ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಗಳಾದ ಒಂದೇ ಕುಟುಂಬದ 4 ಮಂದಿ ಏ.15 ರಿಂದ ಕಾಣೆಯಾಗಿದ್ದಾರೆ.
ಮೋಹಮ್ಮದ್ ಇಕ್ಬಾಲ್: 62 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.
ನಸ್ರತ್ ಬಾನು: 54 ವರ್ಷ, 5.2 ಅಡಿ ಎತ್ತರ, ದಪ್ಪನೆ ಮೈಕಟ್ಟು, ಗೋಧಿ ಮೈಬಣ್ಣ, ಸೀಳು ತುಟಿ ಹೊಂದಿರುತ್ತಾರೆ.
ಮೋಹಮ್ಮದ್ ಫಾಜಿಲ್: 35 ವರ್ಷ, 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಎದೆಯಲ್ಲಿ ಚರ್ಮಗಂಟು ಇರುತ್ತದೆ.
ಮೊಹಮ್ಮದ್ ಆದಿಲ್; 32 ವರ್ಷ, 5.4 ಅಡಿ ಎತ್ತರ, ದಪ್ಪ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ.
ಈ ನಾಲ್ಕು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು 08182-261414/ 9972426144 /9480803345/ 6264571710 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
ಒಂದೇ ಕುಟುಂಬದ ನಾಲ್ವರು ನಾಪತ್ತೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ
ಜೂನ್ 1 ಶಿವಮೊಗ್ಗಕ್ಕೆ ಸೀಎಂ ಸಿದ್ಧರಾಮಯ್ಯ ಭೇಟಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ರಾಜ್ಯದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಜೂನ್ 01ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ವಿವಿಧ ಇಲಾಖಾ ಕಾರ್ಯಕ್ರಮಗಳ, ಜನಪರ ಯೋಜನೆಗಳ ಉದ್ಘಾಟನೆ, ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈಗಾಗಲೇ ನಿರ್ಮಾಣಗೊಂಡಿರುವ ನೂತನ ಕಟ್ಟಡಗಳ ಲೋಕಾರ್ಪಣೆ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡುವರು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕಳೆದ ಬಜೆಟ್ ಅಧಿವೇಶನದಲ್ಲಿ ಘೋಷಿಸಿದಂತೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಕ್ರಾಂತಿಕಾರಿಕ ಬದಲಾವಣೆಯ ಪ್ರತಿಬಿಂಬವಾಗಿ ಆರಂಭಿಸಲು ಉದ್ದೇಶಿಸಲಾಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಉದ್ಘಾಟನೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಕಾರ್ಯಕ್ರಮವೂ ಇದೇ ಭವ್ಯ ವೇದಿಕೆಯಲ್ಲಿ ನಡೆಯಲಿದೆ ಎಂದವರು ನುಡಿದರು.
ಕಂದಾಯ ಇಲಾಖೆಯಲ್ಲಿ ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಾಖಲಾತಿಗಳನ್ನು ಅತ್ಯಲ್ಪ ಅವಧಿಯಲ್ಲಿ ಸುಧಾರಿಸಲಾಗಿದ್ದು ಇ-ಪೌತಿ ಖಾತೆ, ದರಖಾಸ್ತು ಪೋಡಿ, ಕಂದಾಯ ಗ್ರಾಮ ಹಕ್ಕುಪತ್ರಗಳು, ಪಿಂಚಣಿ, ಸಾಮಾಜಿಕ ಭದ್ರತಾ ಸೌಲಭ್ಯಗಳು ಸೇರಿ ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ವಿಕಲಚೇತನರಿಗೆ ಸೌಲತ್ತುಗಳು, ಶ್ರಮಿಕ ಕಾರ್ಮಿಕರಿಗೆ ಸೌಲಭ್ಯಗಳು, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಸಹಾಯಧನ ಆಧಾರಿತ ಸಾಲ-ಸೌಲಭ್ಯಗಳು, ಅಲ್ಲದೇ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮಾನ್ಯ ಮುಖ್ಯಮಂತ್ರಿಗಳು ವಿತರಿಸುವರು ಎಂದವರು ನುಡಿದರು.
ಇತರೆ ಇಲಾಖೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂ.ಗಳ ವೆಚ್ಚದ ಹಲವು ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 01 ರಂದು ನಡೆಯುವ ಕಾರ್ಯಕ್ರಮದಲ್ಲಿ ನೆರವೇರಿಸಿಕೊಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸೇರಿದಂತೆ ಸಚಿವ ಸಂಪುಟದ ಬಹುತೇಕ ಎಲ್ಲಾ ಮಂತ್ರಿಗಳು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಪಂಚಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಿಂದ 2ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಆಗಮಿಸುವ ಸಾರ್ವಜನಿಕರಿಗೆ ಬಸ್ಸುಗಳ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಯನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದ ಅವರು, ಈ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿಯ ಹೊಣೆಗಾರಿಕೆ ನೀಡಲಾಗುವುದು, ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಸಹಕರಿಸುವಂತೆ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ., ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
B.Y. Raghavendra ಮುತ್ಸದ್ದಿ ರಾಜಕಾರಣಿ ಬಿಎಸ್ ವೈ ಅವರಿಗೆ ಕೃತಜ್ಞತಾ ಅರ್ಪಣಾ ಸಮಾರಂಭ: ಪುತ್ರ ,ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಧನ್ಯತಾ ಭಾವ ಸ್ಪಂದನೆ
B.Y. Raghavendra ಶಿವಮೊಗ್ಗದ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯ! ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ, ಬೃಹತ್ ಧರ್ಮಜಾಗೃತಿ ಸಮಾವೇಶ ಹಾಗೂ ಪೂಜ್ಯ ತಂದೆಯವರಾದ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರಿಗೆ ಆಯೋಜಿಸಲಾಗಿದ್ದ “ಕೃತಜ್ಞತಾ ಸಮರ್ಪಣಾ ಸಮಾರೋಪ” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಪರಮಪೂಜ್ಯ ಪಂಚಪೀಠಾಧೀಶ್ವರರಾದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು (ಬಾಳೆಹೊನ್ನೂರು ಪೀಠ), ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು (ಉಜ್ಜಯಿನಿ ಪೀಠ), ಶ್ರೀಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು (ಕೇದಾರ ಪೀಠ), ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. B.Y. Raghavendra (ಶ್ರೀಶೈಲ ಪೀಠ), ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ವಿದ್ಯಾಬಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು (ಕಾಶಿ ಪೀಠ) ಪೀಠಗಳ ಪರಮಪೂಜ್ಯ ಜಗದ್ಗುರುಗಳ ದಿವ್ಯ ಸನ್ನಿಧಾನದಲ್ಲಿ, ಸುಮಾರು 4 ಕಿಲೋಮೀಟರ್ ಸಾಗಿದ ವೈಭವದ ಅಡ್ಡಪಲ್ಲಕ್ಕಿ ಮೆರವಣಿಗೆಯು ಶಿವಮೊಗ್ಗ ನಗರದಾದ್ಯಂತ ಭಕ್ತಿಯ ಅಲೆ ಎಬ್ಬಿಸಿತು. ತದನಂತರ ಅಲ್ಲಮಪ್ರಭು ಬಯಲು (ಫ್ರೀಡಂ ಪಾರ್ಕ್) ಆವರಣದ ಮಾನವಧರ್ಮ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಸಹಸ್ರಾರು ಭಕ್ತ ಮಹಾಶಯರು ಪಾಲ್ಗೊಂಡು ಪುನೀತರಾದರು.
ರಾತ್ರಿ ಸುರಿದ ಮಳೆ: ಶಿವಮೊಗ್ಗದ ಹಲವೆಡೆ ಜನಜೀವನ ಅಸ್ತವ್ಯಸ್ತ
ರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದಲ್ಲಿ ಹಲವು ಕಡೆಗಳಲ್ಲಿ ಅವಘಡ ಸಂಭವಿಸಿದೆ.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಳೆಯಿಂದಾಗಿ ನೂರಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ.
ಗ್ರಾಮಾಂತರ ಭಾಗವಾದ ಮತ್ತೂರು, ಸೋಗಾನೆ, ಮಂಡೇನಕೊಪ್ಪ ಕಾಚಿನಕಟ್ಟೆ ಗ ಸಾಲು ಸಾಲು ಅಡಿಕೆ ಮರ ತೆಂಗಿನ ಮರಗಳು ನೆಲಕಚ್ಚಿವೆ.
ಸೊಗಾನೆಯಲ್ಲಿ ಹಲವು ಮನೆಗಳಿಗೆ ಹಾನಿ ಉಂಟಾಗಿದೆ.
ಮಳೆ ಗಾಳಿಯಿಂದಾಗಿ ಮನೆಗಳಿಗೆ ಹಾಕಿದ್ದ ಶೀಟ್ ಗಳು ಹಾರಿ ಹೋಗಿವೆ.
ಅಡಿಕೆ ಸೇರಿದಂತೆ ಮಾವು, ತೆಂಗಿನ ಮರಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.
ಮೇ 20. ಶಿವಮೊಗ್ಗದ ಶಿವಬಸವ ನಗರ, ಇಂದಿರಾಗಾಂಧಿ ಬಡಾವಣೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
220 ಕೆವಿ ಎಂ.ಆರ್.ಎಸ್ ಮುಖ್ಯ ಸ್ವೀಕರಣಾ ಕೇಂದ್ರದಲ್ಲಿ 66 ಕೆವಿ ಡಿವಿಜಿ-01 ಬಸ್ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ತಾವರೆಚಟ್ನಹಳ್ಳಿ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರಮುಖ ಪ್ರದೇಶಗಳಲ್ಲಿ ಮೇ 20 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಶಿವಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್ ಬಿ ಎಸ್ ನಗರ, ಅಶ್ವತ್ಥ್ ನಗರ, ಕೀರ್ತಿ ನಗರ,
ದೇವಂಗಿ 01 ನೇ ಹಂತ, ಬಸವೇಶ್ವರ ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ.
ಕೃಷಿ ನಗರ 01 ನೇ ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್‌ಮೆಂಟ್.
ಶಾಂತಿನಗರ ರಾಗಿಗುಡ್ಡ, ಪಾಪ್ಯುಲರ್ ರೈಸ್ ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್ ಮಿಲ್,
ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ, ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ತಿಳಿಸಿದೆ.
ಕಾರವಾರದ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆಯಿಂದ ವಿವಿಧ ವೃತ್ತಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಗ್ರಾಮೀಣ ಭಾಗದ ಯುವಕ-ಯುವತಿಯರಿಗಾಗಿ 12 ದಿನಗಳ ಉಚಿತ “ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ” ತರಬೇತಿಯನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ತರಬೇತಿ ಕಾರ್ಯಕ್ರಮವು ಜೂನ್ 12 ರಿಂದ ಪ್ರಾರಂಭವಾಗಲಿದ್ದು 18 ರಿಂದ 45 ವರ್ಷದೊಳಗಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಸಂಸ್ಥೆಯ ವತಿಯಿಂದಲೇ ಒದಗಿಸಲಾಗುತ್ತದೆ.
ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳು ಸ್ವಂತ ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಮತ್ತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿ ಅವಧಿಯಲ್ಲಿ ಹೈನುಗಾರಿಕೆಯ ಮೂಲಭೂತ ಜ್ಞಾನ, ಹಸುಗಳ ಆರೈಕೆ, ಆಹಾರ ನಿರ್ವಹಣೆ, ಹಾಲು ಉತ್ಪಾದನೆ, ಪಶು ಆರೋಗ್ಯ ಸಂರಕ್ಷಣೆ, ಗೋಶಾಲೆ ನಿರ್ವಹಣೆ, ಎರೆಹುಳ ಗೊಬ್ಬರ ತಯಾರಿಕೆ ವಿಧಾನ, ಸಾವಯವ ಕೃಷಿಯ ಮಹತ್ವ, ಗೊಬ್ಬರ ಘಟಕ ಸ್ಥಾಪನೆ ಹಾಗೂ ಸಣ್ಣ ಉದ್ಯಮ ಆರಂಭಿಸುವ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಬಿಳಿ ಹಾಳೆಯ ಮೇಲೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು, ಅದರ ಫೋಟೋ ತೆಗೆದು ಈ ಕೆಳಗಿನ
ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಅಥವಾ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲು ಅರ್ಜಿ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಗೂಗಲ್ ಫಾರ್ಮ್ ಲಿಂಕ್ (https://forms.gle/5qMgpA1XhR4RaBbk8) ಅಥವಾ CBD RSETI Haliyal ವಾಟ್ಸಾಪ್ ಚಾನೆಲ್‌ನಲ್ಲಿರುವ ಲಿಂಕ್ ಬಳಸಬಹುದು.
ಹೆಚ್ಚಿನ ವಿವರಗಳಿಗಾಗಿ ಮತ್ತು ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ: 8970145354 / 9483485489
ವೆಬ್‌ಸೈಟ್: www.rsetihaliyal.org
ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ, ಉದ್ಯೋಗ ವಿದ್ಯಾನಗರ, ಹಳಿಯಾಳ – 581329, ಉತ್ತರ ಕನ್ನಡ ಜಿಲ್ಲೆ ಇವರನ್ನು ಸಂಪರ್ಕಿಸಬಹುದೆಂದುತಿಳಿಸಿದೆ.
Madhu Bangarappa ನಿಗದಿತ ಅವಧಿಯೊಳಗೆ ಅತ್ಯಂತ ಗುಣಮಟ್ಟದಲ್ಲಿ ಕಾಮಗಾರಿಗಳನ್ನ ಪೂರ್ಣಗೊಳಿಸಿ- ಸಚಿವ ಮಧು ಬಂಗಾರಪ್ಪ
Madhu Bangarappa ತಾಳಗುಪ್ಪ ಹೋಬಳಿ ಮರತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಹಳ್ಳಿ ಗ್ರಾಮದ ಗುಡ್ಡಕೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು ₹45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂತ್ರಿ ಮಧು ಬಂಗಾರಪ್ಪ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ನಮ್ಮ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಿದ್ದು, ಮಳೆಗಾಲ ಆರಂಭವಾಗುವ ಮುನ್ನವೇ ನಿಗದಿತ ಅವಧಿಯೊಳಗೆ, ಅತ್ಯಂತ ಗುಣಮಟ್ಟದಿಂದ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು..
Madhu Bangarappa ಪ್ರತಿ ಹಳ್ಳಿಗಳ ಸಮಗ್ರ ವಿಕಾಸ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವುದೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ನಮ್ಮ ಅಭಿವೃದ್ಧಿ ಪಯಣ ನಿರಂತರವಾಗಿ ಮುಂದುವರೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
Rotary Shimoga ಆರೋಗ್ಯ ಕಾಳಜಿವಹಿಸುವವರು ಅನೇಕ ಮೊಬೈಲ್ ಆ್ಯಪ್ ಬಳಸಿ ತಮ್ಮ ದೇಹಾರೋಗ್ಯ ಅರಿಯಬಹುದು- ಡಾ.ಬಾಲು
Rotary Shimoga ಒತ್ತಡದ ಜೀವನಶೈಲಿಯಿಂದ ಬಹುತೇಕ ಜನರು ಬಳಲುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮನೆಯಲ್ಲೇ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಮುಖಾಂತರ ಎಐ ಬಳಸಿ ರಕ್ತದ ಒತ್ತಡ ಪರೀಕ್ಷೆ ಮಾಡಬಹುದು. ವೈದ್ಯರನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆಯಹುದಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಸಬಹುದಾಗಿದೆ ಎಂದು ತಿಳಿಸಿದರು.
ಡಾ. ಗುಡದಪ್ಪ ಕಸಬಿ ಮಾತನಾಡಿ, ವಿದೇಶಗಳಲ್ಲಿ ಜನರು ಮುಂಜಾಗೃತಾ ಕ್ರಮವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಶೇ. 17ರಷ್ಟು ಜನರು ಮಾತ್ರ ರಕ್ತದೊತ್ತಡ ಪರೀಕ್ಷೆ ಮಾಡಿಸುತ್ತಾರೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಎಲ್ಲ ವಯಸ್ಸಿನವರು ಒತ್ತಡದ ಜೀವನಶೈಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಕಾಲಕ್ಕೆ ವೈದ್ಯರ ಮಾರ್ಗದರ್ಶನ ಪಡೆಯುವುದು ಅತ್ಯಂತ ಮುಖ್ಯ ಆಗಿರುತ್ತದೆ. ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ ಮಾತನಾಡಿ, ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಾರೆ. ಎಐ ಬಳಸುವ ಮೂಲಕ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆರೋಗ್ಯದ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
Rotary Shimoga ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ನಿಯೋಜಿತ ಸೇನಾನಿ ಎ.ಒ.ಮಹೇಶ್, ನಿಯೋಜಿತ ಅಧ್ಯಕ್ಷ ಡಿ.ಕೆ.ಶೇಷಗಿರಿ, ಶ್ರೀಕಾಂತ್, ಆದಿಮೂರ್ತಿ, ಶ್ರೀನಿವಾಸಗೌಡ, ಎಸ್.ಗಣೇಶ್, ಚಂದ್ರಹಾಯ ಪಿ.ರಾಯ್ಕರ್, ಬಿ.ಗಂಗಪ್ಪ, ಡಾ. ಪರಮೇಶ್ವರ್ ಶಿಗ್ಗಾವ್, ಆರ್.ಕೃಷ್ಣಮೂರ್ತಿ, ವೀಣಾ ಕಿಶೋರ್, ಗಿರಿಜಾ ಧನಂಜಯ್, ಬಿಂದು ವಿಜಯಕುಮಾರ್, ಅರುಣ್ ದೀಕ್ಷಿತ್, ಡಾ. ರಕ್ಷಿತ್, ಡಾ. ಶಿವು ಇತರರಿದ್ದರು.
MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ 19 ಜನ ಸಂಪರ್ಕ ಸಭೆ
MESCOM ಆನವಟ್ಟಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮೇ 19 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.
MESCOM ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.;9448998783 ಸಂಪರ್ಕಿಸಬಹುದಾಗಿದೆ.
B.Y. Vijayendra ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ: ಭಂಡತನದ ಪರಾಕಾಷ್ಠತೆ- ಬಿ.ವೈ.ವಿಜಯೇಂದ್ರ
B.Y. Vijayendra ಯಾವ ಮಹತ್ಸಾಧನೆಗಾಗಿ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಸಾಧನಾ ಸಮಾವೇಶ ಸಂಘಟಿಸುತ್ತಿದೆ? ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಸ್ತಾಪಿತ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಔಚಿತ್ಯವನ್ನ ಪ್ರಶ್ನಸಿದ್ದಾರೆ.
ವಿಜಯೇಂದ್ರ ಅವರು ತಮಗಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನ ಬಯಲಿಗೆಳೆದಿದ್ದಾರೆ.
ನಿಮ್ಮ ಮೂರು ವರ್ಷದ ಆಡಳಿತ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದೇ ನಿಮ್ಮ ಸಾಧನೆಯೇ?
ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸದೇ ಅಭಿವೃದ್ಧಿಯನ್ನು ಶೂನ್ಯಗೊಳಿಸಿದ್ದು ನಿಮ್ಮ ಸಾಧನೆಯೇ?
ರೈತ ಕಲ್ಯಾಣಕ್ಕಾಗಿ ಯಾವುದೇ ಯೋಜನೆಯನ್ನು ರೂಪಿಸದೇ ನಿರಂತರವಾಗಿ ರೈತ ಹೋರಾಟಗಳನ್ನು ಹತ್ತಿಕ್ಕಿದ್ದು ನಿಮ್ಮ ಸಾಧನೆಯೇ?
ಮಹಿಳಾ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮವನ್ನೂ ಕೊಡಲಿಲ್ಲ, ಗೃಹಲಕ್ಷ್ಮೀ ಯೋಜನೆಯನ್ನೂ ಸಕಾಲದಲ್ಲಿ ತಲುಪಿಸುತ್ತಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ, ನಿರಂತರ ಅತ್ಯಾಚಾರಗಳು ನಿಮ್ಮ ಸರ್ಕಾರದಲ್ಲಿ ಸ್ತ್ರೀ ಕುಲವನ್ನು ಕಾಡಿದ ದೌರ್ಭಾಗ್ಯ. ಇದಕ್ಕಾಗಿ ನಿಮ್ಮ ಸಾಧನಾ ಸಮಾವೇಶವೇ?
ಸೂರುರಹಿತ ಜನರಿಗಾಗಿ ನಿವೇಶನ ಹಂಚಲಿಲ್ಲ, ಮನೆಗಳನ್ನು ವಿತರಿಸಲಿಲ್ಲ, ಮೈಸೂರು ಮುಡಾದಲ್ಲಿ ಸಾವಿರಾರು ನಿವೇಶನಗಳ ಲೂಟಿಕೋರತನದ ಸೂತ್ರ ವಹಿಸಿದ್ದು ನಿಮ್ಮ ಸಾಧನೆಯೇ?
