ಮೈಸೂರು ನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಜೂನ್ 21ಕ್ಕೆ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳ ತಪಾಸಣೆಗೆ ಸಹಕರಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಬಾಟಲ್, ಗಾಜಿನ ಬಾಟಲ್, ಬ್ಯಾಗ್, ವ್ಯಾನಿಟಿ ಬ್ಯಾಗ್ ಹರಿತವಾದ ವಸ್ತು ಯಾವುದೇ ರೀತಿಯ ಆಯುಧಗಳು, ಲೋಹದ ವಸ್ತುಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ, ಬಾವುಟ ಭಿತ್ತಿಪತ್ರಕ್ಕೆ ಅವಕಾಶವಿಲ್ಲ. ಮೊಬೈಲ್ ಹೊರತುಪಡಿಸಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇಲ್ಲ. ಕ್ಯಾಮರಾ, ವಿಡಿಯೋಕ್ಯಾಮರಾ, ಪವರ್ ಬ್ಯಾಂಕ್ ಇಯರ್‌ಫೋನ್‌ಗೆ ಅವಕಾಶ ಇಲ್ಲ. ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಕರ್ಕಶ ಶಬ್ದ ಮಾಡುವ ಪೀಪಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಲಾಗಿದೆ.
ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟದ ಸಾಮಾನು ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು. ಇದು ಜೂನ್ 20ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಫಲಾನುಭವಿಗಳ ಸಂವಾದ ಸಮಾವೇಶಕ್ಕೂ ಅನ್ವಯವಾಗಲಿದೆ. ಕೇಂದ್ರದ ಯೋಜನೆಯ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.