಷಣ ಸುಲಭವಲ್ಲ ಎಂದು ವಿವರಿಸಿದರು.
ಪ್ರಬಂಧ ವಿಚಾರವಾಗಿ ಮಾತನಾಡಿದ ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ಕಥೆ, ಕವಿತೆ, ಪ್ರಬಂಧ ಗಳು ಲೇಖಕ ತನ್ನ ಬೇಸರ, ಸಂತಸ, ನೋವು, ನಲಿವು ಎಲ್ಲವನ್ನೂ ಅಭಿವ್ಯಕ್ತಿಸಲು ಬಳಸಿಕೊಳ್ಳಬಹುದು. ನಮ್ಮ ಆಧ್ಯತೆ ಯಾವುದು, ನಮ್ಮ ಮನದಲ್ಲಿ ಕುಳಿತಿರುವ ವಿಚಾರ, ನಮ್ಮನ್ನು ಕಾಡುವ, ನಮ್ಮ ಆಸಕ್ತಿ ಎಲ್ಲವೂ ಪ್ರಭಾವ ಬೀರುತ್ತವೆ ಎಂದರಲ್ಲದೆ ಜ್ಞಾನ ಪಡೆಯಲು ಓದಬೇಕು. ಅದರಿಂದ ಮತ್ತಷ್ಟು ಪ್ರೇರಣೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ಶಾರದಾ ಎಸ್. ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾ. ಕಾರ್ಯದರ್ಶಿ ಅನುರಾಧ, ಜಿಕಸಾಸಾಂ. ವೇದಿಕೆಯ ಶ್ರೀನಿವಾಸ ನಗಲಾಪುರ ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕರಾದ ಲತಾ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ದೀಪಕ್ ವಂದಿಸಿದರು. ಶಿಕ್ಷಕಿ ಸಿರಿ ವಂದಿಸಿದರು.