ಉಕ್ರೇನ್ ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಆದ್ಯತೆಗಳ ಕುರಿತು ಯುಎಸ್ ರಾಜ್ಯ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಿನ್ನೆ ಮಾತನಾಡಿದ್ದಾರೆ.
ಈ ಬಗ್ಗೆ ಯುಎಸ್ ರಾಜ್ಯ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿ ಹಾಗೂ ಮುಕ್ತ, ಸುರಕ್ಷಿತ, ಸಮೃದ್ಧ ಇಂಡೊ-ಪೆಸಿಫಿಕ್‌ಗೆ ಉತ್ತೇಜನ ಸೇರಿದಂತೆ ಪ್ರಾದೇಶಿಕ ಆದ್ಯತೆಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಲಿಂಕನ್ ಅವರು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಮೂರು ರಾಷ್ಟ್ರಗಳ ಭೇಟಿಯನ್ನು ಬುಧವಾರ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಪರಿಣಾಮಗಳನ್ನು ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳು ಅನುಭವಿಸಿವೆ ಎಂದು ಹೇಳಿದ್ದಾರೆ. ಹಾಗೆಯೇ, ರಷ್ಯಾದೊಂದಿಗಿನ ಬಾಂಧವ್ಯವನ್ನು ಮಿತಿಗೊಳಿಸಬೇಕು ಎಂದು ಅಲ್ಜೀರಿಯಾಗೆ ಮನವಿ ಮಾಡಿದ್ದಾರೆ.
ಜೈಶಂಕರ್ ಅವರೊಂದಿಗೆ ಕಳೆದ ತಿಂಗಳು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಬ್ಲಿಂಕೆನ್, ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸಿ ಸಾಮೂಹಿಕ ಪ್ರತಿಕ್ರಿಯೆ ನೀಡಬೇಕಿದೆ ಎಂದು ಒತ್ತಿ ಹೇಳಿದ್ದಾರೆ.