ಆಕಾಶದಷ್ಟು ಎತ್ತರಕ್ಕೆ ಕಾಣುವ ಕಟ್ಟಡ. ಒಳಗೆ ಹೋದರೆ ನಿಸರ್ಗ ಸೌಂದರ್ಯ. ಹಾಗೆ ಮುಂದೆ ನಡೆದರೆ, ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನಲೋಕ ಮ್ಯೂಸಿಯಂ ಅಥವಾ ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ.
ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಇನ್ಮುಂದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 5 ಎಕರೆ ಪ್ರದೇಶದಲ್ಲಿ ಈ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಭಗವದ್ಗೀತೆ ಹಾಗೂ ಜನರಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಪರಿಚಯಿಸುವ ಸದುದ್ದೇಶದಿಂದ ಇಂತಹದೊಂದು ಮ್ಯೂಸಿಯಂ ಅನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 108 ಸ್ಟಾಲ್ ಮೂಲಕ ಭಗವದ್ಗೀತೆಯ ಸಾರವನ್ನು ಸಾರ್ವಜನಿಕರಿಗೆ ಅರ್ಥೈಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣಗೊಂಡಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡುವ ಮುಖಾಂತರ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.
