Thursday, June 11, 2026
Thursday, June 11, 2026
Home Blog Page 2005

ತಮಿಳುನಾಡು: ಚೆನ್ನೈ ಸೇರಿದಂತೆ ವರ್ಷಾಧಾರೆ. ಶಾಲಾಕಾಲೇಜಿಗೆ ರಜೆ ಘೋಷಣೆ.

0

ಎಡಬಿಡದೆ ಚೆನ್ನೈ ನಗರವನ್ನು ಹಾಗೂ ತಮಿಳುನಾಡಿನ ಕೆಲವು ಭಾಗಗಳನ್ನು ಕಾಡಿದ ವರುಣನಿಗೆ ಇನ್ನೂ ತೃಪ್ತಿಯಾಗಿಲ್ಲ.

ಆಸ್ತಿ-ಪಾಸ್ತಿ, ಜೀವಹಾನಿ ಎಲ್ಲವೂ ಆಗುತ್ತಿದೆ. ಹದಿನಾಲ್ಕು ಜನ ಸಾವನ್ನಪ್ಪಿದ್ದಾರೆ. 157 ಜಾನುವಾರು ಮೃತಪಟ್ಟಿದೆ. ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. 10 ಸಾವಿರ ಜನರಿಗೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಮಿಳುನಾಡು ಕಂದಾಯ ಸಚಿವ ರಾಮಚಂದ್ರನ್ ತಿಳಿಸಿದ್ದಾರೆ.

ಶ್ರೀಮತಿ ರಾಜೇಶ್ವರಿ ಎಂಬ ಮಹಿಳಾ ಇನ್ಸ್ಪೆಕ್ಟರ್, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವಿಜಯ್ ಕುಮಾರ್ ಎಂಬವರನ್ನು ಹೆಗಲ ಮೇಲೆ ಹೊತ್ತು ,ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ಸಿಬ್ಬಂದಿಯೂ 1840 ಪುರುಷರು, 1963 ಮಹಿಳೆಯರು, 994 ಮಕ್ಕಳು ಮತ್ತು 9 ತೃತೀಯಲಿಂಗಿ ಗಳನ್ನು ಮಳೆಯಿಂದ ರಕ್ಷಿಸಲಾಗಿದೆ. ಇವರೆಲ್ಲರನ್ನೂ ಚೆನ್ನೈ ಕಾರ್ಪೋರೇಷನ್ನಿನ 87 ವಸತಿ ಕೇಂದ್ರಗಳಲ್ಲಿ ದಾಖಲು ಮಾಡಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಇಡೀ ತಮಿಳುನಾಡಿನ ಸಂಕಷ್ಟಕ್ಕೆ ಕಾರಣವಾಗಿದೆ. ಮಳೆಯಿಂದಾಗಿ ಸಂಚಾರವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಐದು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಚೆನ್ನೈಗೆ ಆಗಮಿಸಬೇಕಿದ್ದ 14 ವಿಮಾನಗಳನ್ನು ಬೇರೆ ಕಡೆಗೆ ಕಳುಹಿಸಲಾಯಿತು. ಹಾಗೂ 22 ವಿಮಾನಗಳನ್ನು ರದ್ದುಗೊಳಿಸಲಾಯಿತು.

ಟಿ-20 ಪಾಕ್ ತಬ್ಬಿಬ್ಬು : ಆಸಿಸ್ ಫೈನಲ್ ಗೆ

0

ಟಿ – 20 ವಿಶ್ವಕಪ್ ಟೂರ್ನಿಯ B – ಗುಂಪಿನಲ್ಲಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಪಂದ್ಯ ನಡೆಯಿತು. ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ರೋಚಕ ಜಯವನ್ನು ಸಾಧಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

ದುಬೈನ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದ ಟಾಸ್ ನಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಮೊದಲ ಹಂತದ ವಿಕೆಟ್ ಜೊತೆಯಾಟದಲ್ಲಿ ಮಿಂಚಿದ ರಿಜ್ವಾನ್ 52 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಸಿಡಿಸಿ 67 ರನ್ ಗಳನ್ನ ಗಳಿಸಿದರು. ಮತ್ತೊಬ್ಬ ಬ್ಯಾಟ್ಸ್ ಮನ್ ಜಮಾನ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಬಾರಿಸಿ 55 ರನ್ ಕಲೆ ಹಾಕಿದರು. ಇವರಿಬ್ಬರ ರೋಚಕ ಬ್ಯಾಟಿಂಗ್ ನಿಂದಾಗಿ ಪಾಕ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ಇನ್ನಿಂಗ್ಸ್ ಅನ್ನು ಆರಂಭಿಸಿದ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ 35 ಎಸೆತಗಳಲ್ಲಿ 5 ಬೌಂಡರಿಗಳನ್ನು ಸಿಡಿಸಿ 39 ರನ್ ಗಳನ್ನ ಗಳಿಸಿದರು. ರಿಜ್ವಾನ್ ಅವರ ಕ್ಯಾಚ್ ಹಿಡಿಯುವಲ್ಲಿ ಆಸ್ಟ್ರೇಲಿಯಾ ಆಟಗಾರರು ವಿಫಲರಾದರು. ಈ ಎರಡು ಜೀವದಾನ ಲಾಭ ಪಡೆದ ರಿಜ್ವಾನ್ ಆಟ ರಂಗೇರಿತು. ರಿಜ್ವಾನ್, ಬಾಬರ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದರು. ಬಾಬರ್ ಈ ವಿಶ್ವಕಪ್ ನಲ್ಲಿ 300 ರನ್ ಗಳ ಗಡಿ ದಾಟಿಸಿ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ 3 ನೇ ಬ್ಯಾಟ್ಸ್ ಮನ್ ಎಂಬ ಬಿರುದಿಗೆ ಪಾತ್ರರಾದರು. ಆದರೆ ಆಸ್ಟ್ರೇಲಿಯಾದ ಸ್ಪಿನ್ನರ್ ಯಾಡo ಜಂಪಾ ಇನ್ನಿಂಗ್ಸ್ ನ 10 ನೇ ಓವರ್ ನಲ್ಲಿ ಬಾಬರ್ ಅವರ ವಿಕೆಟ್ ಪಡೆದರು. ನಂತರ ರಿಜ್ವಾನ್ ಜೊತೆಗೂಡಿದ ಜಮಾನ್ ಆಸ್ಟ್ರೇಲಿಯಾ ಬೌಲರ್ ಗಳಿಗೆ ಕಠಿಣ ಸವಾಲೋಡ್ಡಿದ್ದರು. ಜಮಾನ್ ಅಜೇಯ ಅರ್ಧಶತಕ ಗಳಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ರಿಜ್ವಾನ್ ಮತ್ತು ಜಮಾನ್ 72 ರನ್ ಸೇರಿಸಿದರು. 18 ನೇ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ರಿಜ್ವಾನ್ ಔಟಾದರು. ಆದರೂ ಜಮಾನ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಹೋರಾಟದ ಮೊತ್ತ ಗಳಿಸಿಕೊಟ್ಟರು.

177 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ 13 ಓವರ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಇವರಿಬ್ಬರ ಅಬ್ಬರದ ಬ್ಯಾಟಿಂಗ್ ಮೂಲಕ ಪಾಕ್ ಬೌಲರ್ಗಳು ಕಂಗೆಟ್ಟರು. ಸೋಲಿನ ಆತಂಕದಲ್ಲಿದ್ದಂತಹ ತಂಡವನ್ನು ಈ ಇಬ್ಬರು
ಗೆಲುವಿನ ದಡ ಸೇರಿಸಿದರು.

ಸತತ 5 ಪಂದ್ಯಗಳನ್ನು ಗೆದ್ದು ಭರವಸೆಯಲ್ಲಿದ್ದ ಪಾಕಿಸ್ತಾನ ಸೋಲಿನ ಸುಳಿಯಲ್ಲಿ ಸಿಲುಕಿ ನಿರಾಸೆ ಅನುಭವಿಸಿತು. ಒಟ್ಟಾರೆ ಆರಂಭದಿಂದ ಉತ್ತಮ ಪ್ರದರ್ಶನ ನೀಡಿದ್ದ ಪಾಕ್ ತಂಡ ಆಸ್ಟ್ರೇಲಿಯಾ ತಂಡದ ಗೆಲುವಿನ ಅಬ್ಬರಕ್ಕೆ ಸಿಲುಕಿ ಟಿ – 20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ.

ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿತ್ತು. ಟಿ – 20 ವಿಶ್ವಕಪ್ ಯಾವ ತಂಡಕ್ಕೆ ವಿಜಯಮಾಲೆ ಬೀಳಲಿದೆ ಎಂದು ಕಾದು ನೋಡಬೇಕಾಗಿದೆ.

ಜಿಂಗ್ ಪಿಂಗ್ ಶಕ್ತಿಶಾಲಿ ನಾಯಕ

0

ಚೀನಾದ ಹಾಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಈ ಐತಿಹಾಸಿಕ ತೀರ್ಮಾನವನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಕೈಗೊಂಡಿದೆ.
ಜಿನ್ ಪಿಂಗ್ ಎರಡನೇ ಅವಧಿಯು ಮುಂದಿನ ವರ್ಷ ಮುಕ್ತಾಯವಾಗಲಿದೆ. ಅದಾಗಿಯೂ ಗುರುವಾರ ತೆಗೆದುಕೊಂಡ ನಿರ್ಣಯದ ಕುರಿತು 2022 ರಲ್ಲಿ ನಡೆಯುವ ಸಿಪಿಸಿಯ ನ್ಯಾಷನಲ್ ಕಾಂಗ್ರೆಸ್ ಸಭೆಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಇದರಿಂದ ನಿರ್ಣಯಕ್ಕೆ ಅವಿರೋಧವಾಗಿ ಅಂಗೀಕಾರ ದೊರೆಯಲಿದ್ದು, ಮೂರನೇ ಬಾರಿಗೆ ಜಿನ್ ಪಿಂಗ್ ಅವರೇ ಚೀನಾ ಅಧ್ಯಕ್ಷರಾಗಿ ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಇದನ್ನು ಸುದ್ದಿ ಮೂಲಗಳು ತಿಳಿಸಿವೆ.
ಸಿಟಿ ಸಿಂಗ್ ಕೇಂದ್ರೀಯ ಸಮಿತಿಯು ಸಭೆಯ ನಂತರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಕ್ಸಿ ಜಿನ್ ಪಿಂಗ್ ಅವರೇ ಶಕ್ತಿಶಾಲಿ ನಾಯಕ ಎಂದು 400 ಸದಸ್ಯರುಳ್ಳ ಸಮಿತಿಯು ಒಪ್ಪಿಕೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ, ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷ ಹಾಗೂ ದೇಶದ ಅಧ್ಯಕ್ಷ ಈ ಮೂರೂ ಪ್ರಭಾವಿ ಹುದ್ದೆಗಳನ್ನು ಹೊಂದುವ ಮೂಲಕ 68 ವರ್ಷದ ಜಿನ್ ಪಿಂಗ್ ಅವರು ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಚೀನಾದಲ್ಲಿ ಅಧ್ಯಕ್ಷರ ಆಡಳಿತಾವಧಿ ಐದು ವರ್ಷ. ಜಿನ್ ಪಿಂಗ್ ಅವರು ಮೂರನೇ ಬಾರಿಯೂ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದು ವಿಶೇಷವಾಗಿದೆ.
ಇದೇ ಸಂದರ್ಭದಲ್ಲಿ ಕ್ಸಿ ಜಿನ್ ಪಿಂಗ್ ಅವರು, ಏಷ್ಯಾ ಮತ್ತು ಫೆಸಿಫಿಕ್ ಪ್ರದೇಶದಲ್ಲಿ ಬಿಕ್ಕಟ್ಟು ಉಲ್ಬಣವಾಗುತ್ತಿದ್ದು, ಇದು ಶೀತಲ ಸಮರಕ್ಕೆ ನಾಂದಿ ಹಾಡಲಿದೆ. ‘ಇಂಡೋ -ಫೆಸಿಫಿಕ್ ಪ್ರಾಂತ್ಯದಲ್ಲಿ ಸೈದ್ದಾಂತಿಕವಾಗಿ ಅಥವಾ ಭೌಗೋಳಿಕವಾಗಿ ಮಿತಿ ನಿಗದಿಪಡಿಸಿರುವುದು ಸಫಲವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಿಎಂ ಬೊಮ್ಮಾಯಿ ಅವರಿಂದ, ಪ್ರಧಾನಿ ಮೋದಿಗೆ ಆಮಂತ್ರಣ

