ಈಗಾಗಲೇ ಘೋಷಿಸಿರುವಂತೆ ಜೂನ್ ಮೂರನೇ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ.
ಜೂನ್ ಮೂರನೇ ವಾರದಲ್ಲಾದರೆ ಜೂ.24ರಂದು, ನಾಲ್ಕನೇ ವಾರದಲ್ಲಾದರೆ ಜೂ.28ಕ್ಕೆ ಫಲಿತಾಂಶ ನೀಡಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಆದರೆ, ಇದನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ರಾಮಚಂದ್ರನ್ ನಿರಾಕರಿಸಿದ್ದಾರೆ.
ಮೂರನೇ ವಾರದಲ್ಲೇ ಫಲಿತಾಂಶ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ನಿರೀಕ್ಷೆಯಂತೆ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ. ಅನಿರೀಕ್ಷಿತ ಕಾರಣಗಳಿಂದ ಸಾಧ್ಯವಾಗಿದ್ದರೆ ಮಾತ್ರ ಫಲಿತಾಂಶ ಪ್ರಕಟಣೆ ನಾಲ್ಕನೇ ವಾರದಲ್ಲಿ ಆಗಬಹುದು. ಆದರೆ, ಇನ್ನೂ ಯಾವುದೇ ತಾತ್ಕಾಲಿಕ ದಿನಾಂಕ ನಿಗದಿ ಪಡಿಸಿಲ್ಲ.
ಇಲಾಖೆ ಮೂಲಗಳ ಪ್ರಕಾರ ಮೌಲ್ಯಮಾಪನ ಕಾರ್ಯ ಮೇ 23ರಿಂದ ಆರಂಭವಾಗಿದ್ದು, ಕಳೆದ ಎಂಟು ದಿನಗಳಲ್ಲಿ ಶೇ.50ರಷ್ಟುಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ.
ಕಲಾ ಮತ್ತು ವಾಣಿಜ್ಯ ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರೀಕ್ಷೆಗಿಂತ ವೇಗವಾಗಿ ನಡೆದಿದೆ. ವಿಜ್ಞಾನ ವಿಷಯಗಳ ಮೌಲ್ಯಮಾಪನ ಕಾರ್ಯವೂ ನಿರೀಕ್ಷೆಯಂತೆ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ಬಹುತೇಕ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರದ 10 ದಿನಗಳ ಒಳಗೆ ಫಲಿತಾಂಶ ಪ್ರಕಟಣೆಯ ಮಟ್ಟಕ್ಕೆ ಸಿದ್ಧವಾಗಲಿದೆ.
ಮೌಲ್ಯಮಾಪನ ಪೂರ್ಣಗೊಂಡು ಫಲಿತಾಂಶ ಪ್ರಕಟಣೆಗೆ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಅಧಿಕೃತ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲಿಗೆ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ.
ಏ.22ರಿಂದ ಮೇ 18ರವರೆಗೆ ನಡೆದಿದ್ದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ 6.84 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.