ತೈವಾನ್ ಹಾಗೂ ಅದರ ಆಸುಪಾಸಿನಲ್ಲಿ ನಡೆಸುತ್ತಿರುವ ಸೇನಾ ತಾಲೀಮು ಅನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅಮೆರಿಕ, ಆಸ್ಟ್ರೇಲಿಯ, ಜಪಾನ್‌ಗಳು ಚೀನಾಗೆ ಆಗ್ರಹಪಡಿಸಿವೆ.
ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಬದ್ಧವಾಗಿರುವುದಾಗಿಯೂ ಈ ದೇಶಗಳು ಪ್ರತಿಪಾದಿಸಿವೆ.
ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದ್ದ ಹಿಂದೆಯೇ ಚೀನಾವು ಸೇನಾ ತಾಲೀಮು ಅನ್ನು ಚುರುಕುಗೊಳಿಸಿತ್ತು.
ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ಸ್ಥಾನದಲ್ಲಿರುವ ಪ್ರಥಮ ರಾಜಕಾರಣಿ ಪೆಲೋಸಿ. ಇವರ ಭೇಟಿ, ತೈವಾನ್ ಅಧ್ಯಕ್ಷ ಸಾಯ್ ಇಂಗ್ ವೆನ್ ಮತ್ತಿತರ ಮುಖಂಡರ ಜೊತೆಗೆ ನಡೆಸಿದ್ದ ಸಭೆಯು ಚೀನಾವನ್ನು ಕೆರಳಿಸಿತ್ತು.
ಅದರ ಹಿಂದೆಯೇ ಸೇನಾ ತಾಲೀಮು ಆರಂಭಿಸಿದ್ದ ಚೀನಾವು ತೈವಾನ್ ಆಸುಪಾಸಿನಲ್ಲಿ ಸಮುದ್ರವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸೇನಾ ತಾಲೀಮು ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಈ ಬೆಳವಣಿಗೆಯ ಹಿಂದೆಯೇ ಮೂರು ಪ್ರಮುಖ ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿದ್ದು, ಸೇನಾ ತಾಲೀಮು ಅನ್ನು ತಕ್ಷಣವೇ ಕೈಬಿಡಬೇಕು ಎಂದು ಚೀನಾಗೆ ಆಗ್ರಹಪಡಿಸಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್, ಆಸ್ಟ್ರೇಲಿಯ ವಿದೇಶಾಂಗ ಸಚಿವ ಪೆನ್ನಿ ವೊಂಗ್, ಜಪಾನ್‌ನ ಸಚಿವ ಹಯಾಷಿ ಯೊಷಿಮಸ ಅವರು ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ.