Wednesday, March 25, 2026
Wednesday, March 25, 2026
Home Blog Page 1404

ಪ್ರತ್ಯಕ್ಷ ದೈವದ ಸಂಕೇತವಾಗಿದ್ದ ಮೊಸಳೆ ಬಬಿಯಾ ಸಾವು

0

ಕುಂಬಳೆಯ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ಇನ್ನಿಲ್ಲ. ಸುಮಾರು 75 ವರ್ಷದ ಬಬಿಯಾ ನಿನ್ನೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದೆ. ಇದರಿಂದ ಭಕ್ತರು ಕಂಬನಿ ಮಿಡಿದಿದ್ದಾರೆ.

ಕುಂಬಳೆ ಸಮೀಪದ ನಾಯ್ಕಾಪು ಬಳಿಯ ಅನಂತಪುರ ದೇವಸ್ಥಾನದ ಪವಾಡ ಸದೃಶ ಮೊಸಳೆ ಬಬಿಯಾ ಸಸ್ಯಾಹಾರಿಯಾಗಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ ಬಬಿಯಾಗೆ ಅನ್ನ ನೀಡಲಾಗುತ್ತಿತ್ತು. ಮೊಸಳೆಗೆ ನೈವೇದ್ಯ ಮಾಡುವುದು ಇಲ್ಲಿನ ಪ್ರಮುಖ ಸೇವೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬಬಿಯಾ ಬಳಿ ಪ್ರಾರ್ಥಿಸುತ್ತಿದ್ದರು. ಅರ್ಚಕರೇ ಪ್ರತಿನಿತ್ಯ ಬಬಿಯಾಗೆ ನೈವೇದ್ಯ ಅರ್ಪಿಸುತ್ತಿದ್ದರು. ಅರ್ಚಕರ ಕರೆಗೆ ಓಗೊಟ್ಟು ಬರುತ್ತಿದ್ದ ಮೊಸಳೆಯನ್ನು ಕಂಡು ಭಕ್ತರು ಬೆರಗಾಗುತ್ತಿದ್ದರು. ಇನ್ನು ಸರೋವರದ ಇತರ ಜೀವಿಗಳು ಮತ್ತು ಮೀನುಗಳಿಗೆ ಬಬಿಯಾ ಯಾವುದೇ ಹಾನಿ ಮಾಡುತ್ತಿರಲಿಲ್ಲ. ಮೊಸಳೆ ಬಬಿಯಾ ಸತ್ತಿದೆ ಎಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು.

ಕುಂಬಳೆ ಸಮೀಪದ ಈ ದೇವಾಲಯವು ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಮೂಲ ಕ್ಷೇತ್ರ. ಭಾರತದ ಏಕೈಕ ಸರೋವರ ದೇವಾಲಯ ಎಂಬ ಮಾತಿದೆ.
1945ರಲ್ಲಿ ದೇವಸ್ಥಾನದಲ್ಲಿದ್ದ ಮೊಸಳೆಯನ್ನು ಬ್ರಿಟಿಷ್​ ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದನಂತೆ. ಇದಾದ ಕೆಲ ದಿನಕ್ಕೆ ಮೊಸಳೆ ಬಬಿಯಾ ದೇವಾಲಯದ ಸರೋವರದಲ್ಲಿ ಮತ್ತೆ ಕಾಣಿಸಿಕೊಂಡಿತ್ತು ಎಂಬ ಪ್ರತೀತಿ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಬಬಿಯಾವನ್ನು ಪ್ರತ್ಯಕ್ಷ ದೇವ ಎಂದೇ ನಂಬಿ ಅದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಪ್ರಸಾದ ಸ್ವೀಕರಿಸುವಾಗ ಸರೋವರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಬಿಯಾವನ್ನ ನೋಡಲು ಜನಸಾಗರವೇ ಸೇರುತ್ತಿತ್ತು. ಇದೀಗ ಬಬಿಯಾ ಇನ್ನಿಲ್ಲಾ ಎಂಬ ಸುದ್ದಿ ಕೇಳಿ ಭಕ್ತರು ಆಘಾತಗೊಂಡಿದ್ದಾರೆ. ಸಾವಿರಾರು ಮಂದಿ ಬಬಿಯಾದ ಅಂತಿಮ ದರ್ಶನ ಪಡೆಯಲು ಅನಂತಪುರಕ್ಕೆ ಆಗಮಿಸಿದ್ದಾರೆ. ಪ್ರತ್ಯಕ್ಷ ದೇವರೆಂದೇ ಸ್ಥಳೀಯರು ನಂಬುತ್ತಿದ್ದ ಬಬಿಯಾ ಇನ್ನು ನೆನಪು ಮಾತ್ರ. ಸಕಲ ವೈದಿಕ ವಿಧಿಗಳೊಂದಿಗೆ ದಫನ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

ಸಾವರ್ಕರ್ ಬಗ್ಗೆ ಹಸಿ ಸುಳ್ಳಿನ ಪ್ರಚಾರ ನಿಲ್ಲಿಸಬೇಕು- ಬಿ.ಎಲ್.ಸಂತೋಷ್

0

ಭಾರತ ಆತ್ಮನಿರ್ಭರತೆಯೊಂದಿಗೆ ಮುಂದೆ ಸಾಗುತ್ತಿರುವಾಗ, ವೀರ ಸಾವರ್ಕರ್ ಅವರ ಬಗ್ಗೆ ಹಸಿ ಸುಳ್ಳುಗಳ ಅಪ್ರಪ್ರಚಾರ ನಿಲ್ಲಿಸಬೇಕು. ಇಲ್ಲವಾದರೆ ನಾವು ನಿಲ್ಲಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಸ್ವರಾಜ್-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಕೇವಲ ಎಡಪಂಥೀಯ ವಿಚಾರಧಾರೆ, ಮತ ತುಷ್ಠೀಕರಣಕ್ಕಾಗಿ ಹಸಿ ಸುಳ್ಳುಗಳನ್ನು ಹಬ್ಬಿಸಲು ಮುಂದಾದರೆ ಸಹಿಸಿಕೊಳ್ಳಲಾಗದು. ಇಂತಹ ಕಾರಣಗಳಿಂದ ದೇಶ ಅಪಾಯ ಸ್ಥಿತಿ ಎದುರಿಸುವಂತಾಗಿದೆ. ಭಾರತ ಮಾತಾಕಿ ಜೈ ಎಂದರೆ ಆರ್ ಎಸ್‌ಎಸ್ ಕಾರ್ಯಕ್ರಮ ಎಂದು, ವಂದೇಮಾತರಂ ಹಾಡಿದರೆ ಎಬಿವಿಪಿ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಭಾರತ ಮಾತೆಗೆ ಜೈ ಎನ್ನುವುದಕ್ಕೆ ನಿಮಗೆ ಮನಸಿಲ್ಲ ಎಂದರೆ ನಾವೇನು ಮಾಡಲಾಗುತ್ತಿದೆ ಎಂದರು.

ನಮ್ಮ ದೇಶಕ್ಕೆ ಎಡಪಂಥೀಯ ವಿಚಾರ ಧಾರೆ ಮಾಡಿದಷ್ಟು ಅನ್ಯಾಯ ಜಗತ್ತಿನ ಬೇರಾವ ದೇಶದಲ್ಲೂ ಆಗಿಲ್ಲ. ವರ್ಷಕ್ಕೆ ಸರಾಸರಿ 32 ಲಕ್ಷ ಜನ ತಾಜ್ ಮಹಲ್ ಗೆ ಭೇಟಿ ನೋಡುತ್ತಾರೆ. ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಸ್ಥಳಕ್ಕೆ ಸೇರಿದಂತೆ ದೇಶಕ್ಕಾಗಿ ತ್ಯಾಗಮಾಡಿದ ಯೋಧರ ಸ್ಥಳಗಳಿಗೆ ಎಷ್ಟು ಜನ ಭೇಟಿ ನೀಡುತ್ತಾರೆ ಎಂಬ ಆತ್ಮಾವಲೋಕನ ಅಗತ್ಯ. ಮಕ್ಕಳಿಗೆ ಇದರ ಮನವರಿಕೆ ಆಬೇಕಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇವಲ ಗಾಂಧೀಜಿ ಒಬ್ಬರಿಂದಲೇ ಎಂದರೆ ಉಳಿದ ಹೋರಟಗಾರಿಗೆ ಅವಮಾನ ಮಾಡಿದಂತೆ. ಗಾಂಧಿಜೀಯವರ ಬಗ್ಗೆ ಪೂರ್ಣ ಶ್ರದ್ಧೆಯಿಂದಲೇ ನಾನು ಈ ಮಾತು ಹೇಳುತ್ತೇನೆ. ಅನೇಕ ನಾಯಕರು ಅಲ್ಲದೆ ಸಾಹಿತಿಗಳು, ಕಲಾವಿದರು, ಮಹಿಳೆಯರು, ಬಾಲಕರು, ಯುವಕರು ಹೀಗೆ ಅನೇಕರು ತ್ಯಾಗ, ಬಲಿದಾನ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಸಹಕಾರ ಚಳವಳಿ ಮಹತ್ವದ ಕೊಡುಗೆ ನೀಡಿದೆ ಎನ್ನಬಹುದು ಎಂದರು.

ಕರ್ನಾಟಕ ಮುಕ್ತ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ಸಾಲಿನ ಅನೇಕ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅ.31ರವರೆಗೆ ಕಾಲಾವಕಾಶ ವಿಸ್ತರಿಸಿದೆ. ಮಲ್ಲೇಶ್ವರದ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ.

ಪದವಿ ವಿಭಾಗದಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಸ್ನಾತಕೋತ್ತರ ವಿಭಾಗದಲ್ಲಿ ಎಂಎ, ಎಂಸಿಜೆ, ಎಂಕಾಂ, ಬಿಎಲ್ ಐಎಸ್ಸಿ, ಎಂಎಲ್‌ಐಎಸ್ಸಿ, ಎಂಎಸ್ಸಿ, ಎಂಬಿಎ, ಪಿಜಿ, ಸರ್ಟಿಫಿಕೇಟ್ ಪ್ರೋಗ್ರಾಮ್ಸ್, ಡಿಪ್ಲೊಮಾ ಪ್ರೋಗ್ರಾಮ್, ಸರ್ಟಿಫಿಕೇಟ್ ಪ್ರೋಗ್ರಾಮ್‌ಗಳಿಗೆ ಪ್ರವೇಶ ಲಭ್ಯವಿದೆ.

ಆಸಕ್ತರು ವಿವಿಯ ವೆಬ್‌ಸೈಟ್ www.ksoumysuru.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು ಎಂದು ವಿಭಾಗದ ನಿರ್ದೇಶಕರಾದ ಜೆ.ಶಶಿಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಜಿಸಿಯಿಂದ ಸ್ವಾಯತ್ತ ಕಾಲೇಜುಗಳಿಗೆ ಹೊಸ ಮಾರ್ಗಸೂಚಿ

0

ವಿಶ್ವವಿದ್ಯಾಲಯ ಅನುದಾನ ಆಯೋಗವು ಸ್ವಾಯತ್ತ ಕಾಲೇಜುಗಳಿಗಾಗಿ ಹೊಸ ಮಾರ್ಗಸೂಚಿ ರಚಿಸಿದ್ದು, ಇದನ್ನು ಬಿಡುಗಡೆ ಮಾಡಲಿದೆ.

‘ಯುಜಿಸಿ ರಚಿಸಿದ್ದ ತಜ್ಞರ ಸಮಿತಿಯು ಈ ಮಾರ್ಗಸೂಚಿ ಸಿದ್ಧಪಡಿಸಿದೆ. ಸೆಪ್ಟೆಂಬರ್‌ 22ರಂದು ನಡೆದಿದ್ದ ಯುಜಿಸಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಮಂಗಳವಾರ ಇದನ್ನು ಬಹಿರಂಗಪಡಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.

‘ಸ್ವಾಯತ್ತ ಕಾಲೇಜುಗಳು ಪ್ರತ್ಯೇಕ ನೋಂದಣಿ ನಿಯಮಗಳನ್ನು ಹೊಂದಲು, ಕೋರ್ಸ್‌ ಹಾಗೂ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು, ತಮ್ಮದೇ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಳ್ಳಲು, ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಉತ್ತೇಜಿಸಲು ನೂತನ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ’ ಎಂದು ಹೇಳಲಾಗಿದೆ.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಈ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಇನ್ನು ಮುಂದೆ ತಮಗೆ ಬೇಕಾದ ಕೋರ್ಸ್‌ಗಳನ್ನು ಅಳವಡಿಸಿಕೊಳ್ಳಲು ಸ್ವಾಯತ್ತ ಕಾಲೇಜುಗಳಿಗೆ ಪೂರ್ಣ ಸ್ವಾತಂತ್ರ್ಯ ದೊರೆಯಲಿದೆ’ ಎಂದು ಯುಜಿಸಿ ಮುಖ್ಯಸ್ಥ ಎಂ.ಜಗದೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಇಂಗ್ಲೀಷ್ ಬಿಟ್ಟು ಹಿಂದಿ ಮಾಧ್ಯಮ ಪ್ರಾಶಸ್ತ್ಯಕ್ಕೆ ಶಿಫಾರಸು

0

ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬಿಟ್ಟು ಹಿಂದಿ ಕಡ್ಡಾಯಗೊಳಿಸಲು ಅಮಿತ್ ಶಾ ನೇತೃತ್ವದ ಸಂಸತ್ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿಗಳಿಗೆ ಶಿಫಾರಸು ಸಲ್ಲಿಸಿದೆ.

ಹಿಂದಿ ಬೆಳೆಸಲು 112 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರಪತಿಗಳಿಗೆ ಸೆಪ್ಟಂಬರ್ ನಲ್ಲಿ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿದೆ.
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿದಂತೆ ಐಐಟಿಯಂತಹ ಉನ್ನತ ತಾಂತ್ರಿಕ ಸಂಸ್ಥೆಗಳಲ್ಲಿಯೂ ಇಂಗ್ಲಿಷ್ ಬದಲಿಗೆ ಹಿಂದಿ ಮಾಧ್ಯಮದಲ್ಲಿ ಬೋಧನೆ ಮಾಡಬೇಕು.
ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಬರುವವರಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.

ಕೇಂದ್ರ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬರುವವರೆಗೆ ಆದ್ಯತೆ ನೀಡಬೇಕು. ಹಿಂದೆ ಬಾರದ ನೌಕರರಿಗೆ ಎಚ್ಚರಿಕೆ ನೀಡಿ ವಾರ್ಷಿಕ ವರದಿಯಲ್ಲಿ ನಮೂದಿಸಬೇಕು.

ಹಿಂದಿಯಲ್ಲಿ ಹೈಕೋರ್ಟ್ ಕಲಾಪ ನಡೆಸಬೇಕು. ಎಲ್ಲ ಪತ್ರ ವ್ಯವಹಾರಗಳು ಹಿಂದಿಯಲ್ಲಿ ನಡೆಯಬೇಕು. ಶೇಕಡ 50ರಷ್ಟು ಜಾಹೀರಾತಿನ ಹಣವನ್ನು ಹಿಂದಿಯಲ್ಲಿ ನೀಡಲು ಮೀಸಲಿಡಬೇಕು ಎಂದು ಹೇಳಲಾಗಿದೆ.

ನ್ಯಾ.ಸದಾಶಿವ ಆಯೋಗದ ವರದಿ ಪರಿಶೀಲಿಸಿ ಸೂಕ್ತ ಕ್ರಮ- ಬೊಮ್ಮಾಯಿ

0

ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು, ಇವರಿಗೆ ನ್ಯಾಯ ಒದಗಿಸಲು ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇನ್ನು ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ ಎಂದರು.

ಅಡಕೆ ಬೆಳೆ ವಿಮೆ ದಕ್ಷಿಣ ಕನ್ನಡದಲ್ಲೇ ಅಧಿಕ ನೋಂದಣಿ

0

ಹವಾಮಾನ ಆಧರಿತ ವಿಮಾ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ನೆರವಿಗೆ ಬಂದಿದ್ದು, ಇಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಅತಿವೃಷ್ಟಿ, ಕೊಳೆರೋಗ, ನಳ್ಳಿ (ಎಳೆ ಅಡಿಕೆ) ಉದುರುವುದು ಇತ್ಯಾದಿ ಸಮಸ್ಯೆಗಳು ಜಿಲ್ಲೆಯ ಅಡಿಕೆ ಕೃಷಿಕರನ್ನು ಬಾಧಿಸುತ್ತಿವೆ. ಬೇಸಗೆಯ ಕೊನೆಯಲ್ಲಿ ಬಿಸಿಲಿನ ಝಳಕ್ಕೆ ಎಳೆ ಅಡಿಕೆ ಉದು ರುವುದು, ಜೂನ್‌ -ಜುಲೈ ತಿಂಗಳ ಸತತ ತೀವ್ರ ಮಳೆಯಿಂದಾಗಿ ಕೊಳೆರೋಗ ಉಂಟಾಗುತ್ತದೆ.
2016-17ರಲ್ಲಿ ಈ ಯೋಜನೆ ಆರಂಭವಾದಾಗ ಜಿಲ್ಲೆಯ ರೈತರಿಗೆ ಅದರ ಪ್ರಯೋಜನದ ಅರಿವು ಅಷ್ಟಾಗಿ ಇರಲಿಲ್ಲ. ಬಳಿಕ ಮನದಟ್ಟಾಗತೊಡಗಿದ್ದು, ಮೂರು ವರ್ಷಗಳಿಂದ ನೋಂದಣಿ ಮಾಡಿಕೊಳ್ಳು ವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲೇ ಗರಿಷ್ಠ ವಿಮಾ ಮೊತ್ತವೂ ದ.ಕ. ಜಿಲ್ಲೆಯಲ್ಲೇ ವಿತರಣೆಯಾಗುತ್ತಿದೆ.
ಜಿಲ್ಲೆಯಲ್ಲಿ 2020-21 ಸಾಲಿ ನಲ್ಲಿ 100 ಕೋ.ರೂ. ಮೊತ್ತ ವಿಮಾ ರೂಪದಲ್ಲಿ ವಿತರಣೆಯಾಗಿದೆ, 2021-22ರ ಸಾಲಿನ ಮೊತ್ತ ಇನ್ನೂ ವಿತರಣೆ ಆಗಿಲ್ಲ, ಆದರೆ ಈ ವರ್ಷದ ಮೊತ್ತ 150 ಕೋಟಿ ರೂ. ಮೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹವಾಮಾನ ಆಧರಿತ ವಿಮೆ ವ್ಯವಸ್ಥಿತ, ವೈಜ್ಞಾನಿಕ ಯೋಜನೆ. ಇದರಲ್ಲಿ ಮಳೆಯ ತೀವ್ರತೆ, ಮುಂದುವರಿದ ಮಳೆ ಮತ್ತು ತಾಪಮಾನ ಎಂಬ 3 ವಿಭಾಗಗಳಡಿ ನಷ್ಟ ಅಂದಾಜಿಸಲಾಗುತ್ತದೆ.

ಎಸ್ ಸಿ .ಎಸ್ ಟಿ ಗೆ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ

0

ಎಸ್​ಸಿ, ಎಸ್​ಟಿಗೆ ಮೀಸಲಾತಿ ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.

ಈ ಹಿನ್ನೆಲೆಯಲ್ಲಿ ಬರೋಬ್ಬರಿ 241 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ವಾಲ್ಮೀಕಿ ಸ್ವಾಮೀಜಿಗಳು ಧರಣಿಯನ್ನ ಕೈಬಿಟ್ಟಿದ್ದಾರೆ.

ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ಬೆನ್ನಲ್ಲೇ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದ ಪ್ರತಿಭಟನೆಯು ಸ್ಥಗಿತಗೊಂಡಿದೆ.

241 ದಿನಗಳಿಂದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿದ್ದರು.
ನಂತರ ವಾಲ್ಮೀಕಿ ಸಮಾಜದ ಮುಖಂಡರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅಭಿನಂದಿಸಿದರು.

ಈ ವೇಳೆ ಮುಖ್ಯಮಂತ್ರಿಗಳಿಗೆ ಸ್ವಾಮೀಜಿ ಸಿಹಿ ತಿನ್ನಿಸಿ ಖುಷಿಪಟ್ಟರು.

ಮುಸ್ಲೀಂ ಸಂಖ್ಯೆ ಭಾರತದಲ್ಲಿ ಕುಸಿಯುತ್ತಿದೆ-ಓವೈಸಿ

0

ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಧಾರ್ಮಿಕ ಅಸಮತೋಲನ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಾಗಪುರದಲ್ಲಿ ನಡೆದ ಸಾಂಪ್ರದಾಯಿಕ ವಿಜಯದಶಮಿ ಆಚರಣೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ʻನೀವು ಆತಂಕಪಡಬೇಡಿ. ದೇಶದ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ನಾವು ಹೆಚ್ಚು ಕಾಂಡೋಮ್​ ಬಳಸುತ್ತೇವೆ. ಈ ಬಗ್ಗೆ ಮಾತ್ರ ಮೋಹನ್​ ಭಾಗವತ್​ ಅವರು ಮಾತನಾಡುವುದಿಲ್ಲʼ ಎಂದು ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜನಸಂಖ್ಯೆಗೆ ಸಂಪನ್ಮೂಲಗಳು ಬೇಕು. ಸಂಪನ್ಮೂಲಗಳನ್ನು ನಿರ್ಮಿಸದೆ ಅದು ಬೆಳೆದರೆ ಅದು ಹೊರೆಯಾಗುತ್ತದೆ. ಜನಸಂಖ್ಯೆಯನ್ನು ಆಸ್ತಿ ಎಂದು ಪರಿಗಣಿಸುವ ಇನ್ನೊಂದು ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಎಲ್ಲರಿಗೂ ಜನಸಂಖ್ಯಾ ನೀತಿಯ ಮೇಲೆ ಕೆಲಸ ಮಾಡಬೇಕಾಗಿದೆ’ ಎಂದು ಮೋಹನ್ ಭಾಗವತ್ ಸಲಹೆ ನೀಡಿದ್ದರು.

ಕೆನರಾ ಬ್ಯಾಂಕ್ ನಿಂದ ವಿಶೇಷ ನಿಶ್ಚಿತಠೇವಣಿ ಯೋಜನೆ

0

ಕೆನರಾ ಬ್ಯಾಂಕ್ 666 ದಿನಗಳ ಅವಧಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪರಿಚಯಿಸಿದ್ದು, ಅದು ಶೇ.7.50 ಬಡ್ಡಿದರವನ್ನು ಒದಗಿಸುತ್ತದೆ.
ಹೌದು, ಈ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7% ಬಡ್ಡಿದರವನ್ನು ನೀಡುತ್ತಿದೆ.

