ಕಳೆದ ನಾಲ್ಕು ತಿಂಗಳಿಂದ ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದ ಆರ್ಥಿಕತೆಗೆ ಪೆಟ್ಟು ನೀಡಲು ಜಗತ್ತಿನ ಏಳು ಶ್ರೀಮಂತ ದೇಶಗಳ ಕೂಟ ಜಿ7 ನಿರ್ಧರಿಸಿದ್ದು, ಅದಕ್ಕಾಗಿ ತಂತ್ರವನ್ನು ಹೆಣೆಯುತ್ತಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣದ ಮೇಲೆ ಮಿತಿ ಹೇರುವುದು ಹಾಗೂ ಅದು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕ ಏರಿಸುವ ಮೂಲಕ ಅದರ ಆದಾಯದ ಬಲ ಕುಂದಿಸುವ ಬಗ್ಗೆ ಶೃಂಗ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬ್ರಿಟನ್ ಸಹಿತ ಹಲವು ದೇಶಗಳು ಅದಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.
ರಷ್ಯಾದ ಸರಕುಗಳ ಮೇಲಿನ ಸುಂಕ ಹೆಚ್ಚಿಸುವುದು, ರಷ್ಯಾದ ನೂರಾರು ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸುವುದು ಮುಂತಾದ ಕ್ರಮಗಳ ಮೂಲಕವೂ ಯೂಕ್ರೇನ್ಗೆ ಬೆಂಬಲ ನೀಡುವ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ತೈಲ ಆಮದಿನ ಮಿತಿ ನಿಗದಿ ಪಡಿಸಿದರೆ ಅದರಿಂದ ರಷ್ಯಾದ ಆರ್ಥಿಕ ಪರಿಸ್ಥಿತಿ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಸ್ತ್ರತವಾದ ಯೋಜನೆಯನ್ನು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಮುಂದಿನ ದಿನಗಳಲ್ಲಿ ರೂಪಿಸಲಿದ್ದಾರೆ. ರಷ್ಯಾದಿಂದ ತೈಲ ಆಮದು ಕಡಿತ ಮಾಡುವ ಜಿ 7 ಕೂಟದ ನಿರ್ಧಾರಕ್ಕೆ ಬದ್ಧವಾದರೆ ಭಾರತಕ್ಕೆ ನಷ್ಟವಾಗುವ ಸಂಭವವಿದೆ. ಯಾಕೆಂದರೆ, ಭಾರತದ ತೈಲ ಆಮದಿನಲ್ಲಿ ರಷ್ಯಾದ ಪಾಲೇ ಶೇ.10ರಷ್ಟಿದೆ. ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಗ್ರಾಹಕ ದೇಶವಾಗಿದೆ. ಕಳೆದ 12 ತಿಂಗಳಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಶೇ. 0.2ರಿಂದ 50 ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ರಷ್ಯಾದಿಂದ 25 ಮಿಲಿಯ ಬ್ಯಾರೆಲ್ ತೈಲ ಆಮದು ಕೊಳ್ಳಲಾಗಿದೆ. ಪಾಶ್ಚಿಮಾತ್ಯ ದೇಶಗಳ ಒತ್ತಡವಿದ್ದರೂ ಭಾರತ ಹಾಗೂ ಚೀನಾ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿ ನ್ ಕೆಲ ದಿನಗಳ ಹಿಂದೆ ಹೇಳಿದ್ದರು.