ಯುವಜನರು ದೇಶದ ಆಸ್ತಿ. ಆದರೆ, ಅದೇ ಆಸ್ತಿ ಈಗ ಮಾದಕ ವ್ಯಸನಗಳ ಬಲೆಗೆ ಬಿದ್ದು ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನ, ಬದುಕನ್ನ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿಯವರು ತಿಳಿಸಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ವಿಜಯ ಕರ್ನಾಟಕ , ಹಾಗೂ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನ ವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು. ನಾನೊಬ್ಬನೇ ಮಾದಕ ವಸ್ತುಗಳಿಂದ ದೂರ ಇದ್ದರೆ ಆಗುವುದಿಲ್ಲ. ಸಮುದಾಯವು ವ್ಯಸನಗಳಿಂದ ಮುಕ್ತವಾಗಬೇಕು. ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಪ್ರತಿಯೊಬ್ಬರೂ ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾತನಾಡಿ, ಡ್ರೆಗ್ಸ್ ಬಳಕೆಯು ಕೇವಲ ವೈಯಕ್ತಿಕ ಬದುಕು ಮಾತ್ರವಲ್ಲದೆ, ಅವರ ಇಡೀ ಕುಟುಂಬವನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತದೆ. ಮಾದಕ ವ್ಯಸನವು ಬಡವ ಶ್ರೀಮಂತರೆನ್ನದೆ ಎಲ್ಲ ವರ್ಗದವರನ್ನೂ ಆವರಿಸಿಕೊಂಡಿದೆ. ದಯವಿಟ್ಟು ತಪ್ಪು ಹೆಜ್ಜೆ ತುಳಿದು ನಿಮ್ಮ ಬದುಕು ಮತ್ತು ಕುಟುಂಬವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಲ್ಲವೂ ಎದುರಾಗುತ್ತವೆ. ಉಜ್ವಲ ಮತ್ತು ಸುಂದರ ಬದುಕಿಗಾಗಿ ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗಡೆ ಮಾತನಾಡಿ, ಮಾತು ರೋಗಿಗಳಿಗೆ ದಾಸರಾಗಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿರುವ ಸಂಗತಿ ಭಯ ಮೂಡಿಸುತ್ತದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಡಿವೈ ಎಸ್ ಪಿ ಬಾಲರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಸಂತೋಷ್ ಮತ್ತು ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು