73 ನೇ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯಾಧಾರಿತ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಬಹುಮಾನ ಲಭಿಸಿದೆ.
ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಮತ್ತು ಅತ್ಯುತ್ತಮ ಕವಾಯಿತು ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಉತ್ತರಪ್ರದೇಶದ ಸ್ತಬ್ಧಚಿತ್ರಗಳು ಮೊದಲನೆ ಬಹುಮಾನ ಪಡೆದುಕೊಂಡಿದೆ. ಅತ್ಯುತ್ತಮ ಪೆರೇಡ್ ಮತ್ತು ಕವಾಯತ್ ವಿಜೇತರನ್ನು ತೀರ್ಮಾನಿಸಲು ಇದೇ ಮೊದಲ ಬಾರಿಗೆ ಆನ್ಲೈನ್ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯವನ್ನು ಕೇಳಲಾಗಿತ್ತು. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಹಾಗೂ ಸೇನಾಪಡೆಗಳ ಒಟ್ಟು 25 ಸ್ತಬ್ಧಚಿತ್ರಗಳನ್ನು ಪೆರೇಡ್ ನಲ್ಲಿ ಪ್ರದರ್ಶಿಸಲಾಗಿತ್ತು.
“ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ ಕರ್ನಾಟಕದ ಸ್ತಬ್ಧಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’ 2ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವ ನಮ್ಮೆಲ್ಲರನ್ನು ವೋಕಲ್ ಫಾರ್ ಲೋಕಲ್ ಆಗಲೂ ಪ್ರೇರೇಪಿಸಲಿ. ನಮ್ಮ ರಾಜ್ಯದ ಕರಕುಶಲ ಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ” ಎಂದು ಸಿಎಂ ಬೊಮ್ಮಾಯಿ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕರಕುಶಲ ಅಭಿವೃದ್ಧಿ ನಿಗಮವು ಹಿರಿಯ ಕುಶಲಕರ್ಮಿ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ರಾಜ್ಯದ ಸ್ತಬ್ಧಚಿತ್ರ ಸಿದ್ಧಗೊಳಿಸಿಗಿತ್ತು. ಈ ಸ್ತಬ್ಧಚಿತ್ರದಲ್ಲಿ ಕಾವೇರಿ ಎಂಪೋರಿಯಂನ ಆನೆ, ಉಡುಪಿಯ ಯಕ್ಷಗಾನ ಗೊಂಬೆಗಳು, ಬಿದಿರಿ ಕಲೆ, ನವಿಲಿನ ಮೂರ್ತಿ, ಬಾಗಿನ ಹಿಡಿದ ಕಮಲಾದೇವಿ ಚಟ್ಟೋಪಾಧ್ಯಾಯ, ಉಡುಪಿಯ ಉಪ್ಪುಂದದ ಯಕ್ಷಗಾನ ಗೊಂಬೆಗಳು ಹಾಗೂ ಕಿನ್ನಾಳ ಹುಡುಗಿ ಗೊಂಬೆಯನ್ನು ಒಳಗೊಂಡಿದೆ. ಸ್ತಬ್ಧಚಿತ್ರ ತಯಾರಿಕೆಯಲ್ಲಿ ಮೈಸೂರು ರೇಷ್ಮೆ, ಇಳಕಲ್ ಸೀರೆ, ಬಿದಿರು, ತಾಳೆ, ಬೆತ್ತ ಬಳಸಲಾಗಿತ್ತು.
‘ವಂದೇ ಭಾರತಂ’ ನೃತ್ಯ ತಂಡವು ವಿಶೇಷ ಬಹುಮಾನ ಪಡೆದಿದೆ. ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿ ನೃತ್ಯ ಪಟುಗಳು ಈ ತಂಡದಲ್ಲಿ ಭಾಗವಹಿಸಿದ್ದರು.
“ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರದಲ್ಲಿನ ಇಳಕಲ್ ಸೀರೆ ಕುರಿತಂತೆ ಕೆ-ಲೈವ್ ಮಾಧ್ಯಮವು ಇಳಕಲ್ ಸೀರೆಯ ತಯಾರಿಕೆಯ ವಿನ್ಯಾಸ ಕುರಿತಂತೆ ಯೂಟ್ಯೂಬ್ ವಿಶೇಷ ಕಾರ್ಯಕ್ರಮ” ನಿರ್ಮಿಸಿದ್ದನ್ನು ಸ್ಮರಿಸಬಹುದಾಗಿದೆ.
ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.