ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುವುದು ಹೆಚ್ಚುತ್ತಿದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತಿಳಿಸಿದರು.
ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ವಿವಾದಾತ್ಮಕ ಸಂತ ಯತಿ ನರಸಿಂಗಾನಂದ ಅವರು ಹಿಂದೂಗಳಿಗೆ ಕರೆ ನೀಡುತ್ತಿರುವುದು ಕಳವಳಕಾರಿ ಎಂದೂ ಕಾಂಗ್ರೆಸ್ ಸದಸ್ಯರು ಹೇಳಿದರು.
ನಿಗದಿತ ಕಲಾಪದ ಬದಲಾಗಿ, ನಿಯಮ 267ರಡಿ ಈ ವಿಷಯ ಕುರಿತು ಪ್ರಸ್ತಾಪಿಸಲು ಅವಕಾಶ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಲ್ಪಸಂಖ್ಯಾತರ ವಿರುದ್ದದ ದ್ವೇಷ ಭಾಷಣ ಹಾಗೂ ಕೆಲ ಆನ್‌ಲೈನ್ ಮಾಧ್ಯಮಗಳ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವಂತೆಯೂ ಅವರು ನೋಟಿಸ್ ನೀಡಿದ್ದರು.
ಈ ಮನವಿಯನ್ನು ತಿರಸ್ಕರಿಸಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ‘ಯಾವುದೇ ಸಮುದಾಯದ ಹೆಸರು ಸಹ ಕಡತಕ್ಕೆ ಹೋಗುವುದಿಲ್ಲ. ವ್ಯಕ್ತಿಯೊಬ್ಬ ಅರ್ಥಹೀನ ಪದ ಬಳಸಿ ಮಾತನಾಡಿದ್ದರೆ, ಅದನ್ನು ಇಲ್ಲಿ ಹೇಳಬಾರದು. ಅದನ್ನೇ ಸದನದಲ್ಲಿ ಮತ್ತೆ ಪ್ರಸ್ತಾಪಿಸಿ ಚರ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಇದಕ್ಕೆ ಅವಕಾಶ ನೀಡಿಲ್ಲ ಎಂದರು.
ಖರ್ಗೆ ಅವರಲ್ಲದೇ, ಟಿಎಂಸಿಯ ಸುಷ್ಮಿತಾ ದೇವ್, ಲಿಜಿನ್ಹೊ ಫೆಲಿರೊ ಹಾಗೂ ಮೊಹ್ಮದ್ ನದಿಮುಲ್ ಹಕ್ ಅವರು ಸಹ ಈ ಕುರಿತು ಮಾತನಾಡಲು ಅವಕಾಶ ಕೋರಿ ನೋಟಿಸ್ ನೀಡಿದ್ದರು.