ಹಿಂದೂ ದೇವರ ಅವಹೇಳನ ಮಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ನೂಪುರ್ ಅವರನ್ನು ಬಂಧಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಕೋರ್ಟ್ ತಿರಸ್ಕರಿಸಿದೆ.
ಹಿಂದೂ ದೇವರ ಅವಹೇಳನವನ್ನು ಸಹಿಸದೇ ನೂಪುರ್ ಅವರು ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದ ಹೇಳಿಕೆ ಭಾರತದ ಒಂದು ವರ್ಗ ಹಾಗೂ ಹಲ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೇಳಿಕೆ ಹಿಂಸಾಚಾರ ಸ್ವರೂಪವನ್ನೂ ಪಡೆದುಕೊಂಡಿದ್ದು, ಹಲವು ಕಡೆಗಳಲ್ಲಿ ಭಾರಿ ಪ್ರತಿಭಟನೆಗಳೂ ನಡೆದಿವೆ. ಈ ನಡುವೆಯೇ ಇವರನ್ನು ಬಂಧಿಸಲು ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ನಿರಾಕರಿಸಿದೆ. ‘ನ್ಯಾಯಾಲಯವು ಯಾವುದೇ ಒಂದು ತೀರ್ಪನ್ನು ನೀಡುವಾಗ ದೂರಗಾಮಿ ಪರಿಣಾಮಗಳನ್ನೂ ಅವಲೋಕಿಸಬೇಕಾಗುತ್ತದೆ. ಅವರನ್ನು ಬಂಧಿಸಿ ಎಂದು ನೀವು ಸರಳವಾಗಿ ಹೇಳಿಬಿಟ್ಟರೆ ಆಗುವುದಿಲ್ಲ.
ಇಂಥಹ ಆದೇಶಗಳನ್ನು ಹೊರಡಿಸಿದರೆ ಅದರಿಂದ ಆಗುವ ಪರಿಣಾಮಗಳ ಬಗ್ಗೆಯೂ ಕೋರ್ಟ್ ಯೋಚನೆ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಆದ್ದರಿಂದ ಈ ಅರ್ಜಿಯನ್ನು ಸುಮ್ಮನೇ ಹಿಂದಕ್ಕೆ ಪಡೆದುಕೊಳ್ಳುವುದು ಉತ್ತಮ ಎಂದರು. ಇದಕ್ಕೆ ಅನುಮತಿ ನೀಡಿದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಅರ್ಜಿಗೆ ಮಾನ್ಯತೆ ಇಲ್ಲ ಎಂದ ಕೋರ್ಟ್ ಅದನ್ನು ವಜಾಗೊಳಿಸಿತು.