ಕಲ್ಪತರುನಾಡು ತುಮಕೂರಲ್ಲಿ 3ನೇ ದಿನದ ಭಾರತ್ ಜೋಡೋ ಯಾತ್ರೆ ಸೋಮವಾರ ಬೆಳಗ್ಗೆ 6.30ಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ಪೋಚ್ಚಿಕಟ್ಟೆಯಿಂದ ಆರಂಭವಾಗಿದೆ. ರಾಹುಲ್ ಗಾಂಧಿ ಜೊತೆ ಡಿ.ಕೆ.ಶಿವಕುಮಾರ್, ವೇಣುಗೋಪಾಲ್, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ನಾಯಕರು ಸೇರಿದಂತೆ ಸಹಸ್ರಾರು ಜನರು ಹೆಜ್ಜೆ ಹಾಕುತ್ತಿದ್ದಾರೆ. ಇಂದಿನ ಪಾದಯಾತ್ರೆಯೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ.
ಹುಳಿಯಾರು ಪಟ್ಟಣದಲ್ಲಿ ಸಾಗುತ್ತಿದ್ದ ರಾಹುಲ್, ರಸ್ತೆ ಬದಿ ನಿಂತಿದ್ದ ಪುಟ್ಟ ಬಾಲಕಿಯ ಹೆಗಲ ಮೇಲೆ ಕೈ ಹಾಕಿ ಸಾಗಿದರು. ಚಾಕೋಲೆಟ್ ಕೊಟ್ಟು ಚೆನ್ನಾಗಿ ಓದಬೇಕು ಎಂದು ಬೆನ್ನು ತಟ್ಟಿದರು. ಹುಳಿಯಾರು ಪಟ್ಟಣದಲ್ಲಿ ಲಂಬಾಣಿ ಸಮುದಾಯದ ಮಹಿಳೆರು ನೃತ್ಯ ಮಾಡುತ್ತಾ ರಾಹುಲ್ಗೆ ಸ್ವಾಗತಿಸಿದರು. ಪಟ್ಟಣದಿಂದ ಕೆಂಕೆರೆ ಕಡೆಗೆ ಯಾತ್ರೆ ಸಾಗುತ್ತರುವಾಗ ಮಾರ್ಗದಲ್ಲಿ ಬಂದ ಮಂಗಳಮುಖಿಯರು ರಾಗಾಗೆ ಅಂಬೇಡ್ಕರ್ ಫೋಟೋವನ್ನು ಉಡುಗೊರೆ ಕೊಟ್ಟು ಶುಭ ಹಾರೈಸಿದರು. ಮಂಗಳಮುಖಿಯರೊಂದಿಗೆ ಮಾತನಾಡುತ್ತಲೇ ಹೆಜ್ಜೆ ಹಾಕಿದ ರಾಹುಲ್, ಅವರ ಸಂಕಷ್ಟವನ್ನ ಆಲಿಸಿದರು. ಮಂಗಳಮುಖಿಯನ್ನ ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟ ರಾಗಾ, ನಂತರ ಕೈಮುಗಿದು ನಮಿಸುತ್ತಾ ಮುಂದೆ ಸಾಗಿದರು.
ಹುಳಿಯಾರು ಕೆಂಚಮ್ಮನ ಗುಡಿ ಸಮೀಪ ರಸ್ತೆಯಿಂದ ಮಾರ್ಗ ಬದಲಿಸಿ ದಿಢೀರ್ ಕೆರೆ ಏರಿ ಹತ್ತಿದ ರಾಹುಲ್ ಗಾಂಧಿ, ಕೆರೆ ಏರಿಯ ಕಿರಿದಾದ ದಾರಿಯಲ್ಲಿ ನೆರೆದಿದ್ದ ಯುವಕರೊಂದಿಗೆ ಹೆಜ್ಜೆ ಹಾಕಿದರು. ಸರ್ಕಾರಿ ಹೈಸ್ಕೂಲ್ ವರೆಗೂ ಕೆರೆ ಏರಿ ಮೇಲೆಯೇ ಸಾಗಿತು ಪಾದಯಾತ್ರೆ. ರಾಗಾ ಜೊತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದರು.
ಹುಳಿಯಾರಿನಿಂದ ಕೆಂಕೆರೆಗೆ ಯಾತ್ರೆ ಬರುತ್ತಿದ್ದಂತೆ ಅಲ್ಲಿದ್ದ ಜನರು ರಾಹುಲ್, ರಾಹುಲ್ ಎಂದು ಕೂಗುತ್ತಲೇ ಇದ್ದರು.
ಡಿಕೆಶಿ, ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು. ಹೀಗೆ, ಭದ್ರತೆಯ ಬೇಲಿ ದಾಟಿ ಪ್ರೀತಿಯಿಂದ ಹೆಜ್ಜೆ ಹಾಕುತ್ತಿರುವ ರಾಹುಲ್ ಯಾತ್ರೆ ಇಂದು ಸಂಜೆ ಚಿತ್ರದುರ್ಗ ಪ್ರವೇಶಿಸಲಿದೆ.