ರಾಜ್ಯ ಸರ್ಕಾರವು ಅಂದಾಜು 7000 ಕೋಟಿ ರೂಪಾಯಿ ವೆಚ್ಚದಲ್ಲಿ ರಸಗೊಬ್ಬರ ಉದ್ಯಮವನ್ನು ತೆರೆಯಲು ಯೋಜಿಸಿದೆ ಎಂದು ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು.
ನಗರದ ಎಸ್ ಸಿಡಿಸಿಸಿ ಕಚೇರಿಗೆ ಆಗಮಿಸಿದ ಸಂದರ್ಭ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೆರವಿನಿಂದ ಈ ಬೃಹತ್ ಕಾರ್ಖಾನೆ ಯನ್ನು ಆರಂಭಿಸಿ ರಸಗೊಬ್ಬರ ಕೊರತೆ ಯನ್ನು ನೀಗಿಸುವ ಉದ್ದೇಶ ಸರಕಾರ ಹೊಂದಿದೆ.
ರಾಜ್ಯದ ಮಂಗಳೂರು, ದಾವಣಗೆರೆ ಅಥವಾ ಬೆಳಗಾವಿಯಲ್ಲಿ ಈ ಕಾರ್ಖಾನೆ ಆರಂಭಿಸಲಾಗುವುದು. ಈ ಕಾರ್ಖಾನೆ ಆರಂಭವಾದರೆ ಸುಮಾರು 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ರಸಗೊಬ್ಬರ ಕೊರತೆಯನ್ನು ನೀಗಿಸಲು ಯೋಜನೆ ರೂಪಿಸಲಾಗಿದೆ. ಸುಮಾರು 5000 ಉದ್ಯೋಗಗಳನ್ನು ಸೃಷ್ಟಿಸುವ 64 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಫ್ತು ಉತ್ತೇಜನಾ ಕೈಗಾರಿಕಾ ಪಾರ್ಕ್ ಅನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಗೆ 1,000 ಎಕರೆ ಭೂಮಿ ಅಗತ್ಯವಿದ್ದು, ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ದಕ್ಷಿಣ ಕನ್ನಡದ ಬಳ್ಕುಂಜೆ, ಉಳೆಪಾಡಿ ಮತ್ತು ಕೊಲ್ಲೂರಿನಲ್ಲಿ 100 ಎಕರೆ ಭೂಮಿಯನ್ನು ಗುರ್ತಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕೃಷಿ ಮತ್ತು ಕೈಗಾರಿಕೆಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಬೆಂಬಲವನ್ನು ಶ್ಲಾಘನೀಯವಾದದ್ದು ಎಂದರು.
ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಡೆಸುತ್ತಿದೆ. ಹೂಡಿಕೆದಾರರ ಸಮಾವೇಶದ ಭಾಗವಾಗಿ ನಾವು ಇತರ ರಾಜ್ಯಗಳಲ್ಲಿ ರೋಡ್ ಶೋ ನಡೆಸಲಾಗುತ್ತದೆ. ಸರ್ಕಾರವು ಎಂಬಿಎ, ಎಂಟೆಕ್ ಪದವೀಧರರಿಗೆ ಪ್ರೋತ್ಸಾಹ ನೀಡಲಿದೆ. ಸ್ಟಾರ್ಟ್‌ಅಪ್‌ಗಳಿಗಾಗಿ ಮೊದಲ ಕಾರ್ಯಕ್ರಮವನ್ನು ಕಲಬುರಗಿ, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆಸಲಾಗುತ್ತದೆ.
ಇದರ ಹೊರತಾಗಿ, ಕೈಗಾರಿಕಾ ಅದಾಲತ್‌ಗಳನ್ನು ಕೂಡ ನಡೆಸಲಾಗುವುದು ಮತ್ತು ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜನರ ಮನೆ ಬಾಗಿಲಿಗೇ ಹೋಗಿ ಪರಿಹರಿಸಲಾಗುವುದು ಎಂದು ಹೇಳಿದರು.