ದೇಶಾದ್ಯಂತ ಒಂದೇ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಜು. 1ರಿಂದ ನಿಷೇಧಗೊಳ್ಳಲಿವೆ. ಅವುಗಳ ಉತ್ಪಾದನೆ, ವಿತರಣೆ, ಆಮದು, ಮಾರಾಟ, ದಾಸ್ತಾನು ಹಾಗೂ ಬಳಕೆಯನ್ನು ನಿರ್ಬಂಧಿಸ ಲಾಗಿದೆ.
ಈ ನಿಯಮ ಉಲ್ಲಂಘಿಸಿದವರಿಗೆ 5 ವರ್ಷಗಳ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಕರ್ನಾಟಕ ಸರ್ಕಾರವು 5 ವರ್ಷಗಳ ಹಿಂದೆಯೇ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ನಿಷೇಧ ಹೇರಿತ್ತು. ಆದ್ರೇ ಅದು ಇನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು, ಜು. 1 ರಿಂದ ರಾಜ್ಯದಲ್ಲೂ ಕಟ್ಟುನಿಟ್ಟಾಗಿ ಜಾರಿ ಮಾಡ ಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಸ್ಥಳೀಯ ಸಂಸ್ಥೆಗಳು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದಿದ್ದಾರೆ.
ಸರ್ಕಾರ ದ ಈ ನಿರ್ಧಾರದಿಂದ ಸುಮಾರು 88 ಸಾವಿರ ಪ್ಲಾಸ್ಟಿಕ್ ಉತ್ಪಾದಕ ಘಟಕಗಳು ದಿವಾಳಿಯಾಗಲಿವೆ. ಈ ಘಟಕಗಳ 10 ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಪ್ಲಾಸ್ಟಿಕ್ ತಯಾರಕರ ಸಂಘ ಆತಂಕ ವ್ಯಕ್ತಪಡಿಸಿದೆ.
ಪ್ಲಾಸ್ಟಿಕ್ ಕಡ್ಡಿ ಇರುವ ಧ್ವಜ, ಕ್ಯಾಂಡಿ, ಐಸ್‌ಕ್ರೀಂನ ಪ್ಲಾಸ್ಟಿಕ್ ಕಡ್ಡಿಗಳು, ಏಕಬಳಕೆಯ ಪ್ಲಾಸ್ಟಿಕ್ ಆಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ತಟ್ಟೆ, ಲೋಟ, ಚಾಕು, ಪೋರ್ಕ್, ಚಮಚ, ಸಿಹಿ ತಿಂಡಿ ಡಬ್ಬಿಗಳು, ಸಿಗರೇಟ್ ಪ್ಯಾಕ್‌ನ ಪ್ಲಾಸ್ಟಿಕ್ ರ್ಯಾಪರ್, ಆಮಂತ್ರಣ ಪತ್ರಿಕೆ ಗಿಫ್ಟ್ ರ್ಯಾಪರ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪಿವಿಸಿ ಪ್ಲಾಸ್ಟಿಕ್ ಬ್ಯಾನರ್‌ಗಳು, ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ.