ಪಾಪುಲರ್ ಫ್ರಂಟ್ ಇಂಡಿಯಾ ನಿಷೇಧದ ಬಳಿಕ SDPI ಅನ್ನೂ ನಿಷೇಧಿಸಬೇಕು ಎಂಬ ಊಹಾಪೋಹಗಳಿಗೆ ಚುನಾವಣಾ ಆಯೋಗ ಇಂದು ತೆರೆ ಎಳೆದಿದ್ದು, PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ಎಸ್‌ಡಿಪಿಐ ಯಾವುದೇ ಸಂಬಂಧ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತು. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಪಿಎಫ್‌ಐ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ನಿಷೇಧಿಸಿತ್ತು.
ಎಸ್‌ಡಿಪಿಐ ಎಲ್ಲಾ ಅಗತ್ಯ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಪಿಎಫ್‌ಐ ನೊಂದಿಗೆ ಯಾವುದೇ ನಂಟಿರುವುದು ಕಂಡುಬಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ಅವರು, ಪಿಎಫ್‌ಐ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ನಮಗೆ ತಿಳಿದಿದೆ. ಆದರೆ ಎಸ್‌ಡಿಪಿಐ ಎಲ್ಲಾ ರೀತಿಯ ಅಗತ್ಯ ದಾಖಲೆ ಸಲ್ಲಿಸಿದ್ದು, ಈವರೆಗೂ ಪಿಎಫ್‌ಐನೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದು ಕಂಡುಬಂದಿಲ್ಲ. ಎಸ್‌ಡಿಪಿಐ ಕಡೆಯಿಂದ ಲೋಪವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ SDPI, ‘2009ರ ಜೂನ್ 21ರಂದು ಎಸ್‌ಡಿಪಿಐ ಅಸ್ತಿತ್ವಕ್ಕೆ ಬಂದಿದ್ದು, 2010 ಏಪ್ರಿಲ್ 13ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆ. ಇಲ್ಲಿಯವರೆಗೆ ಎಸ್‌ಡಿಪಿಐ ಕರ್ನಾಟಕ, ಕೇರಳ, ತಮಿಳುನಾಡು, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಆಂಧ್ರಪ್ರದೇಶಗಳಲ್ಲಿ ಸದಸ್ಯರನ್ನು ಹೊಂದಿದ್ದು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಆದಿವಾಸಿಗಳು ಸೇರಿದಂತೆ ಎಲ್ಲ ವರ್ಗದ ನಾಗರಿಕರ ಪ್ರಗತಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದೆ.