ತುಂಗಭದ್ರಾ ಭರ್ತಿಯಾಗಿ ನೀರನ್ನು ಹೊರ ಬಿಡಲಾಗಿದೆ.ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಶ್ರೀ ಗುರು ರಾಯರ ಆರಾಧನೆ ಹತ್ತಿರದಲ್ಲಿ ಇದ್ದು ಪ್ರತಿ ವರ್ಷದಂತೆ ಈ ಬಾರಿ ಮುಂಚಿತವಾಗಿ ಆಶೀರ್ವದಿಸಲು ಮಂತ್ರಾಲಯದ ಕಡೆ ಹರಿಯುತ್ತಿರುವ ದೃಶ್ಯ ಪ್ರವಾಸಿಗರ ಆಕರ್ಷಣೆಯಾಗಿದೆ.
ರಾಜ್ಯದ ಮೂರು ಜಿಲ್ಲೆಗಳು ಮತ್ತು ನೆರೆಯ ಆಂಧ್ರ-ತೆಲಂಗಾಣದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ನದಿ ಮತ್ತು ಕಾಲುವೆಗೆ ನೀರು ಹರಿಸಲಾಯಿತು.ತುಂಗಭದ್ರ ಮಂಡಳಿ ಕಾರ್ಯದರ್ಶಿ ಶ್ರೀ ಜಿ.ನಾಗಮೋಹನ್ ಪೂಜೆ ನೆರವೇರಿಸಿದ ಬಳಿಕ ಜಲಾಶಯದ 5 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು.ಒಳ ಹರಿವು ಹೆಚ್ಚಾದ ಕಾರಣ ಗುರುವಾರ ಪೂರ್ಣ ಪ್ರಮಾಣದ ನೀರನ್ನು ಹೋರಬಿಡಲಾಗಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿರುವುದರಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳು ಮುಳುಗಿವೆ. ಹತ್ತಿರದ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ರಾಮ ಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ತುಂಗಭದ್ರಾ ನದಿ ಪಾತ್ರಕ್ಕೆ ಹೊಂದಿಕೊಂಡಿದ್ದು, ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 28 ಗೇಟ್ ಗಳಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗುತ್ತಿದೆ. 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಒಂದು ಲಕ್ಷ ಕ್ಯುಸೆಕ್ ಗೂ ಅಧಿಕ ಒಳಹರಿವು ಬರುತ್ತಿದೆ ಎಂದು ತಿಳಿದುಬಂದಿದೆ. ಒಂದೂವರೆ ಲಕ್ಷ ಕ್ಯುಸೆಕ್ ನೀರು ಯಾವುದೇ ಕ್ಷಣದಲ್ಲೂ ನದಿಗೆ ಹರಿಸಲಾಗುವುದು. ಜನ ಮುನ್ನೆಚ್ಚರಿಕೆ ವಹಿಸಬೇಕೆಂದು ಜಲಾಶಯ ಆಡಳಿತ ಮಂಡಳಿ ತಿಳಿಸಿರುತ್ತಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಗಂಗಾವತಿ ಸೇತುವೆ ಮುಳುಗುವ ಹಂತಕ್ಕೆ ಬಂದಿದ್ದು, ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ. ವಾಹನಗಳು ಬುಕ್ಕಸಾಗರ-ಕಡೇಬಾಗಿಲು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ.
600 ವರ್ಷಗಳ ಹಿಂದೆ ನಿರ್ಮಿಸಿರುವ ಪುರಂದರ ಮಂಟಪದ ಕಂಬವನ್ನು ಎಎಸ್‌ಐ ನಿಯಮಿತ ನಿರ್ವಹಣೆಗೆ ವಹಿಸುತ್ತದೆ. ಎಷ್ಟೋ ವರ್ಷಗಳಿಂದ ಕಂಬಗಳು ಗಟ್ಟಿಯಾಗಿ ನಿಂತಿವೆ. ಆದರೆ ಕಳೆದ ಕೆಲ ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಮಂಟಪ ಮೊದಲಿಗಿಂತ ಹೆಚ್ಚು ಮುಳುಗಡೆಯಾಗುತ್ತಿದೆ. ನೀರಿನ ಮಟ್ಟ ಕಡಿಮೆಯಾದ ನಂತರ, ಎಎಸ್‌ಐ ತಂಡವು ಪರಿಸ್ಥಿತಿಯನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಅಗತ್ಯವಿದ್ದರೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಂಪಿ ಯುನೆಸ್ಕೋ ಪರಂಪರೆಯ ತಾಣವಾಗಿರುವುದರಿಂದ ಯಾವುದೇ ಸ್ಮಾರಕಗಳನ್ನು ಮರುಸ್ಥಾಪಿಸಲು ನಾವು ಸಿಮೆಂಟ್ ಸೇರಿದಂತೆ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ಕಲ್ಲು ಮತ್ತು ಕಲ್ಲಿನ ಚಪ್ಪಡಿಗಳನ್ನು ಬಳಸಲಾಗುತ್ತದೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಹಂಪಿಯಲ್ಲಿ ಮೂರು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿದ್ದವು. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇತರ ಸ್ಮಾರಕಗಳು ಶಿಥಿಲಗೊಂಡಿವೆ ಎನ್ನುತ್ತಾರೆ ಅಧಿಕಾರಿಗಳು.
ಹಂಪಿಗೆ ಬರುವ ಪ್ರವಾಸಿಗರು ಪುರಂದರ ಮಂಟಪದಲ್ಲಿ ಫೋಟೋಗಳನ್ನು ತೆಗೆಯುವುದು ಸಾಮಾನ್ಯ. ಹಂಪಿಯನ್ನು ಬೇರೆ ಅನೇಕ ಸ್ಮಾರಕಗಳಿದ್ದರೂ ಕೂಡ ಬಹುತೇಕ ಪ್ರವಾಸಿಗರು ಇಲ್ಲಿ ಫೋಟೋ ತೆಗೆದುಕೊಳ್ಳದೆ ಹಿಂತಿರುಗುವುದಿಲ್ಲ, ನೀರಿನ ಮಟ್ಟ ಸಹಜ ಮಟ್ಟಕ್ಕೆ ಬರಲು ಪ್ರವಾಸಿಗರು ಕೂಡ ಕಾಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನದಿ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದೆ.
ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಪ್ರವಾಹ ಭೀತಿ ಉಂಟಾಗಬಹುದು ಎಂದು ಈಗಾಗಲೇ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮಂಡಳಿ ತಿಳಿಸಿದೆ.
ಜಲಾಶಯ ಪೂರ್ಣವಾಗಿ ಡ್ಯಾಂ ಗೇಟ್ ಓಪನ್ ಮಾಡಿ ಹೊರ ಬಂದ ನದಿ ನೀರನ್ನು ನೋಡಲು ಹೆಚ್ಚು ಹೆಚ್ಚು ಜನ ಬರುತ್ತಿದ್ದಾರೆ. ಇದರಿಂದ ವಾಹನ ಓಡಾಟಕ್ಕೆ ಸಾಯಂಕಾಲ ತೊಂದರೆ ಆಗುತ್ತಿದೆ ಇದರುಂದ ಪೋಲಿಸ್ ಇಲಾಖೆ ಹರಸಹಾಸ ಮಾಡುತ್ತಿರುವುದು ಕಂಡುಬಂದಿದೆ.
ಮುರುಳೀಧರ್ ನಾಡಿಗೇರ್