ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಅಕಾಲಿಕ ಅತಿವೃಷ್ಟಿ ಪ್ರಸ್ತುತ ವರ್ಷದ ಇಳುವರಿಗೆ ಮಾತ್ರವಲ್ಲದೆ ಮುಂದಿನ ವರ್ಷದ ಇಳುವರಿಗೂ ಭಾರಿ ಹೊಡೆತ ನೀಡುವ ಆತಂಕ ಎದುರಾಗಿದೆ.
ಈ ವರ್ಷ ನಾನಾ ಬೆಳೆಗಳು ಕೀಟಬಾಧೆ , ಶಿಲೀಂಧ್ರ ಭಾದೆ, ನುಸಿಕಾಟದಿಂದ ಬಳಲುತ್ತಿವೆ. ಹೀಗಾಗಿ ಮುಂದಿನ ವರ್ಷಕ್ಕೆ ಗುಣಮಟ್ಟದ ಬಿತ್ತನೆ ಬೀಜ ಅನುಮಾನ. ಇದಲ್ಲದೆ ದೀರ್ಘಕಾಲಿಕ ಬೆಳೆಗಳ ಪ್ರಸಕ್ತ ವರ್ಷದ ಪರಿಣಾಮ ಮುಂದಿನ ವರ್ಷಕ್ಕೂ ಮುಂದುವರೆಯಲಿದೆ ಎಂದು ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ. ಮಂಜುನಾಥ ಎಚ್.ಅವರು ತಿಳಿಸಿದ್ದಾರೆ.
ದೀರ್ಘಾವಧಿ ಬೆಳೆಗಳು ನಾನಾ ರೀತಿಯ ರೋಗಾತಂಕ ಎದುರಿಸುತ್ತಿವೆ. ಮುಂದಿನ ವರ್ಷ ನಾನಾ ಕಾರಣಗಳಿಗೆ ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಕುಂಠಿತವಾಗುವುದು ನಿಶ್ಚಿತವಾಗಿದೆ.
ಅಕಾಲಿಕ ಮಳೆಯಿಂದ ಅಡಿಕೆ, ತೆಂಗು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳಿಗೂ ಹಾನಿಯುಂಟಾಗಿದೆ. ಮುಂದಿನ ವರ್ಷದ ಫಸಲಿಗೂ ಇದು ತೊಂದರೆಯಾಗಲಿದೆ. ಇಳುವರಿ ಕುಂಠಿತವಾಗುವುದು ಸಹಜ ಎಂದು ರೈತರಾದ ರವೀಶ್ ಅವರು ತಿಳಿಸಿದ್ದಾರೆ.
ಮಲೆನಾಡು, ಕರಾವಳಿ ಬಯಲುಸೀಮೆ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಅಡಿಕೆಗೆ ಬೆಲೆ ಇದೆಯಾದರೂ ಮಳೆ ಈ ಬಾರಿ ಅಡಿಕೆ ತೆಗೆದು, ಸಂಸ್ಕರಣೆ ಮಾಡಲು ಬಿಡುತ್ತಿಲ್ಲ. ಸದಾ ಮೋಡ ಮುಸುಕಿದ ವಾತಾವರಣ, ಮಳೆಯಿಂದ ಹೊಂಬಾಳೆ ಶಿಲೀಂದ್ರ ರೋಗ ತಗುಲಿ ಹರಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಮುಂದಿನ ವರ್ಷ ಖಂಡಿತ ನಿರೀಕ್ಷಿತ ಇಳುವರಿ ಸಾಧ್ಯವಿಲ್ಲ. ಕಾಫಿ ,ಏಲಕ್ಕಿ, ಭತ್ತ, ಶೇಂಗಾ ತೊಗರಿ ಸೇರಿದಂತೆ ಬಹುತೇಕ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಅಕಾಲಿಕ ಅತಿವೃಷ್ಟಿ ಚಿಂತೆಯನ್ನು ತಂದೊಡ್ಡಿದೆ.
ಅಕಾಲಿಕ ಮಳೆ : ತೋಟಗಾರಿಕಾ ಉತ್ಪನ್ನಕ್ಕೆ ಧಕ್ಕೆ ಬೀಳಲಿದೆ
Date: