Saturday, November 28, 2026
Saturday, November 28, 2026

ಆಹಾರ ತಯಾರಿಕೆ: ಸಂಸ್ಕರಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಅಳವಡಿಕೆ ಕಡ್ಡಾಯ- ಡಾ.ಎಚ್.ಪಿ.ಎಸ್.ಮೈತ್ರಿ

Date:

Rotary Club Shivamogga ಸುರಕ್ಷಿತ ಆಹಾರ ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದ್ದು, ಆಹಾರದಿಂದ ಹರಡುವ ರೋಗಗಳು ಹಾಗೂ ಕಲುಷಿತತೆಯನ್ನು ತಡೆಗಟ್ಟಲು ಆಹಾರ ತಯಾರಿಕೆ, ಸಂಸ್ಕರಣೆ, ಸಂಗ್ರಹಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್. ಮೈತ್ರಿ ತಿಳಿಸಿದರು.

ಶಿವಮೊಗ್ಗ ನಗರದ ರಾಜೇಂದ್ರ ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ ‘ಆರೋಗ್ಯದಲ್ಲಿ ಆಹಾರ ಸುರಕ್ಷತೆಯ ಕ್ರಮಗಳು’ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಹಾರ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಬೇಗ ಹಾಳಾಗುವ ಆಹಾರ ಪದಾರ್ಥಗಳನ್ನು ತಕ್ಷಣವೇ ಫ್ರಿಡ್ಜ್‌ನಲ್ಲಿ ಸಂಗ್ರಹಿಸಬೇಕು. ಅವಧಿ ಮೀರಿದ ಆಹಾರವನ್ನು ಬಳಸಬಾರದು. ಸುರಕ್ಷಿತ ಕುಡಿಯುವ ನೀರು ಮತ್ತು ಗುಣಮಟ್ಟದ ಕಚ್ಚಾ ಪದಾರ್ಥಗಳನ್ನು ಮಾತ್ರ ಆಹಾರ ತಯಾರಿಕೆಗೆ ಬಳಸಬೇಕು ಎಂದು ಸಲಹೆ ನೀಡಿದರು.

ಆಹಾರದಲ್ಲಿರುವ ರೋಗಾಣುಗಳನ್ನು ನಾಶಪಡಿಸಲು ಸೂಕ್ತ ಉಷ್ಣಾಂಶದಲ್ಲಿ ಮತ್ತು ನಿಗದಿತ ಸಮಯದವರೆಗೆ ಬೇಯಿಸುವುದು ಮುಖ್ಯ. ಹಸಿ ಮಾಂಸ, ಕೋಳಿ, ಮೊಟ್ಟೆ ಹಾಗೂ ತಿನ್ನಲು ಸಿದ್ಧವಾಗಿರುವ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಆಹಾರ ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಅಡುಗೆ ಪಾತ್ರೆಗಳು, ಕತ್ತರಿಸುವ ಮಣೆಗಳು ಹಾಗೂ ಅಡುಗೆ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರವು ಆಹಾರದ ಗುಣಮಟ್ಟ ಹಾಗೂ ಪರವಾನಗಿಗಳನ್ನು ನಿಯಂತ್ರಿಸುತ್ತದೆ. ಕರ್ನಾಟಕದಲ್ಲಿ ಆಹಾರ ಸುರಕ್ಷತಾ ನಿಯಮಗಳ ಅನುಷ್ಠಾನ ಮತ್ತು ಸಾರ್ವಜನಿಕರ ಕುಂದುಕೊರತೆಗಳ ನಿರ್ವಹಣೆಯನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನೋಡಿಕೊಳ್ಳುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಮಾತನಾಡಿ, ಡಾ. ಮೈತ್ರಿ ಅವರು ಅಶುಚಿತ್ವ, ಕಲುಷಿತ ನೀರಿನ ಬಳಕೆ ಹಾಗೂ ಹಳೆಯ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುತ್ತಿದ್ದ ಆಹಾರ ಮಳಿಗೆಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಕೆಲವು ಹೋಟೆಲ್‌ಗಳನ್ನು ಮುಚ್ಚಲು ಆದೇಶಿಸಿದ್ದಾರೆ ಎಂದು ತಿಳಿಸಿದರು.

ನಗರದ ಪ್ರಮುಖ ಹೋಟೆಲ್‌ಗಳು, ಬೇಕರಿಗಳು, ಜ್ಯೂಸ್ ಸೆಂಟರ್‌ಗಳು ಹಾಗೂ ವಿದ್ಯಾರ್ಥಿ ನಿಲಯಗಳ ಮೇಲೆ ದಿಢೀರ್ ತಪಾಸಣೆ ನಡೆಸಿ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಅಡಿಕೆ ಗೋದಾಮುಗಳ ಮೇಲೆಯೂ ದಾಳಿ ನಡೆಸಿ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ ಮಿಶ್ರಣ ಮಾಡಿರುವ ಶಂಕೆಯ ಮೇರೆಗೆ ಮಾದರಿಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದರು.

Rotary Club Shivamogga ಸಭೆಯಲ್ಲಿ ಡಾ. ಮೈತ್ರಿ ಅವರು ಆಹಾರ ಸುರಕ್ಷತೆಯ ವಿವಿಧ ಆಯಾಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡುವುದರ ಜೊತೆಗೆ ರೋಟರಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೆಮನೆ, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ್, ಮಾಜಿ ಸಹಾಯಕ ಗವರ್ನರ್ ರೋಟೇರಿಯನ್ ಜಿ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಎನ್.ಎಚ್. ಅರುಣ್ ದೀಕ್ಷಿತ್, ಕೃಷ್ಣಮೂರ್ತಿ, ನಿಕಟಪೂರ್ವ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್. ಮೈತ್ರಿ, ರವಿಪ್ರಕಾಶ್ ಕಾಳಾಚಾರ್, ಕೇಶವಪ್ಪ, ಡಾ. ರವಿಪ್ರಕಾಶ್, ಕೆ.ಟಿ. ಗುರುಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು, ರೋಟರಿಯನ್ಸ್, ಆನ್ಸ್ ಹಾಗೂ ಇನ್ನರ್ ವೀಲ್‌ನ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahachetana Natyaalaya ಮೊದಲ ಅಂತಾರಾಷ್ಟ್ರೀಯ ನೃತ್ಯಪ್ರದರ್ಶನ: ಕಲಾರಸಿಕರ ಮನಸೂರೆಗೈದ ಸಹಚೇತನ ನಾಟ್ಯಾಲಯ

ದುಬೈನಲ್ಲಿ ನಡೆದ ಗಲ್ಫ್ ರಾಷ್ಟ್ರಗಳ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ 'ದುಬೈ...

D.K. Shivakumar ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ- ಡಿ.ಕೆ.ಶಿವಕುಮಾರ್.

D.K. Shivakumar ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ...

U. T. Khader ಆಶಾ ಕಾರ್ಯಕರ್ತೆಯರ ನ್ಯಾಯಬದ್ಧ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ- ಆರೋಗ್ಯ ಸಚಿವ ಯು.ಟಿ.ಖಾದರ್

U. T. Khader ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ವೇತನ ಹೆಚ್ಚಳದ...