ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ತನ್ನ ಬೊಕ್ಕಸಕ್ಕೆ ಭಾರವಾಗಿರುವ ನಿಗಮಗಳನ್ನು ವಿಲೀನಗೊಳಿಸಲು ತೀರ್ಮಾನಿಸಿದೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಆರ್. ಅಶೋಕ್ ಅವರು
ಒಂದೊಂದು ಇಲಾಖೆಯಲ್ಲಿ ನಾಲ್ಕೈದು ನಿಗಮಗಳಿದ್ದು, ಬಹುತೇಕ ನಿಗಮಗಳಿಗೆ ಮಾಡಲು ಕೆಲಸವೇ ಇಲ್ಲ. ಇಂತಹ ನಿಗಮಗಳಿಗೆ ಹಲವು ಸಿಬ್ಬಂದಿ, ಅಧಿಕಾರಿಗಳಿದ್ದು, ವಿನಾಕಾರಣ ಕಾರುಗಳು ಬಳಕೆಯಾಗುತ್ತಿವೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಹಣ್ಣಿನ ರಸ ತೆಗೆಯಲು, ರಬ್ಬರ್ ರಸ ತೆಗೆಯಲು ಸಹ ನಿಗಮಗಳಿವೆ. ಇಂತಹ ನಿಗಮಗಳಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಭಾರ. ಈ ಭಾರವನ್ನು ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ನಿಗಮಗಳಿದ್ದರೂ, ಅಲ್ಲಿ ಬಹಳ ಕೆಲಸಗಳಿವೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಂತಹ ಪ್ರಮುಖ ಇಲಾಖೆಗಳಲ್ಲಿರುವ ನಿಗಮಗಳನ್ನು ಮುಟ್ಟಲು ಹೋಗುವುದಿಲ್ಲ. ಆದರೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಒಂದು ನಿಗಮದ ಜಾಗದಲ್ಲಿ ಹಲವು ನಿಗಮಗಳಿದ್ದು, ಇವನ್ನು ವಿಲೀನಗೊಳಿಸಿ ಆಯಾ ಇಲಾಖೆಯಲ್ಲಿ ಒಂದೇ ನಿಗಮವಿರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.