Tuesday, March 3, 2026
Tuesday, March 3, 2026
Home Blog Page 328

Food, Civil Supplies and Consumer Affairs ಒಂದು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಜೋಳ ಖರೀದಿಸಲು ಸರ್ಕಾರದ ತೀರ್ಮಾನ- ಕೆ.ಹೆಚ್.ಮುನಿಯಪ್ಪ

0

Food, Civil Supplies and Consumer Affairs ಬೆಂಗಳೂರು, ಏಪ್ರಿಲ್ 22, ಆಹಾರ ನಾಗರಿಕ‌ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ವಿಧಾನ ಸೌಧದದಲ್ಲಿ ಸಭೆ ನಡೆಯಿತು.

ಬಳ್ಳಾರಿ ಜಿಲ್ಲೆಯ ರೈತರ ನಿಯೋಗವು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಜೋಳ ಬೆಳೆಯವ ಜಿಲ್ಲೆಗಳು ಹಾಗೂ ರಾಜ್ಯದಾದ್ಯಂತ ಹಿಂಗಾರು ಹಂಗಾಮಿನ ಅವಧಿಯಲ್ಲಿ ಹೆಚ್ಚಿನ ಜೋಳವನ್ನು ಬೆಳೆಯುವ ಜಿಲ್ಲೆಗಳಲ್ಲಿ ಸರ್ಕಾರದ ವತಿಯಿಂದ ಬೆಂಬಲ ಬೆಲೆ ಯೋಜನೆಯಡಿ 2024-2025 ನೇ ಸಾಲಿನಲ್ಲಿ ಒಂದು ಲಕ್ಷ ಕ್ವಿಂಟಾಲ್ (LMT) ಜೋಳವನ್ನು ರೈತರಿಂದ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಲು ತೀರ್ಮಾನಿಸಿದ್ದು, ಪ್ರತಿ ಕ್ವಿಂಟಾಲ್ ಜೋಳದ ಧರ ಹೈಬ್ರೀಡ್ 3371 ಮಾಲ್ದಂಡಿ ಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 3421 ಧರವನ್ನು ನಿಗಧಿಪಡಿಸಲಾಗಿದೆ.

ಈಗಾಗಲೇ ನೊಂದಾಯಿಸಿದ ರೈತರು ಹಾಗೂ ಹೊಸದಾಗಿ ನೊಂದಾಯಿಸುವ ರೈತರು ಸಹ ತಾವು ಬೆಳೆದ ಬೆಲೆಯನ್ನು ನಿರ್ದಿಷ್ಟ ಖರೀಧಿ ಕೇಂದ್ರದ ಸ್ಥಳದಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರಕ್ಕೆ ನೀಡಲು ಕೋರಿದೆ ಎಂದರು.

ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರ ಧಾನ್ಯ ನೀಡುತ್ತಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ 2 ಕೆಜಿ ಅಕ್ಕಿಯ ಜೊತೆಗೆ 3 ಕೆಜಿ ಜೋಳವನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದರು.

Food, Civil Supplies and Consumer Affairs ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಸದಸ್ಯ ಬಸನಗೌಡ ಬಾದರ್ಲಿ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಹಾರ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಸೇರಿದಂತೆ ಹಾಗೂ ರೈತ ಸಂಘದ ರಘುನಾಥ್, ಮಾದವರೆಡ್ಡಿ ಕರೂರ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Mathura paradise ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದ ಶಿವಮೊಗ್ಗ ಮಂಜುನಾಥ್ ರಾವ್ ಗೆ ಶ್ರದ್ಧಾಂಜಲಿ

0

Mathura paradise ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪ್ಪಿದ ಶಿವಮೊಗ್ಗ ನಗರದ ನಿವಾಸಿ ಮಂಜುನಾಥ್ ಅವರಿಗೆ ಮಥುರಾ ಪ್ಯಾರಾಡೈಸ್ ಹೋಟೆಲ್ ಆವರಣದಲ್ಲಿ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿದರು.
ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಲಾಯಿತು. ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಕಾರ್ಯದರ್ಶಿ ಎನ್.ಗೋಪಿನಾಥ್, ಹೋಟೆಲ್ ಮಾಲೀಕರ ಸಂಘದ ನಿರ್ದೇಶಕರು, ಪುಷ್ಪರಾಜ್, ಗಣೇಶ್, ದ್ವಾರಕನಾಥ್ ಇತರರಿದ್ದರು.

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

0

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ. ರಕ್ತದಾನಕ್ಕಿಂತ ಅನ್ಯದಾನ ಬೇರೊಂದಿಲ್ಲ. ರಕ್ತದಾನದಿಂದ ಸದಾ ಲವವಲವಿಕೆಯಿಂದ ಇರುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಕರೆ ನೀಡಿದರು.

ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ರಕ್ತದಾನದಿಂದ ಶೇ.80 ರಷ್ಟು ಹೃದಯಘಾತ ಕಡಿಮೆಯಾಗುತ್ತದೆ. ರಕ್ತದಾನಿಗಳು ಸಮಾಜದ ನಿಜವಾದ ಹೀರೋಗಳು. ಇಂದು ರಕ್ತದ ಕೊರತೆ ಸಾಕಷ್ಟು ಇದೆ. ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ಯುವತಿಯರು ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ನಿರ್ದೇಶಕರಾದ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ಮಾತನಾಡಿ, ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವ ಪುಣ್ಯದ ಕೆಲಸದಲ್ಲಿ ನಾವು ನೀವೆಲ್ಲರೂ ಪಾಲ್ಗೊಳ್ಳೋಣ. ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನ ಎಂದು ನುಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್ ಮಾತನಾಡಿ, ನಿಜವಾದ ಮನುಕುಲದ ಸೇವೆಯನ್ನು ಇಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಆಸ್ತಿ. ಅವರ ಹೋರಾಟಗಳು ಇಂದಿಗೂ ಜನಮಾನಸದಲ್ಲಿ ಇವೆ. ಅವರ ಹುಟ್ಟುಹಬ್ಬವನ್ನು ರಕ್ತದಾನದ ಮುಖಾಂತರ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಶ್ಲಾಘಿಸಿದರು.

Acharya Tulsi National College of Commerce ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್ ಮಾತನಾಡಿ, ಇಂದು ರಕ್ತದಾನ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಇಂತಹ ಪವಿತ್ರ ಕಾರ್ಯದಲ್ಲಿ ನಮ್ಮ ಮಕ್ಕಳು ಪಾಲ್ಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ಇರುವ ಎಲ್ಲಾ ವಿದ್ಯಾರ್ಥಿಗಳು ಸಹ ರಕ್ತದಾನ ಮಾಡುವಂತೆ ಅವರಿಗೆ ಮನವರಿಸಲಾಗುವುದು ಎಂದು ನುಡಿದರು.

ವೇದಿಕೆಯಲ್ಲಿ ಪ್ರೊ. ಕೆ.ಎಂ.ನಾಗರಾಜ್ ಹಾಗೂ ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಪ್ರದೀಪ್, ಡಾ. ಪ್ರದೀಮ್ಯ, ಶೃತಿ.ಕೆ, ಸೌಪರ್ಣಿಕ ಉಮೇಶ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Nehru Yuva Kendra ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ಅವರಿಗೆ ಆತ್ಮೀಯ ಬೀಳ್ಗೊಡುಗೆ

0

Nehru Yuva Kendra ಶಿವಮೊಗ್ಗದ ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಸತತ ಆರು ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಮಂಗಳೂರಿಗೆ ವರ್ಗಾವಣೆಗೊಂಡ ಜಿಲ್ಲಾ ಯುವ ಅಧಿಕಾರಿ ಶ್ರೀ ಉಲ್ಲಾಸ ಕೆ ಟಿ ಕೆ ರವರಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಸನ್ಮಾನಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಸೇವೆಯನ್ನು ಗುರುತಿಸಿ ಧನ್ಯವಾದಗಳು ತಿಳಿಸಲಾಯಿತು.
ಹಾಗೂ ಅವರ ವೃತ್ತಿಜೀವನ ಯಶಸ್ಸಿನಿಂದ ಸಾಗಲಿ ಎಂದು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಮತ್ತು ತರಬೇತಿದಾರ ಶ್ರೀ ಹರ್ಷ ಮತ್ತು ರಾಜ್ಯ ನಾಗರೀಕರ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಕೆ ಶೇಖರ್ ಮತ್ತುಶಿವು ಉಪಸ್ಥಿತರಿದ್ದರು

Shivamogga Police ಬ್ರಹ್ಮಾವರದಿಂದ‌ ಯುವತಿ ಪ್ರಿಯಾಂಕ ನಾಪತ್ತೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಕಟಣೆ

0

Shivamogga Police ಹೊನ್ನೆತಾಳು ಗ್ರಾಮದ ಸುರೇಶ್ ಎಂಬುವವರ 19 ವರ್ಷದ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ ಎಂಬ ಯುವತಿ ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಏ.21 ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದು ಈ ವರೆಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ.
ಈಕೆಯ ಚಹರೆ ತೆಳುವಾದ ಮೈಕಟ್ಟು, 4 ಅಡಿ 5 ಇಂಚು ಎತ್ತರ, ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM DAD ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾಳೆ. ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವಳಾಗಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
Shivamogga Police ಯುವತಿ ಪತ್ತೆಯಾದಲ್ಲಿ ಶಿವಮೊಗ್ಗಜಿಲ್ಲೆ :- 08182-261400, ತೀರ್ಥಹಳ್ಳಿ :- 08181 – 220388, ಮಾಳೂರು :- 9480803333, ಆಗುಂಬೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ಛಾಯಚಿತ್ರ ಲಗತ್ತಿಸಿದೆ)

District Consumer Court and Consumer Forum ಕಳಪೆ ಭತ್ತದ ಬೀಜ ಪೂರೈಕೆ, ಖರೀದಿದಾರ ಕೃಷಿಕರಿಗೆ ಬೀಜ ಕಂಪನಿಯಿಂದ ಪರಿಹಾರ ನೀಡಲು ತೀರ್ಪು

0

District Consumer Court and Consumer Forum ಶಿಕಾರಿಪುರ ತಾಲೂಕು ಮಾಲಗೊಂಡನಕೊಪ್ಪ ಮತ್ತು ಬಿಳಿಕಿ ಗ್ರಾಮದ ಕೃಷಿಕರಾದ ರಮೇಶಪ್ಪ, ರಾಮಪ್ಪ ಸೋಮಪ್ಪ ಮತ್ತು ಇತರೆ 12 ಜನ ಕೃಷಿಕರಿಗೆ ಕಳಪೆ ಗುಣಮಟ್ಟದ ಭತ್ತದ ಬೀಜ ಪೂರೈಸಿದ ಪೂರೈಕೆದಾರರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ನೀಡಿದೆ.

ದೂರದಾರರಾದ ರಮೇಶಪ್ಪ ಮತ್ತು ಇತರ 12 ಜನ ರೈತರು ಕಾಸ್ವಿ ಅಗ್ರಿ ಜೆನೆಟಿಕ್ಸ್ ಪ್ರೈ.ಲಿ. ಮೆಹಬೂಬ್ ನಗರ, ತೆಲಂಗಾಣ, ಶ್ರೀ ಗಂಗಾ ಆಗ್ರೋ ಇನ್‌ಪುಟ್ಸ್, ಎ.ಪಿ.ಎಂ.ಸಿ. ದಾವಣಗೆರೆ ಮತ್ತು ಶ್ರೀ ಓಂ ಟ್ರೇರ‍ಸ್, ಆನವಟ್ಟಿ ರಸ್ತೆ, ಶಿರಾಳಕೊಪ್ಪ, ಶಿವಮೊಗ್ಗ ಜಿಲ್ಲೆ ಇವರುಗಳ ವಿರುದ್ದ ಕಳಪೆ ಗುಣಮಟ್ಟದ ಭತ್ತದ ಬೀಜಗಳನ್ನು ಪೂರೈಸಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ್ದರು. ಇವರುಗಳು ಶ್ರೀ ಓಂ ಟ್ರೇರ‍ಸ್ರವರಿಂದ ಚಾರ್ಮಿ ತಳಿಯ ಭತ್ತದ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿದ 40-50 ದಿನಗಳಾದರೂ ಸರಿಯಾದ ರೀತಿಯಲ್ಲಿ ಪೈರು ಬೆಳವಣಿಗೆಯಾಗದಿರುವುದರಿಂದ ಪೂರೈಕೆದಾರರನ್ನು ವಿಚಾರಿಸಿ, ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದವರು ಪರಿಶೀಲಿಸಿ ನೀಡಿರುವ ವರದಿಯನ್ನು ಆಧರಿಸಿ, ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದ್ದು, ಇಳುವರಿ ಕಡಿಮೆಯಾಗಿರುವುದಾಗಿ ದೂರು ನೀಡಿರುತ್ತಾರೆ.

ಈ ಸಂಬಂಧ ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಅವರು ತಮ್ಮ ವಕೀಲರ ಮೂಲಕ ಆಯೋಗದ ಮುಂದೆ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರ ಮತ್ತು ಎದುರುದಾರರ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಎರಡೂ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ ಹಾಗೂ ಉನ್ನತ ನ್ಯಾಯಾಲಯಗಳ ಆದೇಶಗಳನ್ವಯ, ಆಯೋಗವು ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದ್ದು, ದೂರುದಾರರು ನಷ್ಟ ಅನುಭವಿಸಿರುತ್ತಾರೆಂದು ತೀರ್ಮಾನಿಸಿ, ಎಲ್ಲಾ 13 ದೂರುದಾರರಿಗೆ ಪರಿಹಾರವಾಗಿ ಒಟ್ಟು ರೂ. 4,43,724/- ಗಳನ್ನು ಶೇ. 8ರ ಬಡ್ಡಿ ಸಹಿತ ದಿ: 01/01/2023 ರಿಂದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ಶೇ. 10ರಂತೆ ಬಡ್ಡಿಯನ್ನು ಪೂರ ಹಣ ಪಾವತಿಸುವವರೆಗೆ ಹಾಗೂ ರೂ. 10,000/- ಗಳನ್ನು ಮಾನಸಿಕ ಹಾನಿಗೆ ಮತ್ತು ರೂ. 5,000/-ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ಪ್ರತಿ ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ. 09 ರಂದು ಆದೇಶಿಸಿದೆ.

Marulasidda Swamiji Basava Kendra ಸೌಂದರ್ಯ ಪ್ರಜ್ಞೆಗೋಸ್ಕರ ಬ್ಯೂಟಿಪಾರ್ಲರ್ ಗಳು ತುಂಬಿ ತುಳುಕುತ್ತಿವೆ- ಶ್ರೀಮರುಳಸಿದ್ಧಶ್ರೀ

0

Marulasidda Swamiji Basava Kendra ಸೌಂದರ್ಯ ಪ್ರಜ್ಞೆ ಮತ್ತು ಚಂದ ಕಾಣುವ ವಾಂಚೆ ಇಂದು ಸಮಾಜದಲ್ಲಿ ಜಾಸ್ತಿ ಆಗುತ್ತಾ ಇದೆ ಎಂದು ಬಸವ ಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಯವರು ಹೇಳಿದರು.

ಇತ್ತೀಚಿಗೆ ಜೈಲ್ ಸರ್ಕಲ್  ಹತ್ತಿರ ಇರುವ “ಪ್ರಾಯ  ಏಸ್ತೀಯಟಿಕ್ ” ಸೌಂದರ್ಯ  ವರ್ಧಕ  ಆಸ್ಪತ್ರೆಯ  ಉದ್ಘಾಟನೆಯನ್ನು ಮಾಡಿ ಮಾತನಾಡಿದರು.

ಸೌಂದರ್ಯ ಪ್ರಜ್ಞೆಗೋಸ್ಕರ  ಬ್ಯೂಟಿ  ಪಾರ್ಲರ್ ಗಳು  ತುಂಬಿ ತುಳುಕುತ್ತಿವೆ.
ಈ ಹಿಂದೆ ಬೇರೆ ಬೇರೆ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದವರೆಲ್ಲಾ ಈಗ ಶಿವಮೊಗ್ಗದಲ್ಲಿಯೇ ಚಿಕಿತ್ಸೆ ಪಡೆಯಲು ಸೌಂದರ್ಯ ವರ್ಧಕ ಆಸ್ಪತ್ರೆ ಆರಂಭವಾಗಿರುವುದು ನಮಗೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಯುವ ಡಾಕ್ಟರ್ಗಳಾದ ಡಾಕ್ಟರ್ ಐಶ್ವರ್ಯ ಘಟ್ಟಡ್.ಡಾಕ್ಟರ್ 
ಕೆ ಪ್ರಜ್ವಲ್. ಡಾ.ಪ್ರವೀಣ್. ಡಾಕ್ಟರ್ ಸೌರಭ ಧನಂಜಯ ರವರು ಸೇರಿ  ಒಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ ಅವರುಗಳಿಗೆ ಶುಭವಾಗಲಿ ಎಂದು ಸ್ವಾಮೀಜಿ ಹಾರೈಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಡಾ. ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಕಾಂಗ್ರೆಸ್ ಮುಖಂಡ ಎಸ್ಪಿ ದಿನೇಶ್, ರೋಟರಿ ಪ್ರಮುಖರಾದ ಜಿ.ವಿಜಯಕುಮಾರ್, ಕರ್ನಾಟಕ  ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಡಾ. ಮೇಟಿ ಮಲ್ಲಿಕಾರ್ಜುನ, ನಿವೃತ್ತ ಪ್ರಾಂಶುಪಾಲರಾದ ಪ್ರವೀಣ್ ಮಹಿಶಿ ಮೊದಲಾದವರು ಉಪಸ್ಥಿರಿದ್ದರು.

Sahyadri Narayana Multispeciality Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಯಶಸ್ವಿ ಮಂಡಿ ಬದಲಿ ಮತ್ತು ಚಪ್ಪೆ ಕೀಲು ಶಸ್ತ್ರಚಿಕಿತ್ಸೆ – ಡಾ.ಚೇತನ್ ಮಠದ್.

0

Sahyadri Narayana Multispeciality Hospital ಮಲೆನಾಡು ಮತ್ತು ಮಧ್ಯ ಕರ್ನಾಟಕದಾದ್ಯಂತ ತನ್ನ ಉನ್ನತ ಗುಣಮಟ್ಟದ ಆರೈಕೆಗೆ ಹೆಸರುವಾಸಿಯಾಗಿರುವ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು,1,000 ಕ್ಕೂ ಹೆಚ್ಚು ಮೊಣಕಾಲು ಮತ್ತು ಚಪ್ಪೆ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ. ಇದರೊಂದಿಗೆ ಈ ಸಂಖ್ಯೆಯನ್ನು ತಲುಪಿದ ಈ ಭಾಗದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2012 ರಲ್ಲಿ ತನ್ನ ಮೂಳೆ ಶಸ್ತ್ರಚಿಕಿತ್ಸಾ ವಿಭಾಗವನ್ನು (ಆರ್ಥೋಪೆಡಿಕ್) ಪ್ರಾರಂಭಿಸಿದಾಗಿನಿಂದ,ಆಸ್ಪತ್ರೆಯು ಕಳೆದ 13 ವರ್ಷಗಳಲ್ಲಿ ಈ ಮಹತ್ವದ ಅಂಕಿಯನ್ನು ತಲುಪಿದೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಚೇತನ್ ಮಠದ್ ಅವರು ತಮ್ಮ ತಂಡದ ಸಾಧನೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡರು. “ನಮ್ಮ ಮೂಳೆಚಿಕಿತ್ಸಾ ತಂಡವು ಮೊಣಕಾಲು ಮತ್ತು ಚಪ್ಪೆಗೆ ಸಂಬಂಧಿಸಿದ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ,” ಎಂದು ಅವರು ವಿವರಿಸಿದರು. “ಇದರಲ್ಲಿ 200 ಕ್ಕೂ ಹೆಚ್ಚು ಮೊಣಕಾಲು ಆರ್ತ್ರೋಸ್ಕೋಪಿಗಳು ಸೇರಿವೆ – ಇದು ಹರಿದ ಕಾರ್ಟಿಲೇಜ್ ಅಥವಾ ಅಸ್ಥಿರಜ್ಜುಗಳಂತಹ ಸಮಸ್ಯೆಗಳನ್ನು ಸರಿಪಡಿಸಲು ಸಣ್ಣ ಛೇದನದೊಂದಿಗೆ ಕ್ಯಾಮೆರಾವನ್ನು ಬಳಸಿಕೊಂಡು ಮಾಡುವ ಕನಿಷ್ಠ ಆಕ್ರಮಣಕಾರಿ (minimally invasive) ಚಿಕಿತ್ಸೆಯಾಗಿದೆ.”

ತಮ್ಮ ತಂಡವು ಸಂಕೀರ್ಣವಾದ ಚಪ್ಪೆ ಶಸ್ತ್ರಚಿಕಿತ್ಸೆಗಳನ್ನು ಸಹ ಮಾಡುತ್ತಿದೆ ಎಂದ ಅವರು ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ನಾವು ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ( Total Knee Replacement) ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 50 ಈ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.

ಸುಮಾರು ೯೦ ವರ್ಷ ವಯೋಮಾನದ ವ್ಯಕ್ತಿಯೊಬ್ಬರು ನಮ್ಮಲ್ಲಿ ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈಗ ಅವರು ಬಹುತೇಕ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಇದೇ ರೀತಿಯ ಶಸ್ತ್ರಚಿಕಿತ್ಸೆಗಳ ಮೂಲಕ ೮೦ ರ ಆಸುಪಾಸಿನಲ್ಲಿರುವ ಹಲವಾರು ರೋಗಿಗಳಿಗೆ ನಾವು ಯಶಸ್ವಿ ಚಿಕಿತ್ಸೆ ನೀಡುವುದರ ಮೂಲಕ ಅವರು ಸುಲಭವಾಗಿ ನಡೆದಾಡುವಂತೆ ಮಾಡಿದ್ದೇವೆ,” ಎಂದರು..

ಯಾವಾಗ ಮೊಣಕಾಲು ಶಸ್ತ್ರಚಿಕಿತ್ಸೆ ಸರಿಯಾದ ಆಯ್ಕೆ?

ಇತರ ಚಿಕಿತ್ಸೆಗಳು ಫಲಕಾರಿಯಾಗದಿದ್ದಾಗ ಸಾಮಾನ್ಯವಾಗಿ ಮೊಣಕಾಲು ಶಸ್ತ್ರಚಿಕಿತ್ಸೆಗಳು ಒಂದು ಆಯ್ಕೆಯಾಗುತ್ತವೆ ಎಂದು ಡಾ. ಚೇತನ್ ವಿವರಿಸಿದರು. “ಔಷಧಿ, ಫಿಸಿಕಲ್ ಥೆರಪಿ, ಅಥವಾ ಚುಚ್ಚುಮದ್ದುಗಳಂತಹ ವಿಧಾನಗಳು ನೋವನ್ನು ನಿರ್ವಹಿಸಲು ಅಥವಾ ಕಾರ್ಯವನ್ನು ಸುಧಾರಿಸಲು ವಿಫಲವಾದಾಗ, ಶಸ್ತ್ರಚಿಕಿತ್ಸೆಯು ಮುಂದಿನ ಹಂತವಾಗಿರುತ್ತದೆ,” ಎಂದು ಅವರು ಹೇಳಿದರು.

Sahyadri Narayana Multispeciality Hospital ಶಸ್ತ್ರಚಿಕಿತ್ಸೆಯಿಂದ ಸಂಧಿವಾತದಿಂದ (ಅರ್ಥ್ರೈಟಿಸ್) ಚಲನಶೀಲತೆ ತೀವ್ರವಾಗಿ ಸೀಮಿತವಾಗಿರುವ ವೃದ್ಧರು. ಮೊಣಕಾಲಿನ ಕೀಲುಗಳಿಗೆ ಸಂಬಂಧಿಸಿದ ಹರಿದ ಅಸ್ಥಿರಜ್ಜುಗಳು ಅಥವಾ ಮೂಳೆ ಮುರಿತಗಳಂತಹ ತೀವ್ರವಾದ ಗಾಯಗಳಿರುವ ವ್ಯಕ್ತಿಗಳು. ತಿಂಗಳುಗಟ್ಟಲೆ ಶಸ್ತ್ರಚಿಕಿತ್ಸೆಯಲ್ಲದ ಚಿಕಿತ್ಸೆಯನ್ನು ಪಡೆದರೂ ದೀರ್ಘಕಾಲದ ನೋವು ಮತ್ತು ಚಲನಶೀಲತೆಯ ಸಮಸ್ಯೆಗಳನ್ನು ಅನುಭವಿಸುತ್ತಿರುವವರು. ನಡೆಯುವುದು ಅಥವಾ ಮೆಟ್ಟಿಲು ಹತ್ತುವಂತಹ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟಪಡುವ ಯಾರಾದರೂ ಇದರ ಪ್ರಯೋಜನ ಪಡೆಯಬಹುದು ಎಂದರು.

“ಮೊಣಕಾಲು ಶಸ್ತ್ರಚಿಕಿತ್ಸೆಯು ಅತ್ಯುತ್ತಮ ಫಲಿತಾಂಶಗಳನ್ನು ನೀಡುವ, ಅತೀ ಸುರಕ್ಷಿತ ವಿಧಾನವಾಗಿದೆ,” ಎಂದು ಹೇಳಿದ ಡಾ. ಚೇತನ್  “ತೀವ್ರವಾದ ಗಾಯಗಳು, ಸಂಧಿವಾತ ಅಥವಾ ಇತರ ಚಿಕಿತ್ಸೆಗಳಿಗೆ ಸ್ಪಂದಿಸದ ನಿರಂತರ ನೋವು ಅನುಭವಿಸುತ್ತಿರುವವರಿಗೆ ಇದು ಅತ್ಯುತ್ತಮ ವಿಧಾನ ವಾಗಿದ್ದು, ಇದರಿಂದ ಚಲನೆ ಸುಧಾರಿಸುವದಲ್ಲದೆ, ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ, ಈ ವಿಧಾನವು ಸಾಮಾನ್ಯವಾಗಿ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಹೆಚ್ಚಿನ ರೋಗಿಗಳು ಗಮನಾರ್ಹ ಸುಧಾರಣೆಯನ್ನು ಕಾಣುತ್ತಾರೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ವಾರಗಳು ಅಥವಾ ತಿಂಗಳುಗಳಲ್ಲಿ ತಮ್ಮ ದೈನಂದಿನ ದಿನಚರಿಗೆ ಮರಳಬಹುದು,” ಎಂದರು.

ಕೋವಿಡ್ ನಂತರದ ತೊಂದರೆಗಳಿಂದ ಚಪ್ಪೆ ಬದಲಿ ಶಸ್ತ್ರಚಿಕಿತ್ಸೆಗಳ ಹೆಚ್ಚಳ: ಡಾ. ಚೇತನ್ ಮಠದ್

ಚಪ್ಪೆ ಬದಲಿ ಶಸ್ತ್ರಚಿಕಿತ್ಸೆಗಳಲ್ಲಿನ ಒಂದು ಪ್ರವೃತ್ತಿಯನ್ನು ಗಮನಿಸಿರುವ ಡಾ. ಚೇತನ್ “ಕೋವಿಡ್ ನಂತರ ಚಪ್ಪೆ ಬದಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವದನ್ನು ನಾವು ಗಮನಿಸಿದ್ದೇವೆ,” ಎಂದು ಹೇಳಿದ ಅವರು. “ಈ ಪ್ರಕರಣಗಳಲ್ಲಿ ಗಣನೀಯ ಸಂಖ್ಯೆಯು ಅವಾಸ್ಕುಲರ್ ನೆಕ್ರೋಸಿಸ್ (Avascular Necrosis) ಕಾರಣದಿಂದಾಗಿವೆ – ಇದು ರಕ್ತದ ಹರಿವು ಕಡಿಮೆಯಾಗುವುದರಿಂದ ಮೂಳೆ ಅಂಗಾಂಶವು ಸಾಯುತ್ತವೆ.  

ಇದು”ಕೋವಿಡ್-19 ಚಿಕಿತ್ಸೆಯ ಸಮಯದಲ್ಲಿ ಸ್ಟೀರಾಯ್ಡ್‌ಗಳ ಬಳಕೆಯು ಇದಕ್ಕೆ ಒಂದು ಕಾರಣವಾಗಿರಬಹುದು ಎಂದರು.

 ವಿಶೇಷವಾಗಿ ವಯಸ್ಸಾದವರಿಗೆ ಸಕಾಲಿಕ ಚಿಕಿತ್ಸೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಅವರು “ಹೆಚ್ಚಿನ ಕೀಲು ಹಾನಿಯನ್ನು ತಡೆಗಟ್ಟಲು ಮತ್ತು ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಬೇಗನೆ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಪರಿಗಣಿಸುವುದು ಮುಖ್ಯ. ಚಿಕಿತ್ಸೆಯನ್ನು ವಿಳಂಬ ಮಾಡುವುದು ಕೆಲವೊಮ್ಮೆ ಹೆಚ್ಚಿನ ತೊಡಕುಗಳಿಗೆ ಕಾರಣವಾಗಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹಿರಿಯ ನಾಗರಿಕರು ಈ ಚಿಕಿತ್ಸೆಗೆ ಹಿಂಜರಿಯಬಾರದು – ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳು ಸುರಕ್ಷಿತವಾಗಿವೆ, ಮತ್ತು ಶೀಘ್ರವಾಗಿ ಚಿಕಿತ್ಸೆ ಪಡೆಯುವುದರಿಂದ ಅವರು ಸಕ್ರಿಯವಾಗಿ ಮತ್ತು ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ,” ಎಂದರು. ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಚಕ್ರವರ್ತಿ ಸಂಡೂರು, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್‌ ಪಿ ಜಾನ್‌, ಮಾರ್ಕೇಟಿಂಗ್‌ ಮುಖ್ಯಸ್ಥರು ಶ್ರೀ ರಾಜಾಸಿಂಗ್‌ ಎಸ್‌ ವಿ ಹಾಗೂ ಮಾರ್ಕೇಟಿಂಗ್‌ ಮ್ಯಾನೇಜರ್‌ ಶ್ರೀ ಶೈಲೇಶ್‌ ಎಸ್‌ ಎನ್‌ ಉಪಸ್ಥಿತರಿದ್ದರು. 

Dr. RC Jagdish ಏಪ್ರಿಲ್ 26 ರಿಂದ ಕೃಷಿ ವಿಜ್ಞಾನ ಕೇಂದ್ರದ ಬೆಳ್ಳಿಹಬ್ಬ.”ಹಣ್ಣು & ಆಜಾರ ಮೇಳ”- ಡಾ.ಆರ್.ಸಿ.ಜಗದೀಶ್

0

Dr. RC Jagdish ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28 ರವರೆಗೆ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಹಣ್ಣು ಮತ್ತು ಆಹಾರ ಮೇಳದ ಕುರಿತು ಮಾಹಿತಿ ನೀಡಲು ಬುಧವಾರ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು 2025 ಕ್ಕೆ ತನ್ನ 25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಪ್ರಯುಕ್ತ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣದಲ್ಲಿ ಏಪ್ರಿಲ್ 26 ರಿಂದ 28 ರವರೆಗೆ ‘ಹಣ್ಣು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಮೇಳ ಜರುಗಲಿದ್ದು, ಈ ಮೇಳದಲ್ಲಿ ವೈವಿಧ್ಯಮಯ ಮಾವಿನ ಹಣ್ಣುಗಳು, ಹಲಸು, ಬಾಳೆ ಹಾಗೂ ವಿವಿಧ ಜಾತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಹಣ್ಣು ಪ್ರಿಯರಿಗಾಗಿ ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣಿನ 30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ.
ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ಹಣ್ಣುಗಳು ಲಭಿಸಲಿವೆ. ಅಲ್ಲದೆ, ಗೆಡ್ಡೆ-ಗೆಣಸು ತಳಿಗಳ ಪ್ರದರ್ಶನ ಹಾಗೂ ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಮತ್ತು ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ವಿಶಿಷ್ಟ ಖಾದ್ಯಗಳು : ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳಾದ ತೊಡೆದೇವು, ಅಪ್ಪೆಮಿಡಿ, ಹಲಸು, ಬಾಳೆ, ಅನಾನಸ್, ಅಂಜೂರ, ಗೇರು, ಮುರುಗಲು, ಪುನರ್ಪುಳಿ ಇತ್ಯಾದಿಗಳ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಈ ಮೇಳದ ಅಂಗವಾಗಿ ಬೇಸಿಗೆಯ ಸವಿರುಚಿಗಳಾದ ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಆಲೂ ಟ್ವಿಸ್ಟರ್ ಇತ್ಯಾದಿ ಖಾದ್ಯಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
8 ಲಕ್ಷ ಸಸಿಗಳು ಲಭ್ಯ : ಕರಿಮೆಣಸು, ಕೋಕಂ, ಏಲಕ್ಕಿ, ದಾಲ್ಚಿನಿ, ಬಿದಿರು, ಕಾಫಿ, ಪುನರ್ಪುಳಿ, ಗೋಡಂಬಿ ಸೇರಿದಂತೆ ವಿವಿಧ ತಳಿಯ 8 ಲಕ್ಷ ಸಸಿಗಳು ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಹಣ್ಣುಗಳ ಉತ್ಪನ್ನಗಳಾದ ಜ್ಯೂಸ್, ಜ್ಯಾಮ್, ಜೇನು, ಇತರೆ ಉತ್ಪನ್ನಗಳು, ಸಿರಿಧಾನ್ಯದ ತೊಡೆದೇವು ಈ ರೀತಿಯ ಖಾದ್ಯಗಳು ಲಭ್ಯವಿರುತ್ತವೆ.
ಈ ಮೇಳದಲ್ಲಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ / ಕೈತೋಟದ ಪರಿಕರಗಳ ಮಾರಾಟ ಮಳಿಗೆಗಳು, ಅಲಂಕಾರಿಕ ಮೀನುಗಳು, ಬಾಳೆಯ ನಾರು, ಬಿದರಿನ ನಾರು ಮತ್ತು ಮಣ್ಣಿನಿಂದ ತಯಾರಿಸಿದ ಹಲವು ಸ್ವಸಹಾಯ ಸಂಘಗಳ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವಿರುತ್ತದೆ.
150 ಮಳಿಗೆ ಸ್ಥಾಪನೆ : 150 ಕ್ಕೂ ಹೆಚ್ಚಿನ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ, ರುಚಿಕರ ಹಣ್ಣು ಹಾಗೂ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಉದ್ದಿಮೆದಾರರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ. ಮುಖ್ಯವಾಗಿ ಈ ಮೇಳವು ರೈತರು, ವ್ಯಾಪಾರಿಗಳು, ರಫ್ತುದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಇನ್ನಿತರ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಆಗಲು, ಸಂಪರ್ಕ ಹೊಂದಲು ಒಳ್ಳೆಯ ವೇದಿಕೆ ಆಗಲಿದೆ.
ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆವರಣದ ಪ್ರಾತ್ಯಕ್ಷಿಕೆಯ ತಾಕುಗಳಾದ ಸಮಗ್ರ ಕೃಷಿ ಪದ್ಧತಿ. ಜೇನು ಸಾಕಾಣಿಕೆ ಘಟಕ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ, ಜಲ ಕೃಷಿ (ಹೈಡೋಫೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆ ಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ, ಅಲಂಕಾರಿಕ ಮೀನು ಘಟಕಗಳನ್ನು ಸಂದರ್ಶಿಸಿ, ಮಾಹಿತಿ ಪಡೆಯುವಂತೆ ಕರೆ ನೀಡುತ್ತಾ, ರೈತರು, ರೈತಮಹಿಳೆಯರು, ಯುವ ವ್ಯವಸಾಯಗಾರರು, ಉದ್ದಿಮೆದಾರರು, ಗ್ರಾಹಕರು, ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿ, ಉತ್ಪನ್ನಗಳನ್ನು ಖರೀದಿಸಿ, ಸ್ವಾದಿಸಿ, ಆನಂದಿಸಿ ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತೇವೆ.

Dr. RC Jagdish ಈ ರಜತ ಮಹೋತ್ಸವದ ಅಂಗವಾಗಿ ತಾಂತ್ರಿಕ ಸಮಾವೇಶಗಳು, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಆಕರ್ಷಕ ಬಹುಮಾನವನ್ನು ಮತ್ತು ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ತಾಂತ್ರಿಕ ಸಮಾವೇಶಗಳ ಆಯೋಜನೆ : ಏ.26 ರಂದು ವೈಜ್ಞಾನಿಕ ಜೇನು ಸಾಕಾಣಿಕೆ ಮತ್ತು ಜೇನಿನ ಮೌಲ್ಯವರ್ಧನೆ, ಜೇನು ವಿಷ ಬಳಕೆ, ನಸುರು ಜೇನು ಸಾಕಾಣಿಕೆ ಕುರಿತು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ರಫ್ತು ಅವಕಾಶಗಳು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಏ. 27 ರಂದು ತಾರಸಿ ತೋಟ ಮತ್ತು ತ್ಯಾಜ್ಯ ವಸ್ತು ನಿರ್ವಹಣೆ, ಬೋನ್ಸಾಯ್ ಕೃಷಿ ವೈಶಿಷ್ಟ್ಯಗಳು, ರೈತ ಉತ್ಪಾದಕ ಸಂಘಗಳ ಒಕ್ಕೂಟ, ರೈತ ಉತ್ಪಾದಕ ಸಂಘಗಳ ರಚನೆ ಮತ್ತು ಭವಿಷ್ಯದ ನಿರೀಕ್ಷೆಗಳು ಹಾಗೂ ಏ.28 ರಂದು ಗೋಡಂಬಿ ಬೆಳೆಯ ಉತ್ಪಾದನೆ ಮತ್ತು ಸಂಸ್ಕರಣೆ, ಕೋಕೊ ಬೆಳೆಯ ಉತ್ಪಾದನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತಾಂತ್ರಿಕ ಸಮಾವೇಶ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸ್ಪಧೆಗಳು ; 6 ರಿಂದ 10 ವರ್ಷದ ವಿದ್ಯಾರ್ಥಿಗಳಿಗೆ ಪ್ರಕೃತಿ ಕುರಿತು, 11 ರಿಂದ 13 ವರ್ಷದವರಿಗೆ ಜಾಗತಿಕ ತಾಪಮಾನ, 14 ರಿಂದ 16 ವರ್ಷದವರಿಗೆ ಉತ್ತಮ ಆರೋಗ್ಯಕ್ಕಾಗಿ ಹಣ್ಣು ಮತ್ತು ತರಕಾರಿಗಳ ಪ್ರಾಮುಖ್ಯತೆ ಕುರಿತಾದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ನವಿಲೆಯ ಕೃಷಿ ಕಾಲೇಜಿನ ಡಾ. ಸ್ವಾಮಿನಾಥನ್ ಸಭಾಂಗಣದಲ್ಲಿ ಬೆಳಿಗ್ಗೆ 11 ರಿಂದ 1.30 ರವರೆಗೆ ಏರ್ಪಡಿಸಲಾಗಿದ್ದು ಚಿತ್ರ ಬಿಡಿಸುವ ಪೇಪರ್ ಇತರೆ ಸಾಮಗ್ರಿಗಳನ್ನು ಸ್ಪರ್ಧಿಗಳು ತರಬೇಕು.
ಪಾಕ ಸ್ಪರ್ಧೆ : ಹಣ್ಣಿನ ಖಾದ್ಯಗಳ ಕುರಿತು ಸ್ಪರ್ಧೆ ನಡೆಯಲಿದ್ದು ಏ.26 ರಂದು ನವಿಲೆ ಕೃಷಿ ಕಾಲೇಜಿನ ನಾರ್ಮನ್ ಬೋರ್ಲಾಂಗ್ ಬಿಲ್ಡಿಂಗ್ ಹಿಂಭಾಗದಲ್ಲಿ ಬೆಳಿಗ್ಗೆ 11 ರಿಂದ ನಡೆಯಲಿದ್ದು ಸ್ಪರ್ಧಾಳುಗಳು ಮನೆಯಲ್ಲಿಯೇ ಖಾದ್ಯಗಳನ್ನು ತಯಾರಿಸಿ ತಂದು ಪ್ರದರ್ಶಿಸಬೇಕು.
ಸಾಂಸ್ಕೃತಿಕ ಕಾರ್ಯಕ್ರಮ : ರಜತ ಮಹೋತ್ಸವ ಅಂಗವಾಗಿ ಪ್ರತಿ ದಿನ ಸಂಜೆ ಕೃಷಿ ಕಾಲೇಜಿನಲ್ಲಿ 6 ರಿಂದ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೊಂಗಿರಣ, ಶಿವಮೊಗ್ಗ, ಶ್ರೀ ಅಂಬೇಡ್ಕರ್ ಜಾನಪದ ಕಲಾ ಸಂಘ, ಭದ್ರಾವತಿ ಹಾಗೂ ಕೃಷಿ ಮಹಾವಿದ್ಯಾಲಯ ಮತ್ತು ಇರುವಕ್ಕಿ ವಿದ್ಯಾರ್ಥಿ ತಂಡದವರು ನಡೆಸಿಕೊಡುವರು.
ರೈತರು, ನಾಗರೀಕರು, ವಿದ್ಯಾರ್ಥಿಗಳು, ಸ್ವ ಸಹಾಯ ಗುಂಪಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ ಡಾ.ಕೆ.ಸಿ.ಶಶಿಧರ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಡಿ.ತಿಪ್ಪೇಶ, ಸಹ ಸಂಶೋಧನಾ ನಿರ್ದೇಶಕ ಡಾ.ಪ್ರದೀಪ್ ಪಾಲ್ಗೊಂಡಿದ್ದರು.

Karnataka Electricity Transmission Corporation Limited ಮಂಡಗದ್ದೆಯ ನೂತನ ವಿದ್ಯುತ್ ಶಕ್ತಿ ಪರಿವರ್ತಕ & ಉದ್ದೇಶಿತ 110 ಕೆವಿ ಮಾರ್ಗ ಚಾಲನೆಗೆ ಮುನ್ನ ಸಾರ್ವಜನಿಕ ಜಾಗೃತಿ ಪ್ರಕಟಣೆ

0

Karnataka Electricity Transmission Corporation Limited ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 1×10 ಎಂವಿಎ ಶಕ್ತಿ ಪರಿವರ್ತಕ ಹಾಗೂ ಉದ್ದೇಶಿತ 110 ಕೆವಿ ಲಿಲೋ ಮಾರ್ಗವನ್ನು ಈಗಿರುವ ಶಿವಮೊಗ್ಗ- ಸೌತ್ ಕೆನರಾ ಲೈನ್ ವಿದ್ಯುತ್ ಮಾರ್ಗದಿಂದ ಮಂಡಗದ್ದೆ ವಿದ್ಯುತ್ ಉಪಕೇಂದ್ರದವರೆಗೆ ಸುಮಾರು 20 ಮೀಟರ್ ಪ್ರಸರಣ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಏ.30 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ಈ ಮಾರ್ಗವನ್ನು ಚಾಲನೆಗೊಳಿಸಲಾಗುವುದು.

ಸಾರ್ವಜನಿಕರು ಈ ಮಾರ್ಗದಲ್ಲಿ ಬರುವ ಗೋಪುರಗಳನ್ನು ಹತ್ತುವುದಾಗಲಿ, ದನಕರುಗಳನ್ನು ಕಟ್ಟುವುದಾಗಲಿ ವಾಹಕಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದಾಗಲಿ ನಿಷೇಧಿಸಲಾಗಿದೆ. ಹಾಗೂ ಈ ಕೃತ್ಯದಿಂದ ಉಂಟಾಗುವ ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿದ್ದು, ಕವಿಪ್ರನಿನಿಯು ಯಾವುದೇ ಜವಾಬ್ದಾರಿಯಾಗಿರುವುದಿಲ್ಲ ಹಾಗೂ ಪರಿಹಾರವನ್ನು ನೀಡುವುದಿಲ್ಲವೆಂದು ಶಿವಮೊಗ್ಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.