ಕೊರೋನಾ ರೂಪಾಂತರಿ ತಳಿ ಓಮೈಕ್ರಾನ್ ಜಗತ್ತಿನಾದ್ಯಂತ ಹರಡುತ್ತಿದೆ. ಈ ವೈರಸ್ ನನ್ನು ತಡೆಗಟ್ಟಲು, ವಿದೇಶದಿಂದ ಬಂದ ಪ್ರಯಾಣಿಕರ ಮಾಹಿತಿಯನ್ನು ಕೇಂದ್ರ ಸರ್ಕಾರವು ನಿಯಮಿತವಾಗಿ ರಾಜ್ಯಸರ್ಕಾರಗಳಿಗೆ ನೀಡಬೇಕು. ಆಗ ಮಾತ್ರ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮುಂಬೈ ಮತ್ತು ಮಹಾರಾಷ್ಟ್ರದ ಬೇರೆ ವಿಮಾನ ನಿಲ್ದಾಣಕ್ಕೆ, ಬಂದಿಳಿದ ವಿದೇಶಿ ಪ್ರಯಾಣಿಕರನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ. ಆದರೆ ಬೇರೆ ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದಿಳಿದು ಅನಂತರ ಬಸ್, ರೈಲು, ಕಾರು ದೇಶ ವಿಮಾನದ ಮೂಲಕ ಮಹಾರಾಷ್ಟ್ರಕ್ಕೆ ಬರುವ ವಿದೇಶಿ ಪ್ರಯಾಣಿಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅವರಿಗೆ ಓಮೈಕ್ರಾನ್ ತಳಿಯಿಂದ ಕೋವಿಡ್ ಬಂದರೆ, ಅದನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಅಪಾಯವನ್ನು ತಡೆಯಬೇಕೆಂದರೆ, ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರ ವಿವರವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕು. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ.