ಕಬ್ಬು ಬೆಳೆಯುವ ರೈತರಿಗೆ ಪ್ರತಿ ವರ್ಷ ವೆಚ್ಚ ಹೆಚ್ಚಾಗುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿ, ಕಟಾವು ಸಂದರ್ಭದಲ್ಲಿ ಮೋಸ ಮಾಡುತ್ತಿವೆ ಎಂದು ತಿಳಿದುಬಂದಿದೆ.
ಆದ್ದರಿಂದ ಪ್ರತಿ ಟನ್ ಕಬ್ಬಿನ ಬೆಲೆಯನ್ನು ಸರ್ಕಾರ ₹ 3500ರಂತೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತೂಕದಲ್ಲಿ ಮೋಸವನ್ನು ತಡೆಯಬೇಕು. ಎಫ್‌ಆರ್‌ಪಿ ಪ್ರಕಾರ ಕಬ್ಬು ಖರೀದಿಸಿದ 15 ದಿನಗಳ ಒಳಗಾಗಿ ಅದರ ಮೊತ್ತವನ್ನು ರೈತರಿಗೆ ವಿತರಿಸಬೇಕು ಎಂದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ರೈತ ಮುಖಂಡರ ಬೇಡಿಕೆಗಳನ್ನು ಆಲಿಸಿದರು. ಪ್ರತಿ ತಿಂಗಳೂ ರೈತರು, ರೈತ ಸಂಘಟನೆಗಳು ಹಾಗೂ ಕಾರ್ಖಾನೆ ಮಾಲೀಕರ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ರಾಜ್ಯ ಸಲಹಾ ಸಮಿತಿ ದರ ಪ್ರತಿ ಟನ್ನಿಗೆ ₹ 3500 ಇದೆ. ಕರ್ನಾಟಕ ಸರ್ಕಾರವು ₹ 3200 ಖರ್ಚು ತಗಲುತ್ತದೆ ಎಂದು ವರದಿ ನೀಡಿದೆ. ಪ್ರಸ್ತುತ ಕಬ್ಬಿನ ದರವನ್ನು ₹ 2300ರಂತೆ ಖರೀದಿ ಮಾಡುತ್ತಿವೆ. ಹಾಗಾಗಿ, ಕಬ್ಬು ಬೆಳೆಗಾರರ ನೆರವಿಗೆ ಬರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹ 3500 ದರ ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಯವರು ಅವೈಜ್ಞಾನಿಕ ಕಟಾವು ಮತ್ತು ಟೋಳಿ ಸಂಯೋಜನೆಯಿಂದಾಗಿ ರೈತರಿಂದ ಪ್ರತಿ ಎಕರೆ ಕಟಾವು ಮಾಡಲು ₹ 10ರಿಂದ 12 ಸಾವಿರ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸಕ್ಕರೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆ ಕರೆದು ಸುಲಿಗೆ ಆಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಿ, ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಹೂಗಾರ, ಧರ್ಮರಾಯ ಸಾಹು, ಶಾಂತವೀರಪ್ಪ ಕಲಬುರಗಿ ಹೆಬ್ಬಾಳ, ನರಹರಿ ಪಾಟೀಲ, ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತವೀರ ಪಾಟೀಲ ದಸ್ತಾಪೂರ, ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ನಾಗೇಂದ್ರರಾವ ದೇಶಮುಖ, ಜೇವರ್ಗಿ ತಾಲ್ಲೂಕು ಅಧ್ಯಕ್ಷ ಶರಣು ಬಿಲ್ಲಾಡ, ಕಮಲಾಪೂರ ತಾಲ್ಲೂಕು ಅಧ್ಯಕ್ಷ ಸತೀಶ ಹುಡಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.