ಹಿಜಾಬ್ ವಿವಾದ ಕಳೆದ 3-4 ತಿಂಗಳಿನಿಂದ ರಾಜ್ಯದಲ್ಲಿ ಸುದ್ದಿಯಾಗಿತ್ತು. ಎಲ್ಲೆಡೆ ಈ ವಿವಾದ ತಣ್ಣಗಾಗಿದೆ. ಆದರೆ, ಮಂಗಳೂರಿನಲ್ಲಿ ಮಾತ್ರ ಈ ವಿವಾದ ಬಗೆ ಹರಿಯುವ ಹಾಗೆ ಕಾಣುತ್ತಿಲ್ಲ.
ಮಂಗಳೂರು ವಿಶ್ವವಿದ್ಯಾಲಯ ಅಧೀನದ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 5 ಮುಸ್ಲಿಂ ವಿದ್ಯಾರ್ಥಿನಿಯರು ಟ್ರಾನ್ಸ್ಫರ್ ಸರ್ಟಿಫಿಕೇಟ್ ಪಡೆಯಲು ಮುಂದಾಗಿದ್ದಾರೆ.
ಮಂಗಳೂರು ವಿ ವಿ ಕಾಲೇಜಿನಲ್ಲಿ ಇತ್ತೀಚೆಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿ ನಿಯಮಾವಳಿಗಳನ್ನು ಮಾಡಲಾಗಿತ್ತು. ಆ ನಂತರ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು.
ಮಂಗಳೂರು ವಿ ವಿ ಕಾಲೇಜಿನಲ್ಲಿ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಇವರಲ್ಲಿ 15 ಮಂದಿ ಹಿಜಾಬ್ ತೆಗೆದು ಕಾಲೇಜಿಗೆ ಬರಲು ನಿರಾಕರಿಸಿದ್ದರು.
ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ಅವರಿಗೆ ವರ್ಗಾವಣೆ ಪಾತ್ರ ನೀಡಲು ವ್ಯವಸ್ಥೆ ಮಾಡಲಾಗುವುದೆಂದು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದರು.
ಮಂಗಳೂರು ವಿವಿಯ ಹಂಪನಕಟ್ಟೆ ಕಾಲೇಜಿನ 5 ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ ಪಡೆದು ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.