Friday, October 4, 2024
Friday, October 4, 2024

ಜೀವನ ದರ್ಶನ ಮತ್ತು ವಸ್ತ್ರ ನೇಯ್ಗೆ ಕೌಶಲ ನೀಡಿದವರು ದೇವರ ದಾಸಿಮಯ್ಯ

Date:

ವಚನ ಸಾಹಿತ್ಯದ ಜಗದ್ಗುರು ಎಂದೇ ಕರೆಯಬಹುದಾದ ಶ್ರೀ ದೇವರ ದಾಸಿಮಯ್ಯನವರು ಜೀವನಕ್ಕೆ ಬೇಕಾದ ವಚನಗಳು ಮತ್ತು ಸಮಾಜದ ಗೌರವ ಹೆಚ್ಚಿಸುವ, ನಾಗರೀಕತೆಗೆ ಶಕ್ತಿ ನೀಡುವ ವಸ್ತ್ರ ನೇಯುವ ಕೌಶಲ್ಯ ಎರಡನ್ನೂ ನೀಡಿದ ಮಹಾನ್ ಪುರುಷ ಎಂದು ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಅವರು ವರ್ಣಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೇಕಾರ ಸಮುದಾಯಗಳ ಒಕ್ಕೂಟ ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಂಗ ಸಮುದಾಯ ಸೇರಿದಂತೆ ನೇಕಾರ ಸಮುದಾಯಗಳು ಉತ್ತರ ಕರ್ನಾಟಕದಲ್ಲಿ ಹೊರತುಪಡಿಸಿ ಹೆಚ್ಚಾಗಿ ನೇಕಾರಿಕೆ ವೃತ್ತಿಯನ್ನು ಮಾಡುತ್ತಿಲ್ಲ. ವಿಭಿನ್ನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರಿಗಿಂತಲೂ ಮುಂಚಿತವಾಗಿ 10 ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ವಚನಕಾರ ದೇವರದಾಸಿಮಯ್ಯ. ಸುಮಾರು 167 ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಆದರೆ, ಇದು ಸಮುದಾಯದ ಜನತೆಯಿಂದ ಹೆಚ್ಚು ಪ್ರಚಾರಕ್ಕೆ ಬಾರದೇ ಜನಮನ ತಲುಪಿಲ್ಲ. ಪ್ರಚಲಿತವಾಗಿಲ್ಲ. ನೇಕಾರ ಸಮುದಾಯ ದೇವರ ದಾಸಿಮಯ್ಯ ಅವರ ವಚನಗಳನ್ನು, ಜೀವನಾದರ್ಶಗಳನ್ನು ಜನಮನಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.

ದಾಸಿಮಯ್ಯನವರು ಆಧ್ಯಾತ್ಮ ಶಕ್ತಿ ಸಂಪಾದನೆಯೊಂದಿಗೆ ವಚನ ಸಾಹಿತ್ಯವನ್ನೂ ಬೆಳೆಸಿದರು. ಜೀವನಕ್ಕೆ ಬೇಕಾದ ಎಲ್ಲ ಕಲೆ, ಮೌಲ್ಯಗಳು, ತತ್ವಗಳು ಅವರ ವಚನದಲ್ಲಿ ಅಡಗಿದೆ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ದೇವರ ದಾಸಿಮಯ್ಯನವರ ವಚನ ಗಾಯನ, ವಾಚನದಂತಹ ಕಾರ್ಯಕ್ರಮಗಳ ಮೂಲಕ ಅವರ ವಚನ ಸಾಹಿತ್ಯವನ್ನು ಎಲ್ಲರಿಗೆ ತಿಳಿಸುವ ಕೆಲಸವನ್ನು ನೇಕಾರ ಸಮುದಾಯಗಳು ಒಟ್ಟಾಗಿ, ಸಂಘಟಿತರಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಸೊರಬದ ಯುವ ವಾಗ್ಮಿ ಭರತ್ ಕಾರೇಕೊಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಾವೆಲ್ಲ ಕೇವಲ ವರ್ತಮಾನಕ್ಕೆ ಸೀಮಿತವಾಗದೆ ಇತಿಹಾಸದೆಡೆ ನೋಡಿ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು, ಮೌಲ್ಯಗಳನ್ನು ತಿಳಿಯಬೇಕು. 10 ನೇ ಶತಮಾನದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನಲ್ಲಿ ಜನಿಸಿದ ದೇವರ ದಾಸಿಮಯ್ಯನವರು ಸುಮಾರು 176 ರಿಂದ 200 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆಂದು ಪುರಾಣಗಳು ಹೇಳುತ್ತವೆ.

