ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ರಷ್ಯಾ, ಈಗ ಉಕ್ರೇನ್‌ಗೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳು ನೀಡಿದ್ದ ಶಸ್ತ್ರಾಸ್ತ್ರಗಳ ಮೇಲೆ ದಾಳಿ ನಡೆಸಿದೆ. ವಿದೇಶಗಳು ನೀಡಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಉಕ್ರೇನಿ ಪಡೆಗಳು ತನ್ನ ದಾಳಿಯನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ವೈರಿ ದೇಶದ ಬೆನ್ನು ಮುರಿಯಲು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇನ್ನೊಂದೆಡೆ ಉಕ್ರೇನಿನ ಒಡೆಸಾದಲ್ಲಿರುವ ಮಿಲಿಟರಿ ವಾಯುನೆಲೆಯ ರನ್‌ವೇಯನ್ನು ಧ್ವಂಸಗೊಳಿಸಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿಯನ್ನು ಅಮೆರಿಕದ ಸ್ಪೀಕರ್ ನಾನ್ಸಿ ಪೊಲೊಸಿ ಭೇಟಿ ಮಾಡಿ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಅಲ್ಲದೇ ನಡುರಾತ್ರಿ ಖಾರ್ಕೀವ್‌ನಲ್ಲಿ ಉಕ್ರೇನಿನ ಸು-24ಎಂ ಬಾಂಬರ್‌ಗಳನ್ನು ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿವೆ ಎಂದು ರಷ್ಯಾ ಹೇಳಿದೆ.
ರಷ್ಯಾ ಬ್ಯಾಸ್ಟಿಯೊನ್ ಕ್ಷಿಪಣಿಯನ್ನು ಕ್ರಿಮಿಯಾದಿಂದ ಉಡಾವಣೆ ಮಾಡಿ ಒಡೆಸಾದ ವಾಯುನೆಲೆಯನ್ನು ಧ್ವಂಸಗೊಳಿಸಿದೆ ಎಂದು ಪ್ರಾಂತೀಯ ರಾಜ್ಯಪಾಲ ಮ್ಯಾಕ್ಸಿಮ್ ಮಾರ್ಚೆಂಕೊ ತಿಳಿಸಿದ್ದಾರೆ.
ನ್ಯಾಟೋ ರಾಷ್ಟ್ರಗಳು ಮೇ ತಿಂಗಳಿನಲ್ಲಿ ಸೇನಾ ಕವಾಯತು ನಡೆಸುವುದಾಗಿ ಘೋಷಿಸಿ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ರಷ್ಯಾ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್‌ನ ಉಕ್ಕಿನ ಘಟಕವನ್ನು ಹೊರತುಪಡಿಸಿ ಇಡೀ ನಗರವು ರಷ್ಯಾದ ತೆಕ್ಕೆಯಲ್ಲಿದೆ. ನೀರು, ಆಹಾರವಿಲ್ಲದೇ ಸತತ ಬಾಂಬ್, ಶೆಲ್ ದಾಳಿಯಿಂದಾಗಿ ಕಂಗೆಟ್ಟಸುಮಾರು 1000 ನಾಗರಿಕರು ಹಾಗೂ 2000ಕ್ಕೂ ಹೆಚ್ಚು ಉಕ್ರೇನಿನ ಯೋಧರು ಉಕ್ಕಿನ ಘಟಕದಲ್ಲಿ ನೆಲೆಸಿದ್ದಾರೆ. ವಿಶ್ವಸಂಸ್ಥೆಯು ಶೀಘ್ರ ಇವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.