ಅಪರಿಚಿತವಾದ ಈ ಪ್ರಪಂಚದಲ್ಲಿ ಪರಿಚಿತರಾದ ಮೊದಲ ವ್ಯಕ್ತಿಗಳು ಅಪ್ಪ ಅಮ್ಮ. 9 ತಿಂಗಳು ಕತ್ತಲ ಗೂಡಿನಿಂದ ಹೊರಲೋಕಕ್ಕೆ ಕಾಲಿಟ್ಟಾಗ ಕಂಡ ಪ್ರತ್ಯಕ್ಷ ದೇವರೂ ಹೌದು.
ಬದುಕು ಕೊಟ್ಟಿದ್ದು ಅವಳಾದರೆ, ಬದುಕಲು ಕಲಿಸಿಕೊಟ್ಟಿದ್ದು ನೀನು ಅಪ್ಪ. ಜೀವ ಕೊಟ್ಟಿದ್ದು ಅವಳಾದರೆ ಈ ಜೀವಕ್ಕೆ ಒಂದು ರೂಪ ಕೊಟ್ಟಿದ್ದು ನೀನು. ಕಾಲಿಗೆ ಚಪ್ಪಲಿ ತೊಡಿಸಿದ್ದು ಅವಳಾದರೆ , ಕೈಹಿಡಿದು ನಡಿಗೆ ಕಲಿಸಿದ್ದು ನೀನು. ನಾನು ಬಿದ್ದಾಗ ಅಮ್ಮಾ ಎಂದು ಕೂಗಿದರೂ ಓಡಿಬಂದು ಮುದ್ದು ಮಾಡಿ ಚಾಕ್ಲೆಟ್ ಕೊಡಿಸಿದ್ದು ನೀನು. ಶಾಲೆಗೆ ಹೊರಟಾಗ ಊಟದ ಡಬ್ಬಿ ಪ್ಯಾಕ್ ಮಾಡಿಕೊಟ್ಟಿದ್ದು ಅವಳಾದರೆ, ಸ್ಕೂಲ್ ಗೇಟ್ ವರೆಗೂ ಬಂದು ಕಳುಹಿಸಿದ್ದು ನೀನು. ಮಳೆಗಾಲದಲ್ಲಿ ಬೆಚ್ಚನೆಯ ಮಡಿಲಲ್ಲಿ ಮಲಗಿಸಿದ್ದು ಅವಳಾದರೆ, ಆಚೆ ಆಕಾಶದಲ್ಲಿ ಕಾಮನಬಿಲ್ಲು ತೋರಿಸಿದ್ದು ನೀನು. ಹಬ್ಬಕ್ಕೆ ಹೋಳಿಗೆ ಮಾಡಿದ್ದು ಅವಳಾದರೆ, ಹೊಸ ಬಟ್ಟೆ ತಂದಿದ್ದು ನೀನು. ಸ್ವೆಟರ್ ತೊಡಿಸಿದ್ದು ಅವಳಾದರೆ, ಸ್ವೆಟರ್ ಕೊಡಿಸಿದ್ದು ನೀನು.
ರುಚಿ ರುಚಿಯಾದ ಅಡುಗೆ ತಯಾರಿಸುವುದು ಅವಳಾದರೆ ಹೊತ್ತು ತರುವುದು ನೀನು. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಜೊತೆಗಿದ್ದಿದ್ದು ಅವಳಾದರೆ ಮನದ ಭಯವನ್ನು ದೂರ ಮಾಡಿ ದೈರ್ಯ ತುಂಬಿದ್ದು ನೀನು. ಮುದ್ದು ಮಾಡಿದ್ದು ಅವಳಾದರೆ ಬುದ್ಧಿ ಹೇಳಿದ್ದು ನೀನು. ನನ್ನನ್ನ ಕಣ್ಣ ರೆಪ್ಪೆ ತರಹ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದುಕೊಂಡಿದ್ದು ಅವಳಾದರೆ, ಹಾಸ್ಟೆಲ್ ನಲ್ಲಿ ಬಿಟ್ಟು ಪ್ರಪಂಚ ತಿಳಿಯುವ ಹಾಗೆ ಮಾಡಿದ್ದು ನೀನು. ಪ್ರತಿ ಹಬ್ಬಕ್ಕೂ ಫೋನ್ ಮಾಡಿ ನೆನಪಿಸುತ್ತಾ ಇದ್ದಿದ್ದು ಅವಳಾದರೆ, ಓಡಿಬಂದು ಮನೆಗೆ ಕರೆಯುತ್ತಿದ್ದದ್ದು ನೀನು.
ಹೊರಗಿನ ತಿಂಡಿ ತಿನ್ನಬೇಡ ಎಂದು ಬೈಯುವುದು ಅವಳಾದರೆ ಅಮ್ಮನಿಗೆ ತಿಳಿಯದ ಹಾಗೆ ನನ್ನ ಇಷ್ಟದ ತಿಂಡಿಗಳನ್ನು ಕೊಡಿಸಿದ್ದು ನೀನು. ಕೆಲಸ ಮಾಡಲಿಲ್ಲವೆಂದರೆ ಗದರುವುದು ಅವಳಾದರೆ ನನ್ನ ಮಗಳು ಇನ್ನೂ ಚಿಕ್ಕವಳು ಎಂದು ನನ್ನ ಪರವಾಗಿ ಅಮ್ಮನ ವಿರುದ್ಧ ಹೋಗಿದ್ದು ನೀನು.
ನಾನು ಅತ್ತಾಗ ಕಣ್ಣೊರೆಸಿದ್ದು ಅವಳಾದರೆ, ನನ್ನ ಮೊಗದಲ್ಲಿ ಮತ್ತೆ ನಗು ತರಿಸುತ್ತಾ ಇದ್ದಿದ್ದು ನೀನು.
ಹತ್ತು ರುಪಾಯಿ ಖರ್ಚು ಮಾಡಬೇಕಾದಾಗ ಹತ್ತು ಸಲ ಯೋಚಿಸುತ್ತಿದ್ದ ನೀನು ಕಷ್ಟವಾದರೂ ಅದನ್ನು ತೋರಿಸಿ ಕೊಳ್ಳದೆ ನನ್ನ ಪ್ರತಿ ಅವಶ್ಯಕತೆಗಳನ್ನ ಪೂರೈಸುತ್ತಿದ್ದುದು ನೀನು. ನಾನು ಕೇಳಿದಷ್ಟು ಹಣ ಕೊಡುತ್ತಿದ್ದೆ. ಕೌನ್ಸಿಲಿಂಗ್ ನಲ್ಲಿ ನೀ ಕೂತು ನೀಡಿದ ಮಾರ್ಗದರ್ಶನ, ಎಲ್ಲ ಪ್ರತಿ ಸೆಮಿಸ್ಟರ್ ನ ಫೀಸ್, ನಾನು ಕೊಂಡ ಪುಸ್ತಕದ ಬೆಲೆ, ನಾನು ಸವೆಸಿದ ಚಪ್ಪಲಿಯ ಹಣ, ನನ್ನ ಬ್ಯಾಗಿಗೋ … ಮೊಬೈಲ್ ಸೆಟ್ಟಿಗೊ, ಅದರ ರಿಚಾರ್ಜ್ ಗೊ ನೀನು ಸುರಿಸಿದ ದುಡ್ಡು, ನನ್ನ ಪ್ರತಿ ಖರ್ಚಿನ ಹಿಂದಿದ್ದ ನಿನ್ನ ಬೆವರಿನ ಹನಿಗಳು.
ಇಂದು ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ನೀನು ಬಾರದ ಲೋಕಕ್ಕೆ ಹೋಗಿದ್ದರೂ, ನನ್ನ ಜೊತೆ ಸದಾ ಇದ್ದು ಆಶೀರ್ವದಿಸಿದಂತೆಯೇ ಭಾಸವಾಗುತ್ತದೆ. ನನ್ನ ಸಂತೋಷಕ್ಕಾಗಿ ಹಗಲು-ರಾತ್ರಿಯೆನ್ನದೆ ದುಡಿದು ಬದುಕಿನ ತೊಂಬತ್ತೊಂಬತ್ತು ಪಾಲು ಕಷ್ಟ ನೋವು ಸಮಸ್ಯೆಗಳ ನಡುವೆ ಒದ್ದಾಡುತ್ತಿದ್ದರೂ ನಿನ್ನ ಮೊಗದಲ್ಲಿದ್ದ ಆ ಮುಗ್ದ ನಗು …ನನ್ನ ಜೀವನಕ್ಕೆ ಸ್ಫೂರ್ತಿ.
ನನಗೊಂದು ಬದುಕು ಕಟ್ಟಿಕೊಡಲು ನೀನು ಸುರಿಸಿದ ಬೆವರು, ಅವಳು ಸುರಿಸಿದ ಕಣ್ಣೀರು….
ಇಷ್ಟೆಲ್ಲಾ ತ್ಯಾಗ ಮಾಡಿದ ಮೇಲೂ ಮತ್ತೆ ಕೇಳುತ್ತಿದ್ದೆ , ಮತ್ತೇನು ಬೇಕೆಂದು?.. ಹಾಗಾಗಿ ನೀನು ನನ್ನ ಆತ್ಮೀಯ ….