12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಸಾಹಿತ್ಯದ ಆಶಯಗಳಿಗೆ ಧಕ್ಕೆ ತರುವಂತಹ ಅಂಶಗಳು ವಿವಾದಿತ ‘ಬಸವ ಮಂಟಪ’ ಕೃತಿಯಲ್ಲಿವೆ ಎಂಬ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರಿಯ ಬಸವ ದಳ ಟ್ರಸ್ಟ್, ಕೃತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ರಾಷ್ಟ್ರಿಯ ಬಸವ ದಳ ಟ್ರಸ್ಟ್ (ರಿ.) ಶಿವಮೊಗ್ಗ ವತಿಯಿಂದ ಮುಖ್ಯಮಂತ್ರಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.
ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ಶರಣರು. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸುವುದರಿಂದ ಬಸವಾನುಯಾಯಿಗಳ ಧಾರ್ಮಿಕ ಹಾಗೂ ಸಾಮಾಜಿಕ ಭಾವನೆಗಳಿಗೆ ನೋವುಂಟಾಗುತ್ತದೆ ಎಂದು ಟ್ರಸ್ಟ್ ಮನವಿಯಲ್ಲಿ ತಿಳಿಸಿದೆ.
ಬಸವಣ್ಣನವರ ತತ್ವಾದರ್ಶಗಳು ಮತ್ತು ವಚನ ಸಾಹಿತ್ಯದ ಗೌರವವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ವಿವಾದಿತ ಕೃತಿಯಲ್ಲಿರುವ ಆಕ್ಷೇಪಾರ್ಹ ಅಂಶಗಳ ಕುರಿತು ಪರಿಶೀಲನೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಲಾಗಿದೆ.
