ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಶ್ರೀಮಂತರು, ಬಡವರು ಎಂಬ ಭೇದವಿಲ್ಲ. ಆತ್ಮವಿಶ್ವಾಸ, ಛಲ ಮತ್ತು ನಿರಂತರ ಪರಿಶ್ರಮ ಇದ್ದರೆ ಸಾಧನೆ ನಿಮ್ಮನ್ನು ಹುಡುಕಿ ಬರುತ್ತದೆ ಎಂದು ಬಿಬಿಎಂಪಿ ಆಡಳಿತ ವಿಶೇಷ ಅಧಿಕಾರಿ ಕೆ.ಎ. ದಯಾನಂದ್ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ವಿ ಆರ್ ಒನ್ ಟೀಮ್ ಮತ್ತು ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಅಭ್ಯರ್ಥಿಗಳಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇದ್ದರೆ ಸಾಲದು, ಬದಲಾಗಿ ಗುರಿಮುಟ್ಟಲು ಸತತ ಪ್ರಯತ್ನ ವಿದ್ದಾಗ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಹುದು. ಪ್ರತಿಯೊಬ್ಬರಲ್ಲಿಯೂ ವೈಶಿಷ್ಟ್ಯ ಇದ್ದೇ ಇರುತ್ತದೆ. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು, ಅನುಸರಿಸುವುದು ಸರಿಯಲ್ಲ. ನಿಮ್ಮದೇ ಆದ ವ್ಯಕ್ತಿತ್ವದೊಂದಿಗೆ, ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಅಧ್ಯಯನ ನಡೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸ್ಪೂರ್ತಿ ಆಗುವಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ದಯಾನಂದ್ ರವರು ಸಲಹೆ ನೀಡಿದರು.
ಕೆ.ಎ.ದಯಾನಂದ್ ಅವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಹ್ಯಾದ್ರಿ ಉತ್ಸವ ನಡೆಸಿದ್ದರು. ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ದಯಾನಂದ ಅವರ ಜೀವನವೇ ಎಲ್ಲರಿಗೂ ಸ್ಪೂರ್ತಿ ಎಂದು ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಯವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಗೋಪಿನಾಥ್, ಬಿ. ಆರ್.ಸಂತೋಷ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಟಿ.ಆರ್. ಅಶ್ವತ್ ನಾರಾಯಣ ಶೆಟ್ಟಿ, ವಿ ಆರ್ ಒನ್ ಟೀಮ್ ನ ಜಗದೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.