Klive Editorial ಬಹಳ ಪ್ರಮುಖ ವಿಚಾರವೀಗ ಬಿಸಿಬಿಸಿ ಚರ್ಚೆಯ ಬಿಂದುವಾಗಿದೆ.
ಶಿವಮೊಗ್ಗೆಗೆ ವಿಮಾನ ನಿಲ್ದಾಣ ಬಂದಾಗ ಪಕ್ಷಾತೀತವಾಗಿ ನಿಟ್ಟುಸಿರು ಬಿಟ್ಟರು.
ಆದರೆ ಈಗ ಅದು ತಾಂತ್ರಿ ಕಾರಣಗಳಿಂದ unserved ಆಗುವ ಸ್ಥಿತಿತಲುಪಿದೆ. ಇದಕ್ಕೆ ಯಾರು ಹೊಣೆ ಎಂಬ ಬಗ್ಗೆ ಚರ್ಚೆ,ಪರಸ್ಪರ ಕೆಸರೆರಚಾಟ ನಡೆಯುತ್ತಿದೆಯೇ ವಿನಾ ಫಲಿತಾಂಶ ಶೂನ್ಯ.
ಈ ಪರಸ್ಪರ ಮಾತಿನ ತಿವಿತದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋದದ್ದು, ರಾಘವೇಂದ್ರ ಮತ್ತು ವಿಜಯೇಂದ್ರ ಮಾಧ್ಯಮದೆದುರು ಸತ್ಯ ಹೇಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಏಕವಚನದಲ್ಲಿ ಹೇಳಿಕೆ ನೀಡಿದ ಪ್ರಸಂಗ ಢಾಳಾಗಿ ಮಾಧ್ಯಮಗಳಲ್ಲಿ ಹೊರಳಾಡುತ್ತಿದೆ.
ಸಂಸದ ರಾಘವೇಂದ್ರ ಅವರು , ಸಚಿವ ಮಧು ಬಂಗಾರಪ್ಪನವರು ಸದಾ ಮಾತಿನಲ್ಲಿ ಪ್ರಯೋಗಿಸುವ “ಪುಗಸಟ್ಟೆ ” ಪದದ ಬೇಕಾಬಿಟ್ಟಿ ಉಪಯೋಗದ ಬಗ್ಗೆ
ಖಂಡಿಸಿ ಮಾತಾಡಿದ್ದಾರೆ.
ಮತ್ತೋರ್ವ ಸಚಿವ ಎಂ.ಬಿ.ಪಾಟೀಲರ ಮಾತಿಗೂ ಸಂಸದ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ “ನ್ಯೂಸ್” ನೆಂಜಿಕೊಳ್ಳುವ ಉಪ್ಪಿನ ಕಾಯಿ ಮಾತ್ರ ಆಗಿದೆ. ಮಾಧ್ಯಮಗಳು ನಿರೀಕ್ಷಿಸುವದು ಪರಸ್ಪರ ಮಾತಿನ ಕಾದಾಟ, ಮಾತಿನ ವೈಖರಿ, ಕೊಂಕು ಹೋಲಿಕೆಗಳನ್ನಲ್ಲ. ಜನತೆಗೆ ಸಿಗಬೇಕಾಗಿರುವ ಸೌಲಭ್ಯಗಳ ನ್ಯಾಯ ಅಷ್ಟೆ.
ಮಾಜಿ ಸಿಎಂ ಬಂಗಾರಪ್ಪನವರ ಬಡವರ ಪ್ರೀತಿ ಯಾರೂ ಪ್ರಶ್ನಿಸಲಾಗದು. ಹಾಗೆಯೇ ಶಿವಮೊಗ್ಗಕ್ಕೆ ಅಭಿವೃದ್ಧಿಯ ಕಳೆ ತಂದ ಮಾಜಿ ಸಿಎಂ ಯಡಿಯೂರಪ್ಪನವರ
ರಾಜಕೀಯ ಸಂಕಲ್ಪವನ್ನೂ ಅಷ್ಟೇ ತೂಕದಿಂದ ಕಾಣಬೇಕು.
ಈ ಬಗ್ಗೆ ಸಂಸದರು ಬಳಸಿದ ವಾಕ್ಯ,ಪದಗಳು ಸೌಜನ್ಯಯುತವಾಗಿವೆ. ಆದರೆ ಉಸ್ತುವಾರಿ ಸಚಿವರು
ಯಾಕೋ ಬೇಸತ್ತು ಮಾತಾಡಿದಂತೆ ಭಾಸವಾಗುತ್ತಿದೆ.
ಏಕವಚನ ಪ್ರಯೋಗ ಯಾರೂ ಮಾಡಬಾರದು. ಅದನ್ನ ಸಚಿವರು ಮನಗಾಣಬೇಕು.
ಏಕೆಂದರೆ ಸಚಿವರು ಒಂದು ಶಿಕ್ಷಣ ಇಲಾಖೆಯ ಪ್ರಾತಿನಿಧಿಕ ಸಂಕೇತ.
ಈಗಾಗಲೇ ಯುವಸಂಸತ್ತು, ಯುವ ವಿಧಾನ ಸಭೆ ಮುಂತಾದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ .
ಅಂತಹ ಸಂದರ್ಭಗಳಿಗೆ ಒಳ್ಳೆಯ ಮಾದರಿಗಳಾಗಿ ಸಚಿವರು ಸಂಸದರು, ಶಾಸಕರು ಶೋಭಿಸಬೇಕು.
ಮಾನ್ಯ ಮಧು ಬಂಗಾರಪ್ಪನವರು ಅದೃಷ್ಟವಂತರು. ಮತ್ತೆ ಸಂಪುಟ ಪುನಾರಚನೆಯಲ್ಲಿ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಈಗ ಮನಸ್ಸು ವಿಶಾಲವಾಗಲಿ. ಎಲ್ಲರ ಸಣ್ಣತನಗಳನ್ನೂ ಕ್ಷಮಿಸುವ ಔದಾರ್ಯತಾಳಿದರೆ.
ಅವರ ವರ್ಚಸ್ಸು ಇಮ್ಮಡಿಯಾಗುತ್ತದೆ.
Klive Special Article ಉಸ್ತುವಾರಿತನಕ್ಕೆ ತನ್ನದೇ ಸ್ಥಳೀಯ ಔನ್ನತ್ಯವಿದೆ. ತಂದೆಯವರ ಪೂರ್ಣ ಆಶೀರ್ವಾದದಿಂದ ಅವರಿಗೆ ಭವಿಷ್ಯವಿದೆ.
ಜಿಲ್ಲೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಚಿಂತಿಸಿ, ನಿಮ್ಮ ಬ್ಯಾಟಿಂಗ್ ಆ ಕಡೆಯಿರಲಿ.
ಎಷ್ಟು ಮಂದಿ ಸಚಿವರು ಬಂದು ಹೋದರು. ಸಮಸ್ಯೆಗಳು ಜಟಿಲವಾಗಿವೆ.
ಯುವಜನತೆಯ
ಐಕಾನ್ ಆಗಲು ಅವಕಾಶವಿದೆ.
ಮಾಜಿ ಸಚಿವ ಹರತಾಳು ಹಾಲಪ್ಪನವರು ‘ ಚಡ್ಡಿ’
ಚರ್ಚೆ ಬಗ್ಗೆ ಸ್ಪಷ್ಟೀಕರಣ ಈಗ ಮಾಧ್ಯಮಗಳಲ್ಲಿ ಬಂದಿದೆ.
ಇಂತಹ ಕನಿಷ್ಠ ವಿಷಯಗಳೂ ಪತ್ರಿಕಾಗೋಷ್ಠಿಗೆ ವಸ್ತುಗಳಾಗಬಾರದು.
ಅವರೂ ವಿದ್ಯಾವಂತರು , ವಿವೇಚನಾಶೀಲರು.
ಮಾತು ಮಾತು ಮಥಿಸಿ , ಜನತೆಗೆ ಇಷ್ಟಾರ್ಥ ಪೂರೈಸುವ ನವನೀತ ನೀಡುವಲ್ಲಿ ಉತ್ಸುಕರು.
ಚರ್ಚೆ ನಡೆಯಲಿ. ತಾರ್ಕಿಕ ಅಂತ್ಯವಿರಬೇಕು.
ನಾಯಕರ ಮಾತಿನ ಗುದ್ದಾಟದಲ್ಲಿ ಜನತಾ ಜನಾರ್ದನನಿಗೆ ಲಾಭವಾಗುವಂತಹ ಹಂತಕ್ಕೆ ಮುಟ್ಟಬೇಕು.
ಆದರೆ ದುರಂತವೆಂದರೆ ಇಲ್ಲಿ ಮಾಧ್ಯಮಗಳಿಗೆ ಗೋಷ್ಠಿಗಳು “ಜಗಳದ ಜಗುಲಿ” ಗಳೇ ಆಗುತ್ತಿವೆ.
ಒಬ್ಬರ ಆರೋಪಕ್ಕೆ ಮತ್ತೊಬ್ಬರ ಉತ್ತರ.
ಇದು ಮುಗಿಯದ ವಾಗ್ಯುದ್ಧ.
ಇದರಿಂದ ಯಾರಿಗೆ ಪ್ರಯೋಜನ. ತೆರಿಗೆ ಹಣದಲ್ಲಿ ನಡೆಯಬೇಕಾದ ಸಮಾರಂಭಗಳೆಲ್ಲ
ಸಂಘರ್ಷಣೆಯ ವೇದಿಕೆಗಳಾಗುತ್ತಿರುವ ಬೆಳವಣಿಗೆ ಸಾಧುವಲ್ಲ.
ಈಗ ಮತದಾರರು ಬಹಳ ಬುದ್ಧಿವಂತರಿದ್ದಾರೆ.
ನಿಮಗಮ ನಿಮ್ಮ ವೈಯಕ್ತಿಕ ವಿಚಾರಗಳನ್ನ ಮಾಧ್ಯಮಗಳೆದುರು
ಬಯಲುಮಾಡಿ ಬೆತ್ತಲಾಗದಿರಿ.
ಏಕೆಂದರೆ ಸಾಮಾನ್ಯರನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳೇ ಖಂಡಾಬಟ್ಟೆಯಿವೆ.
ಇಂಥವುಗಳ ನಡುವೆ
ರಾಜಕೀಯ ನಾಯಕರು ಪರಸ್ಪರ ವಾಗ್ಯುದ್ಧ ನಡೆಸುತ್ತಾ ಕೂತರೆ ನಿಮ್ಮ ಐದುವರ್ಷದ ಅಮೂಲ್ಯ ಸಮಯ ಹಾಳಾಗುತ್ತದೆ. ಒಂದಿಷ್ಟು ಮೌಲ್ಯಯುತ ಕೊಡುಗೆ ಬಗ್ಗೆ ವಿವೇಚಿಸಿರಿ ಎಂದು ಯಾರಾದರೂ
ಸಲಹೆ ನೀಡುವ ಸಂದರ್ಭ ಬಂದುಬಿಟ್ಟಿದೆ.
ಒಟ್ಟಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಸ್ಥಿತಿ ಎಮರ್ಜೆನ್ಸಿ ವಾರ್ಡಿನಲ್ಲಿರುವ ಕೂಸಾಗಿದೆ. ಇನ್ನೂ ಹೇಳಬೇಕೆಂದರೆ
” ಐಸಿಯು” ನಲ್ಲಿದೆ.
ಕೇವಲ” ಸೀ ಯು..ಬೈ ಬೈ ” ಆಗಬಾರದು.
ಘನತೆವೆತ್ತ ಸಚಿವರೆ, ಸಂಸದರೆ , ಈಗಲಾದರೂ ವಿಮಾನ ನಿಲ್ದಾಣದ ನಿರ್ವಹಣೆ ಕೇಂದ್ರ ಸರ್ಕಾರಕ್ಕೆ ವಹಿಸಿಬಿಡಿ.
ಸದ್ಯಕ್ಕೆ ವಿಜಿಎಫ್ ಬಿಡುಗಡೆ ಮಾಡಿ.
ಇನ್ನುಮುಂದೆ ರಾಜ್ಯದಲ್ಲಿ,ಕೇಂದ್ರದಲ್ಲಿ ಯಾವ್ಯಾವ ಸರ್ಕಾರಗಳು ಆಡಳಿತಕ್ಕೆ ಬರುತ್ತವೆಯೋ ಯಾರಿಗೂ ಗೊತ್ತಿಲ್ಲ.
ಬಜೆಟ್ಟಿನ ಹಣ ಈಗಲೇ ಗ್ಯಾರಂಟಿ ಅಂತಹ ಬಾಬ್ತಿಗೆ ಪೂರೈಕೆ ಆಗುತ್ತಿದೆ.
ಅದೊಂದು ರಾವಣನ ಹೊಟ್ಟೆ.
ಆದ್ದರಿಂದ
ಸುಮ್ಮನೆ “ಎಎಐ” ಕೊರಳಿಗೆ ತಗುಲಿಸಿ
ವಿವಾದಕ್ಕೆ ರಾಜ್ಯ ಸರ್ಕಾರ ಅಂತ್ಯ ಹೇಳಬೇಕು . ಅದೇ ಈಗ ಪರಿಹಾರ.
