ದೇಶದ ನಿರ್ಮಾಣದಲ್ಲಿ ವಕೀಲರ ಮಹತ್ವವನ್ನು ಎಂದಿಗೂ ಅಲ್ಲಗಳೆಯಲಾಗದು. ಅಧ್ಯಯನ ಶೀಲತೆ ಇದ್ದಾಗ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಹಾಂತಪ್ಪ ಎ.ಡಿ ಅವರು ತಿಳಿಸಿದ್ದಾರೆ.
ಸಾಗರದ ಕೋರ್ಟ್ ಆವರಣದಲ್ಲಿ ವಕೀಲರ ಸಂಘ ಏರ್ಪಡಿಸಿದ್ದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಗೆ ತನ್ನದೇ ಆದ
ಪಾವಿತ್ರ್ಯ, ಘನತೆಯಿದೆ. ವೃತ್ತಿಯಲ್ಲಿ ವಕೀಲರು ನೈತಿಕತೆ ಕಾಪಾಡಿಕೊಳ್ಳಬೇಕಾದದ್ದು ಅತ್ಯಂತ ಪ್ರಮುಖ ಸಂಗತಿಯಾಗಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಹಾಂತಪ್ಪ ಎ.ಡಿ. ಹೇಳಿದರು.
ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾದ ರಹೀಂ ಅಲಿ ನದಾಫ್, ವಕೀಲರಿಗೆ ಜ್ಞಾನವೇ ಸಂಪತ್ತು. ಈ ಕ್ಷೇತ್ರದಲ್ಲಿ ಸಾಧನೆಗೆ ಮಿತಿ ಎಂಬುದೇ ಇಲ್ಲ. ವೃತ್ತಿಯ ಬಗ್ಗೆ ಅಸಡ್ಡೆ ಮನೋಭಾವ ತೋರದೇ ಇರುವುದು ಪ್ರಮುಖವಾದ ಸಂಗತಿಯಾಗಿದೆ ಎಂದರು.
ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರೆಹೆನಾ ಸುಲ್ತಾನ ಅವರು, ಒಳ್ಳೆಯ ವಕೀಲರು ಇರುವಲ್ಲಿ ಮಾತ್ರ ಸಮಾಜದ ಸ್ವಾಸ್ಥ್ಯ ಸುಸ್ಥಿರವಾಗಿರುತ್ತದೆ. ವಕೀಲರಿಗೆ ಸಮಾಜದ ಜೊತೆ ನೇರ ಸಂಪರ್ಕ ಇರುವುದರಿಂದ ಸಾಮಾಜಿಕ ಬದಲಾವಣೆಯಲ್ಲಿ ಅವರು ಆಸಕ್ತಿ ತೋರುವ ಅವಕಾಶ ಮುಖ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರು ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಂ.ಬಿ. ಪುಟ್ಟಸ್ವಾಮಿ, ಕೆ.ಎನ್. ಶ್ರೀಧರ್, ಎಚ್.ಎನ್. ದಿವಾಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ದೇಶ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ತರ
Date: