ಬಕ್ರೀದ್ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ವಿಶ್ವದಾದ್ಯಂತ ಇರುವ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆ ತೊಟ್ಟು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಮನೆ ಮಂದಿಯೆಲ್ಲಾ ಹಬ್ಬದೂಟ ಸವಿದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಸೌದಿ ಅರೇಬಿಯಾದಲ್ಲಿರುವ ಪವಿತ್ರ ಮೆಕ್ಕಾಗೆ ತೆರಳುವ ಹಜ್ ಯಾತ್ರೆಯ ಕೊನೆಯಲ್ಲಿ ಬಕ್ರೀದನ್ನು ಆಚರಿಸಲಾಗುತ್ತದೆ.
ಇದು ಅಲ್ಲಾಹುನ ಮಾರ್ಗದಲ್ಲಿ ನೀಡಲಾಗುವ ತ್ಯಾಗದ ಹಬ್ಬ ಎಂದು ಕೂಡ ಕರೆಯಲಾಗುತ್ತದೆ. ಅದಾ ಎಂಬುದು ಅರೇಬಿಕ್ ಪದವಾಗಿದ್ದು, ಇದರರ್ಥ ತ್ಯಾಗ, ಬಲಿದಾನ ಮತ್ತು ಈದ್ ಎಂದರೆ ಹಬ್ಬ.
ಬಕ್ರೀದ್ ಅನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಇದರರ್ಥವೇನೆ೦ದರೆ, ಬಲಿದಾನ.
ಈ ಶುಭದಿನದಂದು ಕುರಿಯೊಂದನ್ನು ಬಲಿ ನೀಡಲಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಬಹು ಸ್ವಾರಸ್ಯಕರವಾದ ಕಥೆಯಿದೆ. ಅದು ಬಲಿದಾನದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.
ಮುಸ್ಲಿಂ ಧರ್ಮದ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು. ಅವರು ದೇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಒಮ್ಮೆ ಅಲ್ಲಾಹನು ಹಜರತ್ ಇಬ್ರಾಹಿಂ ಅವರು ಕನಸಲ್ಲಿ ಬಂದು ನಿನಗೆ ಅತ್ಯಂತ ಪ್ರಿಯವಾದದ್ದನ್ನು ಅರ್ಪಿಸುವಂತೆ ಕೇಳಿದ್ದರಂತೆ. ಅದರಂತೆ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡಲು ಮುಂದಾದನು.
ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದನು.
ಈ ಸಂದರ್ಭದಲ್ಲಿ ದುಷ್ಟಶಕ್ತಿಗಳು ಅಲ್ಲಾಹ್‌ನ ಆಜ್ಞೆಯನ್ನು ಪಾಲಿಸದಂತೆ ಇಬ್ರಾಹಿಂ ಅವರಿಗೆ ಪ್ರಚೋದಿಸುತ್ತವೆ. ಆದರೆ, ದೇವರ ಮೇಲಿನ ತನ್ನ ಅನನ್ಯ ಭಕ್ತಿಯಿಂದ ಇಬ್ರಾಹಿಂ ದುಷ್ಟಶಕ್ತಿಗಳ ಮಾತು ಕೇಳದೆ ತನ್ನ ಪುತ್ರನನ್ನೇ ಬಲಿ ಕೊಡಲು ಸಿದ್ಧರಾಗುತ್ತಾರೆ. ಈ ವೇಳೆ, ಇವರ ಭಕ್ತಿಗೆ ಮೆಚ್ಚುವ ದೇವರಿಂದ ಮಗನ ಬದಲಿಗೆ ಕುರಿಯನ್ನು ಬಲಿ ಕೊಡುವಂತೆ ಆಜ್ಞೆಯಾಗುತ್ತದೆ. ಹೀಗೆ ದೇವರ ಮೇಲಿನ ಭಕ್ತಿಯ ಕಾರಣಕ್ಕೆ ತನ್ನ ಪುತ್ರನನ್ನೇ ಬಲಿಕೊಡಲು ಸಜ್ಜಾಗಿದ್ದ ಇಬ್ರಾಹಿಂ ಅವರ ತ್ಯಾಗ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಅಂದಿನಿಂದ, ಈದ್-ಉಲ್-ಅಝಾ ಅಥವಾ ಬಕ್ರೀದ್ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯ ಪ್ರಾರಂಭವಾಯಿತು.
ಈ ಹಬ್ಬದಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ.
ಈ ಹಬ್ಬದ ದಿನ ರಂಜಾನ್ ಹಬ್ಬದ ಹಾಗೆಯೇ ಈದ್‌ಗಾಹ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ನಮಾಜ್ ನಂತರ ಒಬ್ಬರನೊಬ್ಬರು ಆಲಿಂಗನ ಮಾಡಿಕೊಳ್ಳುವುದು, ಕೈ ಕುಲುಕುವುದು, ಈದ್ ಮುಬಾರಕ್ ಅಂದರೆ ಈ ಹಬ್ಬ ನಿಮಗೆ ಶುಭವನ್ನುಂಟು ಮಾಡಲಿ ಎನ್ನುವುದು ವಿಶೇಷ.