ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಸ್ಪೋಟಕ ಮಾಹಿತಿಯನ್ನು ತಿಳಿಸಿದೆ. ರಾಜ್ಯದಲ್ಲಿಯೂ ಪುರುಷ ಮತ್ತು ಸ್ತ್ರೀಯರಲ್ಲಿ ಸಂತಾನಶಕ್ತಿ ಫಲವತ್ತತೆ ಪ್ರಮಾಣ ಶೇ. 1.7 ಕುಸಿದಿರುವುದಾಗಿ ವರದಿಯಲ್ಲಿ ಹೇಳಿದೆ.
2019-20ರ ವರದಿ ಪ್ರಕಾರ ಗ್ರಾಮೀಣ ಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ ಫರ್ಟಿಲಿಟಿ ಪ್ರಮಾಣದಲ್ಲಿ ಯಾವುದೇ ತರಹದ ಬದಲಾವಣೆಗಳಾಗಿಲ್ಲ, ಆದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಫರ್ಟಿಲಿಟಿ ಪ್ರಮಾಣ ಶೇ.1.8 ರಿಂದ 1.5 ಕ್ಕೆ ಕುಸಿದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಫರ್ಟಿಲಿಟಿ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಲು 18 ವರ್ಷದೊಳಗೆ ಮದುವೆಯಾಗಿ 20-24 ವರ್ಷ ವಯೋಮಾನದ ಸ್ತ್ರೀಯರಲ್ಲಿ ಫರ್ಟಿಲಿಟಿ ಪ್ರಮಾಣ ಶೇ. 21.3 ಕ್ಕೆ ಕುಸಿದಿದೆ. 2015-16 ರಲ್ಲಿ ಶೇ. 21.4 ರಷ್ಟಿತ್ತು. ಇದೇ ವೇಳೆ 21 ವರ್ಷಕ್ಕೆ ಮದುವೆಯಾಗಿ ಸದ್ಯ 25-29 ವಯೋಮಾನದ ಪುರುಷರಲ್ಲಿ ಫರ್ಟಿಲಿಟಿ ಪ್ರಮಾಣ ಶೇ. 9.1 ರಿಂದ 6.1ಕ್ಕೆ ಇಳಿಕೆಯಾಗಿದೆ.
ಫರ್ಟಿಲಿಟಿ ಪ್ರಮಾಣವು ಪುರುಷ ಮತ್ತು ಮಹಿಳೆಯರಲ್ಲಿ ಕಡಿಮೆಯಾಗಲು ಮುಖ್ಯಕಾರಣವೆಂದರೆ ಪರಿಸರ ಮಾಲಿನ್ಯ, ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಆಗಿದೆ.
“ಪರಿಸರ ಮಾಲಿನ್ಯದಿಂದ ದೇಹದೊಳಗೆ ಸೇರುವ ಅನಗತ್ಯ ವಸ್ತುಗಳು ದೇಹದಲ್ಲಿನ ಹಾರ್ಮೋನ್ ಗಳಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತವೆ. ಇದು ಫರ್ಟಿಲಿಟಿ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದ ಜೈವಿಕ ಚಕ್ರವತಿ ವ್ಯತ್ಯಾಸವಾಗುತ್ತದೆ. ಇದು ಪುರುಷರಲ್ಲಿ ವೀರ್ಯಾಣು ಗುಣಮಟ್ಟ ಕುಸಿಯುವಂತೆ ಮಾಡಿದೆ. ಸ್ತ್ರೀಯರಲ್ಲಿ ಪಿಸಿಒಡಿ ತೊಂದರೆ, ಬೊಜ್ಜು, ಥೈರಾಯ್ಡ್ ಸಮಸ್ಯೆಗಳು ಅಧಿಕವಾಗುತ್ತಿರುವುದರಿಂದ ಸಂತಾನೋತ್ಪತ್ತಿ ಕ್ರಿಯೆ ನಡೆದರೂ ಫಲವತ್ತತೆ ಕ್ಷೀಣಿಸುತ್ತಿದೆ” ಇಂದು ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ತಿಳಿಸಿದ್ದಾರೆ.