0

ಸಿಎಂ ಬೊಮ್ಮಾಯಿ ಅವರು ನೂರು ದಿನಗಳ ಆಡಳಿತದ ವರದಿನೀಡಲು ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಬಿಟ್ ಕಾಯಿನ್ ಪ್ರಸಂಗದ ಬಗ್ಗೆ ಪ್ರಸ್ತಾಪಿಸಿದಾಗ, ಪ್ರಧಾನಿಯವರು ತಲೆಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ಇದಲ್ಲದೆ ರಾಜ್ಯದ ವಿವಿಧ ಪ್ರಗತಿಪರ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದಾರೆ. ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕೈಗೊಳ್ಳಲಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಧಾನಿ ಗಮನಕ್ಕೆ ತಂದಿದ್ದಾರೆ. ಅವುಗಳಲ್ಲಿ ,ಬೆಂಗಳೂರು ಉಪನಗರ ರೈಲು ಯೋಜನೆಗೆ ಅಡಿಗಲ್ಲು. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ಉನ್ನತೀಕರಿಸಿದ ಐಟಿಐ ಗಳ ಉದ್ಘಾಟನೆ. ಮುಂತಾದ ಕಾರ್ಯಕ್ರಮಗಳಲ್ಲಿ ಗಣ್ಯ ಅತಿಥಿಯಾಗಿ ಪಾಲ್ಗೊಳ್ಳಲು ಪ್ರಧಾನಿಯವರನ್ನು ಆಹ್ವಾನಿಸಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮಗಳು ಆಯೋಜನೆಯಾಗಿವೆ.

ನ್ಯಾಕ್ ಮಾನ್ಯತೆ : ಕರ್ನಾಟಕದ ವಿವಿಗಳು

0

ಶಿಕ್ಷಣ ಸಂಸ್ಥೆಯ ಗುಣಮಟ್ಟ ತಿಳಿಯಲು ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತೆ ಪರಿಷತ್ (ನ್ಯಾಕ್) ಮಾನ್ಯತೆ ಪಡೆಯುವುದು ವಿಶ್ವವಿದ್ಯಾಲಯಗಳಿಗೆ ಕಡ್ಡಾಯ. ಆದರೆ ರಾಜ್ಯದ 15 ವಿವಿಗಳು ಮಾನ್ಯತೆ ಪಡೆದಿಲ್ಲ ಎಂಬ ಆತಂಕಕಾರಿ ಸಂಗತಿ, ನ್ಯಾಕ್ ವರದಿಯಿಂದ ತಿಳಿದುಬಂದಿದೆ.

ವಿಶ್ವವಿದ್ಯಾಲಯ ಮತ್ತು ಅದರ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಕಾಂಪೌಂಡ್ ನಿಂದ ಹಿಡಿದು ಕಾಲೇಜಿನ ಬೋಧಕರು ಪಡೆದುಕೊಂಡಿರುವ ಪಿ.ಎಚ್.ಡಿ ಪರಿಗಣನೆಗೆ ತೆಗೆದುಕೊಂಡು ನ್ಯಾಕ್ ಶ್ರೇಣಿಯನ್ನು ನೀಡುತ್ತದೆ.

ರಾಜ್ಯದ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿ 28 ವಿಶ್ವವಿದ್ಯಾಲಯಗಳ ಪೈಕಿ 15 ವಿಶ್ವವಿದ್ಯಾಲಯಗಳು ಇನ್ನೂ ನ್ಯಾಕ್ ಮಾನ್ಯತೆ ಪಡೆದಿಲ್ಲದಿರುವುದು ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ.

ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳಿದ್ದು, ಈ ಪೈಕಿ 176 ಕಾಲೇಜುಗಳು ಮಾತ್ರವೇ ನ್ಯಾಕ್ ಮಾನ್ಯತೆ ಪಡೆದಿದೆ. ಉಳಿದ 167 ಕಾಲೇಜುಗಳ ಮಾನ್ಯತೆ ಪಡೆಯಲು ಅರ್ಹತೆ ಇದ್ದರು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿಲ್ಲ. ಮಾನ್ಯತೆ ಪಡೆದಿದ್ದ ಕಾಲೇಜುಗಳ ಪೈಕಿ 52 ಕಾಲೇಜುಗಳ ನ್ಯಾಕ್ ಮಾನ್ಯತೆ ಅವಧಿ ಮುಗಿದಿದೆ. ಆದರೆ ನವೀಕರಣಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿಲ್ಲ. ಇನ್ನು 9 ಕಾಲೇಜುಗಳು ಮಾನ್ಯತೆ ಪ್ರಕ್ರಿಯೆಯಲ್ಲಿವೆ. 21 ಕಾಲೇಜುಗಳು ಮಾನ್ಯತೆ ಪಡೆಯಲು ಅರ್ಹವಾಗಿವೆ. 5 ವಿವಿಗಳು ಕ್ಲಸ್ಟರ್ ವಿವಿಗಳಾಗಿವೆ. ಇವುಗಳಿಗೆ ಮಾನ್ಯತೆ ಅನ್ವಯಿಸುವುದಿಲ್ಲವೆಂದು ನ್ಯಾಕ್ ರೂಪಿಸಿರುವ ವರದಿಯಲ್ಲಿ ತಿಳಿಸಿದೆ.

ಕರ್ನಾಟಕ ಮುಕ್ತ ವಿವಿ- ಮೈಸೂರು, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ- ಬಳ್ಳಾರಿ, ಸಂಗೀತ ವಿವಿ- ಮೈಸೂರು, ಸಂಸ್ಕೃತ ವಿವಿ- ಬೆಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ- ಬೆಳಗಾವಿ, ಜನಪದ ವಿವಿ-ಹಾವೇರಿ, ಬೆಂಗಳೂರು ಕೇಂದ್ರ ವಿವಿ-ಬೆಂಗಳೂರು, ಬೆಂಗಳೂರು ಉತ್ತರ ವಿವಿ-ಬೆಂಗಳೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ- ಬೆಂಗಳೂರು, ಕೃಷಿ ವಿವಿ- ಧಾರವಾಡ, ಕೃಷಿ ವಿವಿ- ರಾಯಚೂರು, ತೋಟಗಾರಿಕೆ ವಿಜ್ಞಾನ ವಿವಿ-ಬಾಗಲಕೋಟೆ, ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿವಿ-ಶಿವಮೊಗ್ಗ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ-ಗದಗ ಈ ವಿವಿಗಳು ಇನ್ನು ನ್ಯಾಕ್ ಮಾನ್ಯತೆ ಪಡೆದಿಲ್ಲ ಎಂದು ನ್ಯಾಕ್ ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.

ಯುರೋಪ್ : ಕೋವಿಡ್ ಹರಡಿ ಆತಂಕ

0

ವಿಶ್ವವನ್ನೇ ತತ್ತರಿಸಿ ದಂತಹ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಯುರೋಪ್ ಹೊರತುಪಡಿಸಿ ವಿಶ್ವದ ಎಲ್ಲಾ ದೇಶಗಳಲ್ಲಿ ಇಳಿಮುಖವಾಗಿದೆ.

“ಯುರೋಪ್ ಮತ್ತೊಮ್ಮೆ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿದೆ. ಕೋವಿಡ್ ಅನ್ನು ತಡೆಯಲು ಹೆಚ್ಚಿನ ಕ್ರಮ ಕೈಗೊಳ್ಳದಿದ್ದರೆ, ಈ ಪ್ರದೇಶವು ಫೆಬ್ರವರಿ ವೇಳೆಗೆ ಇನ್ನೂ ಐದು ಲಕ್ಷ ಸಾವುಗಳನ್ನು ಕಾಣುವ ಸಾಧ್ಯತೆ ಇದೆ” ಎಂದು ಡಬ್ಲ್ಯು ಎಚ್ ಒ ಯುರೋಪಿನ ನಿರ್ದೇಶಕ ಡಾ.ಹ್ಯಾನ್ಸ್ ಕ್ಲೂಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ, ರಷ್ಯಾ, ಬ್ರಿಟನ್, ಟರ್ಕಿ ಮತ್ತು ಜರ್ಮನಿ ದೇಶಗಳಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದೆ.

ಯುರೋಪ್ ವ್ಯಾಪ್ತಿಯಲ್ಲಿ ಬರುವಂತಹ ರಷ್ಯಾ ಸೇರಿದಂತೆ ಒಟ್ಟು 61 ದೇಶಗಳಲ್ಲಿ ಕಳೆದವಾರ ಕೊರೋನಾ ಸೋಂಕಿನ ಪ್ರಮಾಣ ಶೇಕಡ ಹತ್ತರಷ್ಟು ಹೆಚ್ಚಾಗಿದೆ. ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ಲಸಿಕೆಯ ಕೊರತೆ ಹೊರತಾಗಿಯೂ, ಕೋವಿಡ್ ದ ಮೃತಪಟ್ಟವರ ಪ್ರಮಾಣ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.

ಯುರೋಪ್ ಮತ್ತೊಮ್ಮೆ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿದೆ.

ಬಿಟ್ ಕಾಯಿನ್ ವಿಚಾರ ಬಿಡಿ, ಕೆಲಸಕ್ಕೆ ಗಮನ ಕೊಡಿ

0

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿವರಣೆ ನೀಡಿದ್ದಾರೆ.ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರಧಾನಿಯವರು ಕೇಳಲಿಲ್ಲ. ನಾನು ಅವರಿಗೆ ಈ ವಿಚಾರ ತಿಳಿಸಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಜನಪರ ಕೆಲಸ ಮಾಡಿ ಎಂದು ಪ್ರಧಾನಿ ಸೂಚಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.
ಮಾದಕ ವಸ್ತು ಸರಬರಾಜು, ವರ್ಗಾವಣೆ ದಂಧೆ ಇತ್ಯಾದಿ ಅಕ್ರಮಗಳಲ್ಲಿ ಬಿಟ್ ಕಾಯಿನ್ ಅವ್ಯವಹಾರ ನಂಟು ಹೊಂದಿದೆ ಎನ್ನಲಾಗುತ್ತಿದೆ.ಆದರೆ ಈ ಪ್ರಕರಣದ ಖಳ ನಾಯಕರು ಯಾರು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಈ ವಿಚಾರವನ್ನು ಹಾನಗಲ್, ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪ್ರಸ್ತಾಪಿಸಿತ್ತು. ನಂತರ ಈ ಬಗೆಗಿನ ಚರ್ಚೆ ಬಿಸಿಯೇರಿತ್ತು.ಇದರ ಬಗ್ಗೆ ಪ್ರಧಾನಿ ಕಾರ್ಯಾಲಯ ಕೂಡ ಮಾಹಿತಿ ಕೇಳಿತ್ತು ಎಂದು ಹೇಳಲಾಗಿತ್ತು.
ಈ ವಿಚಾರವಾಗಿ ಜನ್ ಧನ್ ಖಾತೆಗಳಿಂದ ತಲಾ ಎರಡು ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ವಿವರಣೆ ನೀಡಿದ್ದಾರೆ. ಇದಲ್ಲದೆ ತಮ್ಮ ನೇತೃತ್ವದ ರಾಜ್ಯ ಸರ್ಕಾರದ ನೂರು ದಿನದ ಸಾಧನೆ ಬಗ್ಗೆಯೂ ಪ್ರಧಾನಿಯವರಿಗೆ ವಿಷಯ ತಿಳಿಸಿದ್ದಾರೆ. ಈ ಅವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದ್ದಾರೆ. ಈ ಕೆಲಸಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಸಿಎಂ ಹೇಳಿಕೊಂಡಿದ್ದಾರೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿ, ಮರುಚಾಲನೆ

0

ಸಂಸದರ ಪ್ರದೇಶಾಭಿವೃದ್ಧಿ ನಿಧಿ ( ಎಂಪಿಲ್ಯಾಡ್) ಯೋಜನೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಸಂಕಷ್ಟದ ಕಾರಣ ಎಂಪಿಲ್ಯಾಡ್ ಯೋಜನೆಯನ್ನ ಕಳೆದ ವರ್ಷ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರ 2020-21 ಮತ್ತು 2021-22 ರವರೆಗೆ ಸ್ಥಗಿತ ಗೊಳಿಸಲಾಗಿತ್ತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಎಂಪಿಲ್ಯಾಡ್ ಯೋಜನೆಯು 2025-26ರ ತನಕ ಮುಂದುವರಿಯಲಿದೆ. ಈ ವರ್ಷದ 2020-22 ನೇ ಸಾಲಿನ ಹಣಕಾಸು ವರ್ಷದ ಉಳಿದ ಭಾಗಕ್ಕೆ ಅನ್ವಯವಾಗುವಂತೆ ಪ್ರತಿ ಸಂಸದರಿಗೆ ಎಂಪಿಲ್ಯಾಡ್ ಮೂಲಕ ತಲಾ 5 ಕೋಟಿ ರೂಪಾಯಿ ಏಕಕಾಲದಲ್ಲಿ ಹಂಚಿಕೆಯಾಗಿದೆ ಎಂದರು. 2022-23 ರಿಂದ 2025-26ರ ತನಕ ಪ್ರತಿ ವರ್ಷ ಪ್ರತಿ ಸಂಸದರಿಗೆ ಎಂಪಿಲ್ಯಾಡ್ ಗೆ 5 ಕೋಟಿ ರೂಪಾಯಿ ಹಂಚಿಕೆ ಆಗಲಿದೆ ಹಾಗೂ ಇದನ್ನು 2.5 ಕೋಟಿ ರೂಪಾಯಿಯ ಎರಡು ಕಂತುಗಳಲ್ಲಿ ಸರ್ಕಾರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಎಂಪಿಲ್ಯಾಡ್ ಯೋಜನೆ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯಿಸಿದ್ದು ಕೋವಿಡ್ ಸಂಕಷ್ಟದ ಆರ್ಥಿಕ ಪರಿಸ್ಥಿತಿಯ ನಿರ್ವಹಣೆಗಾಗಿ 2020-21 ಹಾಗೂ 2021-22 ರ ಸಂಸದರ ನಿಧಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿತ್ತು ಈಗ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರ ಸಂಸದರ ನಿಧಿಗೆ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಎಂಪಿಲ್ಯಾಡ್ ಯೋಜನೆಯ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಂಪಿಲ್ಯಾಡ್ ಯೋಜನೆಯ ಬಳಕೆ ಮಾಡಿರುವುದರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈಗಾಗಲೇ 7 ಕೋಟಿ ರೂಪಾಯಿ ಅನುದಾನ ಖರ್ಚಾಗಿದೆ ಮಾಹಿತಿ ನೀಡಿದರು. ಅಲ್ಲದೆ ಕೇಂದ್ರ ಸರ್ಕಾರ ಸಂಸದರ ನಿಧಿಗೆ 2 ಕೋಟಿ ರೂಪಾಯಿ ಬಿಡುಗಡೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸೊರಬ,ಯಲವಳ್ಳಿ ಹೋರಿ ಬೆದರಿಸುವ ಹಬ್ಬ

0

ಸೊರಬ: ಗ್ರಾಮೀಣ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ರೋಚಕವಾಗಿ ಜರುಗಿತು. ಹೋರಿ ಪ್ರಿಯರಲ್ಲಿ ಉತ್ಸಾಹ ಎಲ್ಲೆಮೀರಿತ್ತು.

ದೀಪಾವಳಿಯ ನಂತರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಘೇರಾಯಿಸಿದ್ದರು.

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿ ಹಿಡಿಯುವ ದೃಶ್ಯವು ನೋಡುಗರ ಉಸಿರು ಬಿಗಿ ಹಿಡಿವಂತೆ ಮಾಡಿತು. ಗ್ರಾಮೀಣ ಯುವಜನರ ಸಾಹಸ, ಕೆಚ್ಚು ಇತ್ಯಾದಿಗಳನ್ನು ಬಿಂಬಿಸುವಂತೆ ಮಾಡುವ ಇಂತಹ ಹೋರಿ ಹಬ್ಬಗಳು ನಮ್ಮ ಹಳ್ಳಿಗಳ ಶೌರ್ಯದ ಸಂಕೇತವಾಗಿದೆ.

ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು.

 ಅಖಾಡದಲ್ಲಿ ಪುನೀತ್ ರಾಜ್‍ಕುಮಾರ್ ಸವಿನೆನಪಿಗಾಗಿ ಆನವಟ್ಟಿಯ ಪವರ್‍ಸ್ಟಾರ್, ಹಿರೇಕಸವಿ ಹಂತಕ, ತಡಸನಹಳ್ಳಿ ಡಾನ್, ಬಿಳಕಿ ಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ, ಬೈರೇಕೊಪ್ಪದ ಮದಗಜ, ಕೊಡಕಣಿ ಕದಂಬ, ಶಿರಾಳಕೊಪ್ಪದ ವೀರಕೇಸರಿ, ಸೊರಬದ ಶ್ರೀರಾಮ, ಚಿಕ್ಕಸವಿ ಜನಮೆಚ್ಚಿದ ಮಗ, ಕೊಡಕಣಿ ಬಸವ, ಯಲವಳ್ಳಿ ಗ್ರಾಮದ ಹೋರಿಗಳಾದ ಪಾಳೇಗಾರ, ಜಮೀನ್ದಾರ, ಗರುಡ, ಅಭಿಮನ್ಯು, ಕಂಸ ಹೋರಿ ಸವಿನೆನಪಿಗಾಗಿ ಕಲ್ಲೇಶ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡಿತು.

ಗ್ರಾಮ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಶಿವಮೊಗ್ಗ : ಗ್ರಂಥಾಲಯ ಇಲಾಖೆಯಲ್ಲಿ ಉದ್ಯೋಗಾವಕಾಶ

0

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾ.ಪಂ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ತೀರ್ಥಹಳ್ಳಿ ತಾಲ್ಲೂಕು ಬಾಂಡ್ಯಕುಕ್ಕೆ(ಪರಿಶಿಷ್ಟ ಜಾತಿ ಗ್ರಾಮೀಣ ಅಭ್ಯರ್ಥಿ), ಹೊಸನಗರ ತಾಲ್ಲೂಕು ರಿಪ್ಪನಪೇಟೆ(ಸಾಮಾನ್ಯ ಅಭ್ಯರ್ಥಿ), ಭದ್ರಾವತಿ ತಾಲ್ಲೂಕು ಸಿಂಗನಮನೆ(ಸಾಮಾನ್ಯ ಅಭ್ಯರ್ಥಿ), ಸಾಗರ ತಾಲ್ಲೂಕು ತುಮರಿ(ಸಾಮಾನ್ಯ ಅಭ್ಯರ್ಥಿ) ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಮಾಸಿಕ ಗೌರವ ಸಂಭಾವನೆ ರೂ.12,000 ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯ್ತಿ ಸ್ಥಳೀಯ ನಿವಾಸಿಗಳಾಗಿರತಕ್ಕದ್ದು. ಕನಿಷ್ಟ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು ಮತ್ತು ಆಯಾ ಪಂಚಾಯಿತಿಗಳಿಗೆ ನಿಗದಿಪಡಿಸಿದ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಹಾಗೂ ಇತರೆ ದಾಖಲಾತಿಗಳನ್ನು ಪಂಚಾಯಿತಿಗೆ ಸಲ್ಲಿಸಲು ಡಿಸೆಂಬರ್ 08 ಕಡೆಯ ದಿನವಾಗಿದ್ದು ಅರ್ಜಿ ನಮೂನೆಯನ್ನು ಆಯಾ ಗ್ರಾ.ಪಂ ಕಾರ್ಯಾಲಯದಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಗ್ರಾ.ಪಂ ಕಾರ್ಯಾಲಯ ಅಥವಾ ಉಪನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-222905 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು(ಹೆ.ಪ್ರ) ತಿಳಿಸಿದ್ದಾರೆ.