ಮಹರ್ಷಿ ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ಕೆ ಮೀಸಲಾಗಿದ್ದ ಹಣವನ್ನು ಬ್ಯಾಂಕ್ ಖಾತೆಗೆ ಕನ್ನ ಹಾಕಿ, ಲೂಟಿ ಹೊಡೆದದ್ದು, ಪರಿಶಿಷ್ಟ ಜಾತಿ ಪಂಗಡಗಳ ಕಲ್ಯಾಣ ಕಾರ್ಯದ ಹಣವನ್ನು ದುರ್ಬಳಕೆ ಮಾಡಿಕೊಂಡು, ಆ ವರ್ಗವನ್ನು ವಂಚಿಸಿದ್ದು ನಿಮ್ಮ ಸರ್ಕಾರದ ಸಾಧನೆಯೇ?
ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಗಳಿಗೆ ಯೋಜನೆ ರೂಪಿಸಲಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನೂ ಬಿಡುಗಡೆ ಮಾಡದೇ, ಹಿಂದುಳಿದವರ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದ್ದು ನಿಮ್ಮ ಸಾಧನೆಯೇ?
ಮೀಸಲಾತಿ ಹೆಸರಿನ ಗೊಂದಲ, ಹಿಂದುಳಿದ ವರ್ಗದ ಆಯೋಗ ಡಾ. ಕಾಂತರಾಜು ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆದು, ಜನರ ತೆರಿಗೆ ಹಣ ರೂ. 165 ಕೋಟಿಗೆ ತರ್ಪಣ ಬಿಟ್ಟಿದ್ದು, ಹೊಸದಾಗಿ ಸಾಮಾಜಿಕ ಸಮೀಕ್ಷೆ ನಡೆಸುತ್ತೇವೆಂದು ರೂ. 400 ಕೋಟಿ ಮೀಸಲಿರಿಸಿಕೊಂಡು ಈ ಕ್ಷಣಕ್ಕೂ ವರದಿ ಬಿಡುಗಡೆ ಮಾಡದಿರುವುದು ನಿಮ್ಮ ಸಾಮಾಜಿಕ ನ್ಯಾಯದ ಸಾಧನೆಯೇ?
ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಸಮುದಾಯಗಳ ನಡುವೆ ಗೊಂದಲವೇರ್ಪಡಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಹೆಚ್ಚುವರಿ ಮೀಸಲಾತಿಯನ್ನು ಉಳಿಸಿ ರಕ್ಷಿಸಿಕೊಡದೇ, ಈ ಸಮುದಾಯಗಳ ಸಾಂವಿಧಾನಿಕ ಹಕ್ಕನ್ನು ಕಸಿದಿದ್ದು ನಿಮ್ಮ ಸಾಧನೆಯೇ?
ಶಾಂತಿ-ಸುವ್ಯವಸ್ಥೆಗೆ ಹೆಸರಾದ ಕನ್ನಡ ನಾಡನ್ನು ಗಾಂಧಿ, ಬಸವಾದಿಗಳ ಚಿಂತನೆ-ಆಶಯಗಳನ್ನು ಮೂಲೆಗುಂಪು ಮಾಡಿ 500 ಮೀಟರ್‌ಗೊಂದು ಮದ್ಯದಂಗಡಿ ತೆರೆದು ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಿದ್ದು ನಿಮ್ಮ ಸಾಧನೆಯೇ?
B.Y. Vijayendra ಉದ್ಯೋಗವಂಚಿತ ಯುವಜನರ ಬದುಕನ್ನು ಅಂಧಕಾರದಲ್ಲಿ ಮುಳುಗಿಸಿದ ನೀವು ಡ್ರಗ್ ವ್ಯಸನಿಗಳಾಗಿಸುವಂತೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ ಫ್ಯಾಕ್ಟರಿಯೇ ತೆರೆದುಕೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಡ್ರಗ್ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಕರುನಾಡು ವ್ಯಸನಿಗಳ ಬೀಡಾಗಿದೆ. ಲಕ್ಷಾಂತರ ಕುಟುಂಬಗಳು ಇದರಿಂದ ಬೀದಿಗೆ ಬೀಳುವಂತಾಗಿರುವುದು ನಿಮ್ಮ ಸಾಧನೆಯೇ?
