ಚೀನಾ ಆಯೋಜಿಸಿರುವ 2 ದಿನಗಳ ಬ್ರಿಕ್ಸ್ ಶೃಂಗಸಭೆ ಬುಧವಾರ ಆರಂಭವಾಗಿದೆ. ವರ್ಚುವಲ್ ಆಗಿ ನಡೆಯುತ್ತಿರುವ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೊಡ್ಡ ಘೋಷಣೆಯನ್ನು ಮಾಡಿದ್ದಾರೆ.
ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮತ್ತು ಬ್ರಿಕ್ಸ್ ದೇಶಗಳ ವ್ಯಾಪಾರ ವ್ಯವಹಾರಗಳ ನಡುವಿನ ಸಂಪರ್ಕಗಳು ಗಮನಾರ್ಹವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಹಾಗಿದ್ದರೂ, ರಷ್ಯಾದಲ್ಲಿ ಯಾವ ಭಾರತೀಯ ಮಳಿಗೆಗಳು ತೆರೆಯಲ್ಪಡುತ್ತವೆ ಎಂಬುದನ್ನು ಪುಟಿನ್ ಸ್ಪಷ್ಟವಾಗಿ ಹೇಳಿಲ್ಲ.
ಇದರೊಂದಿಗೆ ಚೀನಾದ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳನ್ನು ರಷ್ಯಾದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಲು ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಇದರೊಂದಿಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ರಷ್ಯಾದ ಅಸ್ತಿತ್ವ ಹೆಚ್ಚುತ್ತಿದೆ.
2022 ರ ಮೊದಲ 3 ತಿಂಗಳಲ್ಲಿ ರಷ್ಯಾ ಮತ್ತು ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರವು ಶೇಕಡಾ 38 ರಷ್ಟು ಹೆಚ್ಚಾಗಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಬ್ರಿಕ್ಸ್ ದೇಶಗಳೊಂದಿಗೆ ರಷ್ಯಾದ ವ್ಯಾಪಾರವು $ 45 ಶತಕೋಟಿಗೆ ಏರಿದೆ.
ರಷ್ಯಾದಿಂದ ಭಾರತ ಖರೀದಿ ಮಾಡುವ ತೈಲ ಆಮದಿನ ಪಾಲು ಒಟ್ಟು ಖರೀದಿಗಿಂತ ಎರಡು ಪ್ರತಿಶತಕ್ಕಿಂತ ಹೆಚ್ಚಿಲ್ಲದೆ ಇದ್ದ ನಡುವೆಯೂ, ರಷ್ಯಾದಿಂದ ಹೆಚ್ಚಿನ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳೊಂದಿಗಿನ ಅದರ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದಿಂದ ತೈಲ ಖರೀದಿ ನಿರ್ಧಾರವನ್ನು ಭಾರತವೂ ಸಮರ್ಥಿಸಿಕೊಂಡಿದೆ.
ನಿರ್ಬಂಧಗಳ ಹೊರತಾಗಿಯೂ ಯುರೋಪ್ ರಷ್ಯಾದಿಂದ ತೈಲ ಮತ್ತು ಅನಿಲವನ್ನು ರಫ್ತು ಮಾಡುತ್ತಿದೆ ಎಂದು ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉತ್ತರ ನೀಡಿತ್ತು.
ರಷ್ಯಾ ಕೂಡ ಬ್ರಿಕ್ಸ್ ರಾಷ್ಟ್ರಗಳಿಗೆ ಗಮನಾರ್ಹ ಪ್ರಮಾಣದ ರಸಗೊಬ್ಬರವನ್ನು ರಫ್ತು ಮಾಡುತ್ತದೆ. ರಷ್ಯಾದ ಐಟಿ ಕಂಪನಿಗಳು ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ ಎಂದು ಪುಟಿನ್ ಹೇಳಿದ್ದಾರೆ.