ಥಾಮಸ್ ಕಪ್‌ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಇದೇ ಪ್ರಥಮ ಬಾರಿಗೆ ಥಾಮಸ್ ಕಪ್‌ನಲ್ಲಿ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದೆ.
ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.
ಫೈನಲ್‌ನಲ್ಲಿ ಭಾರತ ತಂಡಕ್ಕೆ ಇಂಡೋನೇಷ್ಯಾ ಸವಾಲೊಡ್ಡಲಿದೆ.
ಭಾರತ 1979ರ ನಂತರ ಥಾಮಸ್ ಕಪ್‌ನ ಸೆಮಿ ಫೈನಲ್ ಹಂತಕ್ಕೇರಲು ವಿಫಲವಾಗಿತ್ತು. ಈ ಬಾರಿ ಅದನ್ನು ಮೀರಿದ ಸಾಧನೆ ಭಾರತ ಮಾಡುವಲ್ಲಿ ಯಶಸ್ವಿಯಾಗಿದೆ. 2016ರ ಚಾಂಪಿಯನ್ ತಂಡ ಡೆನ್ಮಾರ್ಕ್ ವಿರುದ್ಧ ಭಾರತ ಗೆಲುವು ದಾಖಲಿಸಲು ಯಶಸ್ವಿಯಾಯಿತು.
ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಗೆಲುವಿನ ಮೂಲಕ ಸ್ಪರ್ಧೆಯಲ್ಲಿ ಮುಂದುವರಿಯುವಂತೆ ಮಾಡಿದ್ದರು.
2-2 ಅಂತರದಿಂದ ಹಣಾಹಣಿ ಸಮಬಲಗೊಂಡಿದ್ದಾಗ ಮತ್ತೊಮ್ಮೆ ಪ್ರಣಯ್ ಪಾತ್ರ ನಿರ್ಣಾಯಕವಾಗಿತ್ತು. ವಿಶ್ವದ 13 ನೇ ಶ್ರೇಯಾಂಕದ ರಾಸ್ಮಸ್ ಗೆಮ್ಕೆ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಕಣಕ್ಕಿಳಿದ ಪ್ರಣಯ್ ಈ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾದರು. ನಂತರ ಚಿಕಿತ್ಸೆ ಪಡೆದು ಆಟವನ್ನು ಮುಂದುವರಿಸಿದ ಪ್ರಣಯ್ ಭಾರತಕ್ಕೆ ಗೆಲುವನ್ನು ತಂದಿತ್ತರು. 13-21 21-9 21-12 ಅಂತರದಿಂದ ರಾಸ್ಮಸ್ ಗೆಮ್ಕೆ ವಿರುದ್ಧ ಪ್ರಣಯ್ ಗೆಲುವು ಸಾಧಿಸಿ 3-2 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಹಂತಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯದ ನಂತರ ಮಾತನಾಡಿದ ಪ್ರಣಯ್ ನನ್ನ ತಲೆಯಲ್ಲಿ ಬಹಳಷ್ಟು ಸಂಗತಿಗಳು ಓಡಾಡುತ್ತಿತ್ತು. ಅದರಲ್ಲೂ ಪಾದ ಉಳುಕಿದ ಸಾಮಾನ್ಯಕ್ಕಿಂತ ಹೆಚ್ಚು ನೋಯುತ್ತಿತ್ತು. ಆದ್ದರಿಂದ, ಸ್ವಲ್ಪ ಹಿನ್ನಡೆಯಾಯಿತು. ಈ ಸಂದರ್ಭದಲ್ಲಿ ನಾನು ಏನು ಮಾಡಬೇಕೆಂದು ಯೋಚಿಸುತ್ತಿದ್ದೆ ಎಂದು ಪಂದ್ಯದ ನಂತರ ಮಾತನಾಡಿದ್ದಾರೆ.
ಫೈನಲ್ ಹಂತದಲ್ಲಿ ಭಾರತಕ್ಕೆ ಮತ್ತಷ್ಟು ಬಲಿಷ್ಠ ಸವಾಲು ಎದುರಾಗಿದೆ. 14 ಬಾರಿಯ ಚಾಂಪಿಯನ್ ತಂಡ ಇಂಡೋನೇಷ್ಯಾ ಭಾರತಕ್ಕೆ ಸವಾಲೊಡ್ಡಲಿದೆ. ಥಾಮಸ್ ಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಇಂಡೋನೇಷ್ಯಾ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 3-2 ಅಂತರದಿಂದ ಮಣಿಸಿ ಫೈನಲ್ ಹಂತಕ್ಕೇರಿದೆ.