ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿ,ಮೋದಿ, ಎಂದು ಘೋಷಣೆ ಕೂಗಿದ್ದಾರೆ.
ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಈ ನಡುವೆ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳೂ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು.
ಮುಂಚೆ ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಹಗರಣದಿಂದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಇದಕ್ಕೆ, ನ್ಯಾಯ ಸಿಗುವಂತೆ ಮಾಡಬೇಕು. ಅಕ್ರಮ ಆಗದಂತೆ ಸೂಕ್ತ ರೀತಿಯಲ್ಲಿ ಮರು ಪರೀಕ್ಷೆ ಕೈಗೊಳ್ಳಬೇಕು ಎಂದು ಪಿಎಸ್‌ಐ ವಂಚಿತ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಅನ್ಯಾಯ ಆಗಿರುವುದು 56 ಸಾವಿರ ಅಭ್ಯರ್ಥಿಗಳಿಗಲ್ಲ. ಪರೀಕ್ಷೆ ಬರೆದು ಪಾಸಾದ 545 ಅಭ್ಯರ್ಥಿಗಳಿಗೆ ಎಂದು ಹೇಳಿದ್ದಾರೆ.
ಈ ಹೇಳಿಕೆಯಿಂದ ಕೆರಳಿದ ಪಿಎಸ್‌ಐ ಅಭ್ಯರ್ಥಿಗಳು ಕುಮಾರಸ್ವಾಮಿ ಅವರ ವಿರುದ್ದವೇ ಪ್ರತಿಭಟನೆ ನಡೆಸಿದ್ದಾರೆ. ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇಷ್ಟಲ್ಲದೆ ಕುಮಾರಸ್ವಾಮಿ ಕವಿವಿಯಿಂದ ಹೊರಡುವಾಗ ಅವರ ಕಾರಿನತ್ತ ನುಗ್ಗಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ಯುವಕರಿಗೆ ಲಾಠಿ ಚಾರ್ಜ್ ಮಾಡಿದ್ದಾರೆ.