ರೈತರ ಕಬ್ಬಿನ ಬಾಕಿ ಬಿಲ್ ಪಾವತಿಗೆ ಸರ್ಕಾರ ಸೂಚನೆ ಕೊಟ್ಟರೂ ಸಹ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕಬ್ಬು ಪೂರೈಸಿದ 15 ದಿನಗಳಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿಸಬೇಕೆಂಬ ನಿಯಮಕ್ಕೆ ಬೆಲೆಯೇ ಕೊಡುತ್ತಿಲ್ಲ.
ಈ ನಿಯಮಗಳು ಕಾಗದಕ್ಕೆ ಮಾತ್ರ ಸೀಮಿತ. ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಹಣ ಕೊಡದೇ ಸಕ್ಕರೆ ಕಾರ್ಖಾನೆಗಳು ರೈತರ ಗಾಯದ ಮೇಲೆ ಬರೆ ಎಳೆದಿವೆ.
ಬೆಳಗಾವಿ ಜಿಲ್ಲೆಯ ಒಟ್ಟು 21 ಸಕ್ಕರೆ ಕಾರ್ಖಾನೆಗಳು 2021-22ನೇ ಸಾಲಿನಲ್ಲಿ ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ 889.61 ಕೋಟಿ ಎಂಬುವುದು ಈಗ ಇದು ಬಹಿರಂಗಗೊಂಡಿದೆ. ಕೇವಲ ಒಂದೇ ಜಿಲ್ಲೆಯಲ್ಲಿ ಇಷ್ಟೊಂದು ಮೊತ್ತ ಇರಬೇಕಾದರೆ, ಬೇರೆ ಜಿಲ್ಲೆಗಳಲ್ಲಿ ಇನ್ನೆಷ್ಟು ಇರಬಹುದು.
ಕಳೆದ ಎರಡು ವರ್ಷಗಳಿಂದ ರೈತರು ಕೊರೋನಾ ಸಂಕಷ್ಟದಿಂದ ನಲುಗಿಹೋಗಿದ್ದಾರೆ. ಈಗ ಕಬ್ಬಿನ ಬಾಕಿ ಬಿಲ್ ಬಾರದಿರುವುದು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತಾಗಿದೆ. ಒಂದೆಡೆ ಕಬ್ಬಿನ ಬಾಕಿ ಬಿಲ್ ನೀಡುವಂತೆ ರೈತರ ಹೋರಾಟ ಇನ್ನೂ ನಿಂತಿಲ್ಲ. ಇನ್ನೊಂದೆಡೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಹಣ ಪಾವತಿಸದೇ ರೈತರನ್ನು ಸತಾಯಿಸುವುದು ತಪ್ಪಿಲ್ಲ.
ರೈತರು ಸಾಲ ಮಾಡಿ ಕಬ್ಬು ಬೆಳೆದು, ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಬಾಕಿ ಹಣ ಪಾವತಿಸುವಂತೆ ಸಚಿವರು ಆದೇಶ ಮಾಡಿದ್ದರೂ, ಆ ಆದೇಶಕ್ಕೆ ಕ್ಯಾರೇ ಅನ್ನುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ತಮ್ಮ ಹಠಮಾರಿತನ ನೀತಿಯನ್ನು ಮುಂದುವರಿಸಿವೆ. ರೈತರು ಸಂಕಷ್ಟದಲ್ಲಿದ್ದರೂ ಕಾರ್ಖಾನೆಗಳು ಬಾಕಿ ಹಣ ನೀಡುತ್ತಿಲ್ಲ. ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರು ಗಡುವು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಸಹಕಾರ ಕ್ಷೇತ್ರಗಳಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾರೆ. ಸಾಲ ಪಡೆದಿದ್ದರೂ ರೈತರ ಕಬ್ಬಿನ ಬಾಕಿ ಹಣ ಪಾವತಿಸುತ್ತಿಲ್ಲ. ತಾವು ಸಾಲ ಪಡೆದುಕೊಂಡ ಬ್ಯಾಂಕಿಗೂ ಸಾಲ ಮತ್ತು ಬಡ್ಡಿಯನ್ನೂ ಕೆಲವನ್ನು ಹೊರತುಪಡಿಸಿ ಮತ್ತೆ ಕಲವು ಕಾರ್ಖಾನೆಗಳು ಪಾವತಿಗೇ ಮುಂದಾಗದಿರುವುದು ಕಂಡುಬಂದಿದೆ.