ವಚನ ಸಾಹಿತ್ಯದ ಸೃಷ್ಟಿಕರ್ತ ದೇವರ ದಾಸಿಮಯ್ಯ ಎಂದು ಹೇಳಬಹುದಾಗಿದೆ. ವಚನಗಳಲ್ಲಿ ಜೀವನದ ಇಡೀ ಮೌಲ್ಯಗಳನ್ನು ಕಾಣಬಹುದು. ನಮ್ಮ ಜೀವನದಲ್ಲಿ ಇವನ್ನು ಅಳವಡಿಸಿಕೊಂಡಲ್ಲಿ ಜೀವನಕ್ಕೆ ದಾರಿದೀಪವಾಗಲಿದೆ. ವಿ.ಕೃ.ಗೋಕಾಕರ ಪ್ರಕಾರ ಇಡೀ ವಿಶ್ವಕ್ಕೆ ನಮ್ಮ ರಾಜ್ಯದ ಕೊಡುಗೆ ಏನೆಂದರೆ ವೈಚಾರಿಕತೆ ಮತ್ತು ಜಾತ್ಯಾತೀತತೆಯಿಂದ ಕೂಡಿದ ವಚನ ಸಾಹಿತ್ಯವಾಗಿದೆ.

ನಮ್ಮ ಮಕ್ಕಳಿಗೆ ನಾವು ಸಾವಿರಾರು ಖರ್ಚು ಮಾಡಿ ಮೊಬೈಲ್ ಕೊಡಿಸುತ್ತೇವೆ. ಬದಲಾಗಿ ನೂರಾರು ಖರ್ಚು ಮಾಡಿ ಇಡೀ ಜೀವನಸಾರ ತಿಳಿಸುವ ವಚನಗಳು, ಭಗವದ್ಗೀತೆಯನ್ನು ಕೊಡಿಸುವುದಿಲ್ಲ. ಮನೆಯ ಮಕ್ಕಳಿಗೆ ವಚನ ಸಾಹಿತ್ಯದಂತಹ ಪುಸ್ತಕಗಳನ್ನು ಕೊಡಿಸಬೇಕು ಎಂದ ಅವರು ಶರಣರ ನುಡಿಮುತ್ತುಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಲಿಷ್ಟ ಭಾರತ ನಿರ್ಮಾಣ ಮಾಡಬೇಕೆಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಪಂಡಿತ, ಪಾಮರರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯವನ್ನು ವಚನ ಸಾಹಿತ್ಯದ ಮೂಲಕ ಆಡುಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಸಿದವರು ದೇವರ ದಾಸಿಮಯ್ಯನಂತಹ ವಚನ ಸಾಹಿತಿಗಳು ಎಂದರು.

ಪಟ್ಟಸಾಲಿ ಸಮಾಜದ ಜಿಲ್ಲಾಧ್ಯಕ್ಷ ಕಾಂತೇಶ್ ಕದರಮಂಡಲಗಿ ಮಾತನಾಡಿ, ನೇಕಾರ ಸಮುದಾಯದಲ್ಲಿ ಸುಮಾರು 30 ಉಪಪಂಗಡಗಳಿದ್ದು ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕಿದೆ. ಮುಂದಿನ ಬಾರಿ ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸುವ ಸಂಕಲ್ಪ ಮಾಡಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಅವರು ಮಾತನಾಡಿ, ಸಮಾಜದ ದಾರ್ಶನಿಕರು, ಮಹಾನ್ ವ್ಯಕ್ತಿಗಳ ಜೀವಾದರ್ಶಗಳು, ಮೌಲ್ಯಗಳು, ವಿಚಾರಧಾರೆಗಳನ್ನು ಇಡೀ ಜನತೆಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ನೋವಿನ ಸಂಗತಿ ಎಂದರೆ ಈ ಮಹಾನ್ ವ್ಯಕ್ತಿಗಳನ್ನು ಕೆಲವು ಜಾತಿ-ಜನಾಂಗಕ್ಕೆ ಸೀಮಿತಗೊಳಿಸಿ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಇದಾಗಬಾರದು. ಯಾವುದೇ ಜಾತಿಗೆ ಈ ದಾರ್ಶನಿಕರನ್ನು ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿಗಳನ್ನು ಆಚರಿಸಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಪಾಲಿಸುವಂತೆ ಆಗಬೇಕು. ಹಾಗೂ ಮುಂದಿನ ಪೀಳಿಗೆಯಲ್ಲಿಯೂ ಇಂತಹ ಮಹಾನ್ ದಾರ್ಶನಿಕರು ಬೆಳೆಯಬೇಕು ಎಂದು ಆಶಿಸಿದರು.

ಕರ್ನಾಟಕ ಕಲಾಶ್ರೀ ಪುರಸ್ಕೃತ ರಾಗಿ ಎಸ್.ಎಸ್.ಶಿವಾನಂದ ಸ್ವಾಮಿ ಮತ್ತು ತಂಡದವರು ವಚನ ಗಾಯನ ನಡೆಸಿಟ್ಟರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಟಿ.ಎಸ್.ಗಿರಿಯಪ್ಪ, ದೇವಾಂಗ ಸಮಾಜದ ಉಪಾಧ್ಯಕ್ಷ ಹಾಲೇಶಪ್ಪ, ಪದ್ಮಸಾಲಿ ಸಮಾಜದ ಅಧ್ಯಕ್ಷ ಜೆ.ರಾಮಕೃಷ್ಣ, ಮುಖಂಡರಾದ ರವೀಂದ್ರನಾಥ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...