ಆದರೆ, ಹಿರಿಯ ನಾಗರಿಕರು ಈ ಸ್ಥಿರ ಠೇವಣಿ ಯೋಜನೆಯಲ್ಲಿ 7.5% ಬಡ್ಡಿಯನ್ನು ಪಡೆಯುತ್ತಾರೆ. ಈ ವಿಶೇಷ ಅವಧಿಯ ಠೇವಣಿ ಯೋಜನೆಯು 2 ಕೋಟಿ ರೂ.ಗಿಂತ ಕಡಿಮೆ ಮೊತ್ತವಾಗಿದೆ.

ಕೆನರಾ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಹೊಸ 666 ದಿನಗಳ ಅವಧಿಯ ಯೋಜನೆಯನ್ನು ಪ್ರಾರಂಭಿಸುವ ಕುರಿತು ತಿಳಿಸುವ ಇನ್ಫೋಗ್ರಾಫಿಕ್ ಅನ್ನು ಹಂಚಿಕೊಂಡಿದೆ. ಅದರಲ್ಲಿ ʻಈಗ ನಿಮ್ಮ ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯಿರಿ! 666 ದಿನಗಳವರೆಗೆ ಹೂಡಿಕೆ ಮಾಡುವ ಮೂಲಕ 7.50% ಬಡ್ಡಿಯನ್ನು ನೀಡುವ ಕೆನರಾ ವಿಶೇಷ ಠೇವಣಿ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತಿದೆʼ ಎಂದು ಮಾಹಿತಿ ನೀಡಿದೆ.

ರೆಪೋ ಲಿಂಕ್ಡ್ ಲೆಂಡಿಂಗ್ ದರ (ಆರ್‌ಎಲ್‌ಎಲ್‌ಆರ್) ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಇತರ ಬ್ಯಾಂಕ್‌ಗಳ ನಂತರ ಹೆಚ್ಚಿಸಲು ಬ್ಯಾಂಕ್ ಈ ಹಿಂದೆ ಘೋಷಿಸಿತು. ಪರಿಷ್ಕೃತ ದರವು ಅಕ್ಟೋಬರ್ 7, 2022 ರಿಂದ ಜಾರಿಗೆ ಬಂದಿದೆ.

ಬ್ಯಾಂಕ್ ಎಲ್ಲಾ ಅವಧಿಗಳಲ್ಲಿ MCLR ಮತ್ತು RLLR ಅನ್ನು ಹೆಚ್ಚಿಸಿದೆ. ಆರ್‌ಬಿಐ ಕೆಲವು ದಿನಗಳ ಹಿಂದೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಹಬ್ಬದ ಸೀಸನ್‌ಅನ್ನು ಆಚರಿಸುತ್ತಿರುವ ಕೆನರಾ ಬ್ಯಾಂಕ್ ಗೃಹ ಸಾಲ ಮತ್ತು ಕಾರು ಸಾಲಗಳ ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದೆ. ಇದಲ್ಲದೆ, ಬ್ಯಾಂಕ್ ದಾಖಲಾತಿ ಮತ್ತು ಸಂಸ್ಕರಣಾ ಶುಲ್ಕಗಳ ಮೇಲೆ ಸಂಪೂರ್ಣ ಮನ್ನಾವನ್ನು ನೀಡುತ್ತಿದೆ.

ಗ್ರಾಹಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ವೈಯಕ್ತಿಕ ಸಾಲಗಳ ತ್ವರಿತ ಅನುಮೋದನೆಯನ್ನು ಪಡೆಯಬಹುದು. ಕಡಿಮೆ EMI, ಆಕರ್ಷಕ ಬಡ್ಡಿದರಗಳು ಈ ಯೋಜನೆಯ ಪ್ರಯೋಜನಗಳಾಗಿವೆ.