ರಾಜ್ಯದ ಪ್ರಮುಖ ಶಕ್ತಿಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಹಾಗೂ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಸೇತುವೆ ನಿರ್ಮಾಣಕ್ಕಿದ್ದ ತೊಡಕುಗಳನ್ನು ಮೀರಿ ಪ್ರಮುಖ ಕಾಮಗಾರಿಯು ಅವಧಿಗೆ ಮುನ್ನವೇ ಮುಗಿದಿದೆ. ಕಾಮಗಾರಿಗೆ ಲಿಂಗನ ಮಕ್ಕಿ ಜಲಾಶಯದ ನೀರು ತೊಡಕಾಗುತ್ತಿದೆ ಎನ್ನಲಾಗಿತ್ತು.
ಕಾಮಗಾರಿಗೆ ಪ್ರಮುಖ ಹಂತವಾದ ಪೈಲ್ ಕ್ಯಾಪ್ ಅಳವಡಿಕೆಯೇ ಸವಾಲಾಗಿತ್ತು. 2 ವರ್ಷ ಕಳೆದರೂ 5 ಪೈಲ್ ಕ್ಯಾಪ್ ಮಾತ್ರ ಅಳವ ಡಿಸಲಾಗಿತ್ತು. ಬಾಕಿ 14 ಪೈಲ್ ಕ್ಯಾಪ್ ಅಳವಡಿಸಲು ಜಲಾಶಯದ ನೀರನ್ನು ಮೀಟರ್ ಗೆ ತಗ್ಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೇಡಿಕೆ ಇಟ್ಟಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿ 1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 1815 ಅಡಿವರೆಗೂ ನೀರು ಸಂಗ್ರಹವಾಗಿತ್ತು. ಆದ್ದರಿಂದ ನೀರನ್ನು ಒಂದೇ ಬಾರಿ ಇಳಿಸುವುದು ಸವಾಲಿನ ಕೆಲಸವಾಗಿತ್ತು. ಕೊನೆಗೂ ಮೇ ತಿಂಗಳಲ್ಲಿ ನೀರು ಇಳಿದು ಕಾಮಗಾರಿಗೆ ಅವಕಾಶ ಸಿಕ್ಕಿದೆ.
2021ರಲ್ಲಿ ಕೆಪಿಸಿ ತಾಂತ್ರಿಕ ಕಾರಣಗಳಿಂದ ಜಲಾಶಯದಲ್ಲಿ ಹೆಚ್ಚಿನ ನೀರನ್ನು ಉಳಿಸಿತ್ತು. ಇದರಿಂದ ಕಾಮಗಾರಿಗೆ ನಿರೀಕ್ಷಿತ ವೇಗ ಸಿಕ್ಕಿರಲಿಲ್ಲ. ಸೇತುವೆ ನಿರ್ಮಾಣಕ್ಕೆ 2023ರ ಮೇ ವರೆಗೂ ಸಮಯ ನೀಡಲಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ ಅನುಮಾನವಾಗಿತ್ತು.
ನೀರು ಕಡಿಮೆ ಮಾಡಿಕೊಟ್ಟರೆ 120 ದಿನದಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದಿದ್ದ ಎಂಜಿನಿಯರ್‌ಗಳು ದಾಖಲೆ ಸಮಯದಲ್ಲಿ ಮುಗಿಸಿರುವುದು ಸ್ಥಳೀಯರಲ್ಲಿ ಸಂತಸ ತಂದಿದೆ.
300 ಜನ ಸಿಬಂದಿ ದಿನಪೂರ್ತಿ ಕೆಲಸ ಮಾಡಿದೆ. ಮುಂಗಾರು ಪೂರ್ವ ಮಳೆ ಇದ್ದಾಗಲೂ ಕಾಮಗಾರಿ ನಿಲ್ಲಿಸಲಿಲ್ಲ. ಮೇ 10ಕ್ಕೆ ಆರಂಭವಾದ ಕೆಲಸ ಜೂ.20ಕ್ಕೆ ಪೂರ್ಣಗೊಂಡಿದೆ. 423 ಕೋಟಿ ರೂ. ವೆಚ್ಚದ 2125 ಮೀಟರ್ ಉದ್ದದ ಸೇತುವೆ ಒಂದೂವರೆ ವರ್ಷದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.