ಶಿಕ್ಷಣ ಸೌಭಾಗ್ಯ ಕಲ್ಪಿಸಿ ಭವಿಷ್ಯತ್ತಿನ ಮಕ್ಕಳನ್ನು ದೇಶದ ಸಂಪನ್ಮೂಲವನ್ನಾಗಿಸಲು ಸಂಕಲ್ಪ ತೊಡಬೇಕಾದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯನ್ನೂ ತರಲಿಲ್ಲ, ಶಾಲೆಗಳನ್ನಂತೂ ತೆರೆಯಲೇ ಇಲ್ಲ, ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಲಿಲ್ಲ, ಜ್ಞಾನ ಗಂಗೆ ಹರಿಯಬೇಕಾದ ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್ ತೊಡಲು ಅವಕಾಶ ಮಾಡಿಕೊಟ್ಟು ಮತೀಯ ವಿಷ ಬೆರೆಸಲು ಹೊರಟಿರುವುದು ನಿಮ್ಮ ಸರ್ಕಾರದ ಸಾಧನೆಯೇ?
ಆರೋಗ್ಯ ಇಲಾಖೆಯಂತೂ ತುಕ್ಕು ಹಿಡಿದು ಕುಳಿತಿದೆ. 9 ತಿಂಗಳು ಹೊತ್ತು ಹೆತ್ತು ತಮ್ಮ ಕನಸಿನ ಕಂದಮ್ಮನನ್ನು ಮಡಿಲಿಗೆ ಹಾಕಿಕೊಳ್ಳುವ ಕನಸು ಹೊತ್ತು ಬರುವ ಗರ್ಭಿಣಿ ಸ್ತ್ರೀಯರ ಹಾಗೂ ಬಾಣಂತಿಯರ ಸರಣಿ ಸಾವು ನಿಮ್ಮ ಮೂರು ವರ್ಷ ಆಡಳಿತದ ಕರಾಳ ಛಾಯೆ. ಹೊಸ ಆಸ್ಪತ್ರೆಗಳ ಆರಂಭಿಸುವುದಾಗಿರಲಿ, ಕೊಳೆತು ನಾರುವ ಸ್ಥಿತಿಯಲ್ಲಿರುವ ಆಸ್ಪತ್ರೆಗಳನ್ನು ಸುಧಾರಿಸುವ ಯಾವ ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಿಲ್ಲ. ದೇವ ಧನ್ವಂತರಿಯ ಜಾಗದಲ್ಲಿ ಯಮನ ಸ್ವರೂಪಿಯ ಆಸ್ಪತ್ರೆಗಳನ್ನು ಸೃಷ್ಟಿಸಿದ್ದು ನಿಮ್ಮ ಸಾಧನೆಯೇ?
ಸರ್ಕಾರದ ಪಾವತಿಯನ್ನು ನಂಬಿ ಗುತ್ತಿಗೆ ಪೂರೈಸಿದ ಗುತ್ತಿಗೆದಾರರ ಕತ್ತು ಹಿಸುಕಲು ಕಮೀಷನ್ ಮುಷ್ಠಿಯನ್ನು ಬಳಸಿ, ಗುತ್ತಿಗೆದಾರರ ಬದುಕನ್ನು ಹೀಯಾಯ ಸ್ಥಿತಿಗೆ ತಳ್ಳಿ, ಪರ್ಸೆಂಟೇಜ್ ಸರ್ಕಾರ ಎಂದು ಕರೆಸಿಕೊಂಡಿದ್ದು ನಿಮ್ಮ ಸರ್ಕಾರದ ಸಾಧನೆಯೇ?
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ, ಪ್ರಜಾಪ್ರಭುತ್ವ ವ್ಯವಸ್ತೆಯ ನಂಬಿಕೆಗೆ ದ್ರೋಹ ಬಗೆದು, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಲೂಟಿಕೋರತನ, ಕಮೀಷನ್ ದಂಧೆ, ವಿಪರೀತ ಬೆಲೆಯೇರಿಕೆಯ ಬಿಸಿ ನಿಮ್ಮ ಸರ್ಕಾರದ ಕುಖ್ಯಾತಿ ಸಾಧನೆಯ ಕಿರೀಟಕ್ಕೆ ತಗುಲಿಸೊಂಡು ಸಂಘಟಿಸುತ್ತಿರುವ ನಿಮ್ಮ ಸಮಾವೇಶ ಸಾಧನೆಯದ್ದಲ್ಲ, ಭಂಡತನದ ಪರಾಕಾಷ್ಠೆಯ ಪ್ರದರ್ಶನ.
ನೀವು ಘೋಷಿಸಿರುವ ಸಾಧನೆಗಳೆಲ್ಲವೂ ಕಾಗದದ ಮೇಲಷ್ಟೇ ಜಾಹಿರಾತಿನ ಫಲಕಗಳ ಮೇಲಷ್ಟೇ ಕಾಣುತ್ತಿದೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ
