ಪ್ರತಿ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುವುದು. ಈ ದಿನದಂದು ಅಂಚೆ ಉದ್ಯಮದಲ್ಲಿ ಕೆಲಸ ಮಾಡುವವರ ಕೆಲಸವನ್ನು ಗೌರವಿಸಲಾಗುತ್ತದೆ.
ಪ್ರಪಂಚದಾದ್ಯಂತದ ವ್ಯವಹಾರಗಳು ಮತ್ತು ವ್ಯಕ್ತಿಗಳ ದೈನಂದಿನ ಜೀವನದಲ್ಲಿ ಅಂಚೆ ವಲಯವು ಪ್ರಮುಖ ಪಾತ್ರ ವಹಿಸಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಇನ್ನೊಂದು ವಿಶೇಷ.
ಜನರು ಪರಸ್ಪರ ಸಂದೇಶಗಳನ್ನು ಪಡೆಯಲು ಒಂದು ಮಾರ್ಗವನ್ನು ಕಂಡುಕೊಂಡರು. ಸಂದೇಶವಾಹಕರು ಇದನ್ನು ಹೆಚ್ಚಾಗಿ ಕುದುರೆಯ ಮೇಲೆ ಮಾಡುತ್ತಿದ್ದರು.ಅಂದು-ಇಂದು-ಎಂದೆಂದಿಗೂ ಪ್ರಸ್ತುತವೆನಿಸುವ ಅಂಚೆಯ ಪರಿ ಕಲ್ಪನೆಯು ಪ್ರಾಚೀನ ಕಾಲದ ಪುರಾಣಗಳಲ್ಲೂ ಕಾಣಸಿಗುತ್ತವೆ.
ಹಕ್ಕಿ-ಪಕ್ಷಿಗಳು, ರಾಜದೂತರು, ಕಾಲಾಳುಗಳು ಊರಿಂದೂರಿಗೆ ಸಂಚರಿಸುತ್ತಿದ್ದ ಬಳೆಗಾರರು,ಕಾಳಿದಾಸನ ಕಲ್ಪನೆಯ ಮೇಘದೂತ, ಅಲೆಮಾರಿಗಳು ಸಂದೇಶಗಳ ರವಾನೆಗೆ ಸಹಕರಿಸಿ, ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದರ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ.
ವಾರ-ತಿಂಗಳುಗಟ್ಟಲೆ ಸಂದೇಶಕ್ಕೆ ಕಾತರದಿಂದ ಕಾಯುತ್ತಿದ್ದಾಗ ಅಂಚೆ ಅಣ್ಣನ ಸೈಕಲ್ ಬಂದು ಮನೆಯ ಮುಂದೆ ಸೈಕಲ್ ಬೆಲ್ ಬಾರಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.
ಇದಲ್ಲದೇ ಸಹನೆಯಿಂದ ಕಾಯುತ್ತಿದ್ದ ಅಂದಿನ ದಿನಗಳನ್ನು ನಾವು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಂಚೆ ಇಲಾಖೆ ಜನರಿಗೆ ಅನುಕೂಲವಾಗುವ ಜಾಗಗಳಲ್ಲಿ ಅಂಚೆ ಡಬ್ಬಗಳನ್ನಿಟ್ಟು ಕಾಗದ-ಪತ್ರಗಳನ್ನು ಸಂಗ್ರಹಿಸಿ ಅಂಚೆ ಚೀಲಗಳಲ್ಲಿ ಸೂಕ್ತ ಮಾರ್ಗಗಳ ಮೂಲಕ ರವಾನಿಸಿ ಅಂಚೆಯಣ್ಣನ ಮೂಲಕ ಮನೆ-ಮನೆಗೆ ತಲುಪಿಸುವ ಒಂದು ಶಿಸ್ತುಬದ್ಧ ವ್ಯವಸ್ಥೆಯನ್ನು ರೂಪಿಸಿದೆ.
ಇಂದಿಗೂ ಹಳ್ಳಿಗಳಲ್ಲಿ ಅಂಚೆ ಅಣ್ಣನ ಬರುವಿಕೆಯನ್ನ ಕಾಣಬಹುದು. ಅಂಚೆಯಣ್ಣ ಕೇವಲ ಒಬ್ಬ ನೌಕರನಾಗಿರದೇ ಊರಿನ, ಹಳ್ಳಿಯ ಆತ್ಮೀಯ ವ್ಯಕ್ತಿಯಾಗಿ ಬಿಡುತ್ತಾನೆ.
ಇಂದಿನ ಆಧುನಿಕ ಯುಗದಲ್ಲಿ ಕೈಯ ಬೆರಳು ತುದಿಯಲ್ಲಿಂದಲೇ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಸಂದೇಶವನ್ನು ರವಾನಿಸಬಹುದು. ಆದರೆ ನಮಗಾಗಿ ಯಾರೋ ಒಂದಷ್ಟು ಸಮಯ ಬಿಡುವು ಮಾಡಿಕೊಂಡು ಅಂಚೆ ಪತ್ರ ಬರೆದು ಕಳುಹಿಸಿದಾಗ ಆಗುವ ಸಂತೋಷದ ಮುಂದೆ ಮೇಸೆಜ್, ಕಾಲ್, ಎಲ್ಲವೂ ಗೌಣ.
ಬೆಟ್ಟ ಗುಡ್ಡ, ಬಿಸಿಲು ,ಮಳೆ ಚಳಿಯ ನಡುವೆಯೂ ಕಾಣದೂರಿನ ದಾರಿ ಹಿಡಿದು , ಸಮಾಜದಿಂದ ದೂರವಾಗಿ ಯಾವುದೇ ನೆಟ್‌ವರ್ಕ್ ಇಲ್ಲದ ಗಡಿ ಪ್ರದೇಶಗಳಲ್ಲಿ ಅಹರ್ನಿಶಿ ದೇಶ ರಕ್ಷಣ ಕಾರ್ಯದಲ್ಲಿ ನಿರತರಾಗಿರುವ ಯೋಧರಿಗೆ ವೈಯಕ್ತಿಕ ಪತ್ರ ವ್ಯವಹಾರದ ವ್ಯವಸ್ಥೆ ನಮ್ಮ ಅಂಚೆ ಇಲಾಖೆ ಮಾಡುತ್ತಿದೆ.
ಅಂಚೆ ಇಲಾಖೆ ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಸಹಕಾರಿಯಾಗಿದೆ. ಸಾಲದ ರಿಜಿಸ್ಟ್ರಿಗಳು, ಸೊಸೈಟಿ-ಸಂಘ-ಸಂಸ್ಥೆಗಳ ಕಾರ್ಯ ಕಲಾಪಗಳ ಮಾಹಿತಿ ಪತ್ರ, ಮದುವೆ ಹಾಗೂ ವಿಶೇಷ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು, ಎಲ್‌ಐಸಿ, ಇತರ ಬ್ಯಾಂಕ್‌ಗಳ ಪ್ರೀಮಿಯಂ ನೋಟಿಸ್‌ಗಳು, ದಿನಪತ್ರಿಕೆಗಳು, ಅಲ್ಲದೇ ಇತರ ಮುಖ್ಯ ದಾಖಲಾತಿಗಳು ಅಂಚೆಯಣ್ಣನ ಮೂಲಕವೇ ಮನೆ-ಮನೆಗೆ ತಲುಪುತ್ತಿವೆ.
ಅಂಚೆ ಇಲಾಖೆಯ ತ್ವರಿತ ಅಂಚೆ ಸೇವೆ ಮತ್ತು ಪಾರ್ಸೆಲ್ ಸೇವೆಗಳು ಬಹಳ ಜನಪ್ರಿಯವಾಗುತ್ತಿವೆ. ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಪತ್ರ ತಲುಪಿಸಲಿ ಎನ್ನುವ ಉದ್ದೇಶದಿಂದ ಡಿಜಿಟಲ್ ಅಂಚೆ ಪತ್ರದ ವ್ಯವಸ್ಥೆ, ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯಲು ವಿಶೇಷ ಅಂಚೆ ಪತ್ರ , ಹೀಗೆ ಅನೇಕ ಸಂದರ್ಭಗಳಲ್ಲಿ ಅಂಚೆ ಇಲಾಖೆ ತನ್ನ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ.
ಅಂಚೆ ಇಲಾಖೆಯು ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ಡಿ-ಕ್ಯೂಬ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ.
ಅಂಚೆ ಇಲಾಖೆಯು ಅಟಲ್ ಬಿಹಾರಿ ವಾಜಪೇಯಿ ಪಿಂಚಣಿ ಯೋಜನೆ, ಅಂಚೆ ಉಳಿತಾಯ ಖಾತೆ ಹೊಂದಿರುವವರಿಗೆ ಅಪಘಾತ ವಿಮೆ ಯೋಜನೆ ಯನ್ನು ನೀಡುತ್ತಿದೆ. ಪಾಸ್‌ಪೋರ್ಟ್ ಸೇವೆಯನ್ನು ಕೂಡ ಅಂಚೆ ಕಚೇರಿಯ ನಾವು ಮೂಲಕ ಪಡೆಯಬಹುದು.
160 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಅಂಚೆ ಇಲಾಖೆಯು ಅಂದಿಗೂ ಇಂದಿಗೂ ಜನಸ್ನೇಹಿಯಾಗಿ ಮುಂದುವರಿದಿದೆ.
ಸದ್ಯದಲ್ಲೇ ಜನನ ಮರಣ ಪತ್ರಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ.ಅಂಚೆ ಇಲಾಖೆಯು ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ಡಿ-ಕ್ಯೂಬ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಅಂಚೆ ಇಲಾಖೆಯು ಅಟಲ್ ಬಿಹಾರಿ ವಾಜಪೇಯಿ ಪಿಂಚಣಿ ಯೋಜನೆ, ಅಂಚೆ ಉಳಿತಾಯ ಖಾತೆ ಹೊಂದಿರುವವರಿಗೆ ಅಪಘಾತ ವಿಮೆ ಯೋಜನೆ ಯನ್ನು ನೀಡುತ್ತಿದೆ. ಪಾಸ್‌ಪೋರ್ಟ್ ಸೇವೆಯನ್ನು ಕೂಡ ಅಂಚೆ ಕಚೇರಿಯ ಮೂಲಕ ಪಡೆಯ ಬಹುದು. 160 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಅಂಚೆ ಇಲಾಖೆಯು ಅಂದಿಗೂ ಇಂದಿಗೂ ಜನಸ್ನೇಹಿಯಾಗಿ ಮುಂದುವರಿದಿದೆ.
ನಾವೂ ಮೊಬೈಲ್, ಕಂಪ್ಯೂಟರ್ ಜಗತ್ತಿನಿಂದ ಹೊರಬಂದು ನಮ್ಮವರಿಗಾಗಿ ಒಂದು ಪತ್ರ ಬರೆಯೋಣ…ಅಲ್ಲವೇ?