ಉತ್ತರ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದ ಕಾತ್ರಾ-ಬನಿಹಾಲ್ ನಿಲ್ದಾಣಗಳಲ್ಲೂ ಜೋಡಿಸುವ ಪ್ರಮುಖ ಸುರಂಗಮಾರ್ಗದ ಕಾಮಗಾರಿಯನ್ನು ಮುಕ್ತಾಯಗೊಳಿಸಿದೆ. ಉಧಮ್ ಪುರ , ಶ್ರೀನಗರ, ಬಾರಮುಲ್ಲಾ, ರೈಲ್ವೆ ಸಂಪರ್ಕ ಯೋಜನೆಯ ಮುಕ್ತಾಯಗೊಂಡ ಬಳಿಕ ಈ ಸುರಂಗಕ್ಕೆ ಭಾರತೀಯ ರೈಲ್ವೆಯ ಅತಿ ಉದ್ದದ ಸುರಂಗ ಎಂಬ ಮಾನ್ಯತೆ ಲಭಿಸಲಿದೆ.
ಈ ಸುರಂಗವು 12.75 ಕಿ.ಮೀ. ಉದ್ದವಿದೆ. ಬನಿಹಾಲ್ -ಕಾಜಿಗುಂಡ್ ನಡುವಿನ 11.20 ಕಿ.ಮೀ ಉದ್ದದ ಸುರಂಗವು ಈವರೆಗಿನ ಅತಿ ಉದ್ದದ ಸುರಂಗವಾಗಿದೆ. ಉಧಮ್ ಪುರ- ಶ್ರೀನಗರ,-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಲ್ಲಿ 272 ಕಿ.ಮೀ. ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಆ ಪೈಕಿ ಕಾತ್ರ ಬನಿಹಲ್ ಸುರಂಗ ಮಾರ್ಗ ಸೇರಿದಂತೆ 111 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಕಾಮಗಾರಿ ಮುಕ್ತಾಯವಾಗಿರುವ 161 ಕಿ.ಮೀ. ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭ ವಾಗಿದೆ.
ಈ ಸುರಂಗ ಮಾರ್ಗ ನಿರ್ಮಾಣ ಸವಾಲಿನಿಂದ ಕೂಡಿತ್ತು. ಅನಿರೀಕ್ಷಿತವಾಗಿ ಕಂಡುಬಂದ ಜಲಮೂಲಗಳು, ಬಂಡೆಗಳ ಜಂತಿ ರಚನೆ ಮೊದಲಿದ್ದ ಭೌಗೋಳಿಕ ಪರಿಸ್ಥಿತಿಗಳು ಇಂಜಿನಿಯರ್ ಗಳ ತಾಂತ್ರಿಕ ಕೌಶಲ್ಯಕ್ಕೆ ಸವಾಲು ಒಡ್ಡಿದ್ದವು. ಅದನ್ನು ಎದುರಿಸಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಇಲಾಖೆ ತಿಳಿಸಿದೆ.